ಬೆಂಗಳೂರಿನ ಮಂದಿ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ 'ಕ್ಯೂ' ನಿಲ್ಲಬೇಕಾಗಿಲ್ಲ!
ಬೆಂಗಳೂರು, ಆಗಸ್ಟ್ 22: ಬೆಂಗಳೂರಿನಲ್ಲಿ ಜನರು ಸರ್ಕಾರಿ ಆಸ್ಪತ್ರೆಗಳಲ್ಲಿ ಚೀಟಿ ಪಡೆದುಕೊಳ್ಳುವುದಕ್ಕಾಗಿ ಉದ್ದನೆಯ ಸಾಲಿನಲ್ಲಿ ನಿಂತುಕೊಳ್ಳಬೇಕಾಗಿಲ್ಲ. ಅದರ ಬದಲಿಗೆ ಆನ್‌ಲೈನ್ ಮೂಲಕವೇ ವೈದ್ಯರ ಭೇಟಿಗೆ ಸಮಯವನ್ನು ನಿಗದಿಪಡಿಸಿಕೊಳ್ಳಬಹುದು. ಇಂಥದೊಂದು ವ್ಯವಸ್ಥೆ ಜಾರಿಗೊಳಿಸುವುದಾಗಿ ಸ್ವತಃ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ವಾರ್ಡ್‌ಗೆ ಭೇಟಿ ನೀಡಿದ ಸಚಿವ ಡಾ.ಕೆ.ಸುಧಾಕರ್, ರೋಗಿಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನದಟ್ಟಣೆ ತಗ್ಗಿಸಲು ವೈದ್ಯರ ಭೇಟಿಗೆ ಆನ್‌ಲೈನ್‌ನಲ್ಲಿ ಅಥವಾ ಮೊಬೈಲ್ ಮೂಲಕ ಸಮಯ ನಿಗದಿ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಒಂದು ತಿಂಗಳೊಳಗೆ ಡಿಜಿಟಲ್ ಹೆಸರು ನೋಂದಣಿ ಹಾಗೂ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತರಲಾಗುವುದು. ತದನಂತರದಲ್ಲಿ ತಾಲೂಕು ಆಸ್ಪತ್ರೆಗಳಲ್ಲೂ ಇದೇ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಈ ಕುರಿತು ವಿಶೇಷ ವರದಿಗಾಗಿ ಮುಂದೆ ಓದಿ.

ವೈದ್ಯರಿಗಾಗಿ ಬೆಂಗಳೂರಿಗರು ಕ್ಯೂ ನಿಲ್ಲಬೇಕಾಗಿಲ್ಲ
ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನದಟ್ಟಣೆ ಕಡಿಮೆ ಮಾಡಬೇಕಿದೆ. ವೈದ್ಯರ ಭೇಟಿಗೆ ಆನ್‌ಲೈನ್‌ನಲ್ಲಿ ಅಥವಾ ಮೊಬೈಲ್ ಸಂದೇಶ ಮೂಲಕ ಸಮಯ ನಿಗದಿ ಮಾಡಿಕೊಳ್ಳುವ ವ್ಯವಸ್ಥೆ ತರಲು ಸೂಚಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಜನರ ಕ್ಯೂ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ವೈದ್ಯರ ಸಮಯ ನಿಗದಿ, ಯಾವ ವೈದ್ಯರು ಎಂಬಿತ್ಯಾದಿ ಮಾಹಿತಿಗಳನ್ನು ಮೊಬೈಲ್‌ಗೆ ಸಂದೇಶದ ಮೂಲಕ ಕಳುಹಿಸಲಾಗುತ್ತದೆ. ತಮಗೆ ನಿಗದಿಪಡಿಸಿರುವ ಸಮಯಕ್ಕೂ ಪೂರ್ವದಲ್ಲಿ ಯಾರೂ ಆಸ್ಪತ್ರೆಗೆ ಬಂದು ಕಾಯುವ ಅಗತ್ಯ ಇರುವುದಿಲ್ಲ. ಅದೇ ರೀತಿ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಜನರು ಬರುವ ಮೊದಲೇ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಇದರ ಜೊತೆಗೆ ಡಿಜಿಟಲ್ ಪಾವತಿ ಮಾಡುವ ವ್ಯವಸ್ಥೆ ತರಲಾಗುವುದು ಎಂದು ಹೇಳಿದರು.

ಸಿಬ್ಬಂದಿ ಕೊರತೆ ನೀಡಿಗಸು ನೇಮಕಾತಿಗಾಗಿ ಪ್ರಸ್ತಾವನೆ
ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ 51 ಹಾಸಿಗೆಗಳ ಐಸಿಯು ಇದ್ದು, ಕೋವಿಡ್ ಬಳಿಕ ಇಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲಾಗಿದೆ. ಇದಕ್ಕೆ ಪೂರಕವಾಗಿ ಅಗತ್ಯ ಸಿಬ್ಬಂದಿಯನ್ನು ನೀಡಲಾಗುವುದು. ಖಾಯಂ ಸಿಬ್ಬಂದಿ ನೇಮಕಕ್ಕಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ನೀಡಲಾಗುವುದು. ನಾಲ್ಕು ಆರ್ಥೊಪೆಡಿಕ್ ತಜ್ಞರು ಈ ಆಸ್ಪತ್ರೆಯಲ್ಲಿದ್ದರೂ 40 ಪ್ರೊಸೀಜರ್ ಮಾತ್ರ ನಡೆಯುತ್ತಿದೆ. ಈ ಸಂಖ್ಯೆಯನ್ನು 100ಕ್ಕೆ ಏರಿಸಬೇಕು. ಅದೇ ರೀತಿ ಸಭೆ ನಡೆಸುವ ಮೂಲಕ ವಿವಿಧ ವಿಭಾಗಗಳ ನಡುವೆ ಸಮನ್ವಯತೆ ತರಬೇಕು ಎಂದು ಸೂಚಿಸಲಾಗಿದೆ ಎಂದರು.

ಆಸ್ಪತ್ರೆ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಅನುದಾನ
ಜಯನಗರ ಆಸ್ಪತ್ರೆಯ ಚಿಕಿತ್ಸೆಯಲ್ಲಿ ಲೋಪವಿರುವ ಬಗ್ಗೆ ಸಾರ್ವಜನಿಕರು ಯಾವುದೇ ದೂರು ನೀಡಿಲ್ಲ. ಐದು ವರ್ಷದಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವ ರೋಗಿಯೊಬ್ಬರು, ಯಾವುದೇ ಹಣ ನೀಡದೆ ಚಿಕಿತ್ಸೆ ಪಡೆಯುತ್ತಿದ್ದೇನೆ ಹಾಗೂ ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ಚಾವಣಿ ಸೇರಿದಂತೆ ಕೆಲವೆಡೆ ದುರಸ್ತಿ ಕಾರ್ಯಗಳು ನಡೆಯಬೇಕಿದೆ. ಈ ಹಿನ್ನೆಲೆ ಸುಮಾರು 5 ಕೋಟಿ ರೂ.ನಷ್ಟು ಅನುದಾನ ಬೇಕಿದ್ದು, ಅದನ್ನು ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.
ಜಯನಗರ ಸರ್ಕಾರಿ ಆಸ್ಪತ್ರೆ ಎನ್‌ಕ್ಯೂಎಸ್ ಗುಣಮಟ್ಟವನ್ನು ಹೊಂದುವಂತೆ ಕ್ರಮ ವಹಿಸಬೇಕು. ಆ ಮೂಲಕ ಸರ್ಕಾರಿ ಸೇವೆಯ ಗುಣಮಟ್ಟ ಹೆಚ್ಚಿಸಬೇಕಿದೆ. ಈಗ ಪರಿಶೀಲನೆ ನಡೆಸಿದ ಬಳಿಕವೂ ಮತ್ತೊಮ್ಮೆ ಬಂದು ಪರಿಶೀಲನೆ ನಡೆಸಿ ಗುರಿ ತಲುಪಲಾಗಿದೆಯೇ ಎಂದು ಗಮನಿಸಲಾಗುವುದು. ರೋಗಿಗಳಿಗೆ ಚಿಕಿತ್ಸೆ ವಿಚಾರದಲ್ಲಿ ಸಮಾಧಾನವಿದೆ. ಪ್ರಸೂತಿ ವಿಭಾಗದಲ್ಲಿ ಕೆಲ ದೂರುಗಳಿದ್ದು, ಅದಕ್ಕಾಗಿ ಸ್ಪಷ್ಟ ಸೂಚನೆ ನೀಡಲಾಗಿದೆ. ಪ್ರತಿ ವಿಭಾಗ ಮುಖ್ಯಸ್ಥರಿಗೆ ನಿಗದಿತ ಗುರಿ ನೀಡಲಾಗಿದ್ದು, ಜನರು ಖಾಸಗಿ ಆಸ್ಪತ್ರೆಗಳಿಗೆ ಹೋಗದೆ ಇಲ್ಲಿಗೆ ಬರುವಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ರೋಗಿಗಳ ಕುಟುಂಬಕ್ಕೆ 1.58 ಕೋಟಿ ಕೊಟ್ಟ ಸರ್ಕಾರ
ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಹಣವನ್ನು ಪಡೆದುಕೊಂಡಿವೆ. ಒಂದು ಕಡೆ ರೋಗಿಗಳು ಮತ್ತೊಂದು ಕಡೆ ಸರ್ಕಾರದಿಂದಲೂ ಹಣ ತೆಗೆದುಕೊಂಡಿವೆ. ಇಂಥ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ, ಸರ್ಕಾರದಿಂದಲೇ ನೋಟಿಸ್ ಜಾರಿಗೊಳಿಸಲಾಗಿದೆ. ಅಂಥ ಆಸ್ಪತ್ರೆಗಳಿಂದ 1.58 ಕೋಟಿ ರೂಪಾಯಿ ಹಣವನ್ನು ಪಡೆದುಕೊಂಡು ರೋಗಿಗಳ ಕುಟುಂಬಕ್ಕೆ ವಾಪಸ್ ಕೊಡಲಾಗಿದೆ. ಸರ್ಕಾರವು ಇದೇ ಮೊದಲ ಬಾರಿಗೆ ಈ ರೀತಿಯ ಕ್ರಮವನ್ನು ತೆಗೆದುಕೊಂಡಿದೆ ಎಂದು ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.












Click it and Unblock the Notifications