ಕೇಂದ್ರ ಸರ್ಕಾರದಿಂದಲೇ ಬೆಂಗಳೂರಿನ ಬೀದಿಗಳಲ್ಲಿ ರಿಯಾಯಿತಿಗೆ ಈರುಳ್ಳಿ ಮಾರಾಟ: ಎಷ್ಟಿದೆ ಬೆಲೆ?
ಬೆಂಗಳೂರು, ಸೆಪ್ಟಂಬರ್ 23: ರಾಜಧಾನಿ ಬೆಂಗಳೂರಿನಲ್ಲಿ ತರಕಾರಿ ಬೆಲೆ ಏರಿಕೆ ಆಗಿದ್ದರ ಮಧ್ಯೆ ಈರುಳ್ಳಿ ಪ್ರಿಯರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಈರುಳ್ಳಿ ಕೆ.ಜಿ. ಚಿಲ್ಲರೆ ಬೆಲೆ 55 ರಿಂದ 65 ರೂಪಾಯಿವರೆಗೆ ಇದೆ. ಫ್ರೆಶೋದಲ್ಲಿ ಕೆ.ಜಿ. ಈರುಳ್ಳಿಗೆ 79 ರೂಪಾಯಿ ಇದೆ. ಇದೆಲ್ಲ ಗಮನಿಸಿರುವ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಇಂದಿನಿಂದ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದೆ.
ಹೌದು, ಬೆಂಗಳೂರಿನಿಂದ ಇಂದಿನಿಂದ (ಸೆ.23) ಮೊಬೈಲ್ ವ್ಯಾನ್ ಮೂಲಕ ಕೇಂದ್ರ ಸರ್ಕಾರ ರಿಯಾಯಿತಿ ದರಕ್ಕೆ ಈರುಳ್ಳಿ ಮಾರಾಟ ಮಾಡಲಿದೆ ಎಂದರೆ ನೀವು ನಂಬಲೇಬೇಕು. ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಅಡಿಯಲ್ಲಿ ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಕಾರ್ಯ ನಿರ್ವಹಿಸುತ್ತಿದೆ. ಇದರ ಒಂದು ಶಾಖೆ ಬೆಂಗಳೂರಿನಲ್ಲಿದೆ.

ಕೇಂದ್ರದ ನಿರ್ದೇಶನದಂತೆ ಈರುಳ್ಳಿ ಮಾರಾಟ
ಈ ಶಾಖೆಯು ಕೇಂದ್ರ ಸರ್ಕಾರದ ನಿರ್ದೇಶನದ ಅನುಸಾರ ರಿಯಾಯಿತಿ ದರದಲ್ಲಿ ಬೆಲೆ ಸ್ಥಿರೀಕರಣ ನಿಧಿ (ಪಿಎಸ್ಎಫ್- PSF) ಅಡಿಯಲ್ಲಿ ಈರುಳ್ಳಿ ಮಾರಾಟವನ್ನು ಬೆಂಗಳೂರಿನಲ್ಲಿ ಇಂದಿನಿಂದ ಆರಂಭಿಸಿದೆ.
ಗ್ರಾಹಕರಿಗೆ ಅನುಕೂಲ ಆಗುವಂತೆ 35 ರೂಪಾಯಿಗೆ ಒಂದು ಕಿಲೋ ಈರುಳ್ಳಿಯನ್ನು ಈ ಮೊಬೈಲ್ ವ್ಯಾನ್‌ಗಳಲ್ಲಿ ಮಾರಾಟ ಮಾಡಲಾಗುವುದು. ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರಿಕೆಯ ವರದಿಗಳ ಹಿನ್ನಲೆಯಲ್ಲಿ, ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಈರುಳ್ಳಿ ಸಿಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರ ಈ ರೀತಿಯ ಕ್ರಮಕ್ಕೆ ಮುಂದಾಗಿದೆ.

ಬೇರೆ ಬೇರೆ ರಾಜ್ಯಗಳಿಂದ ಈರುಳ್ಳಿ ಆಮದು
ಈ ಯೋಜನೆಯಡಿ ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದಿಂದ ಖರೀದಿಸಿದ ಈರುಳ್ಳಿ ಸೋಮವಾರದಿಂದ ಬೆಂಗಳೂರು ನಗರದಲ್ಲಿ ಮಾರಾಟವಾಗಲಿದೆ. ಬೆಂಗಳೂರಿನ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರಿಯಾಯಿತಿ ದರದಲ್ಲಿ ಈರುಳ್ಳಿಯನ್ನು ಸಾರ್ವಜನಿಕರು ಖರೀದಿಸಬಹುದಾಗಿದೆ.
NCCF ನಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನಾಲ್ಕು ಸಂಚಾರಿ ಈರುಳ್ಳಿ ವ್ಯಾನ್‌ಗಳನ್ನು ಮಂಜೂರು ಮಾಡಲಾಗಿದೆ. ಈರುಳ್ಳಿಯನ್ನು ವಿತರಿಸಲು ಒಟ್ಟು 112 ಮೊಬೈಲ್ ವ್ಯಾನ್‌ಗಳನ್ನು ಬಳಸಲಾಗುವುದು. ಈರುಳ್ಳಿ ದರಗಳು ಸಹಜ ಸ್ಥಿತಿಗೆ ಬರುವವರೆಗೂ ಮಾರಾಟ ಮುಂದುವರಿಯಲಿದೆ ಎಂದು ಶಾಖಾ ವ್ಯವಸ್ಥಾಪಕ ರವಿಚಂದ್ರ ಮಾಹಿತಿ ನೀಡಿದರು.
50 ಹೊಸ ವ್ಯಾನ್ ಸೇರ್ಪಡೆ
ಸದ್ಯ ಗುರುವಾರದವರೆಗೆ ವೇಳೆಗೆ 112 ಮೊಬೈಲ್ ವ್ಯಾನ್ ಈರುಳ್ಳಿ ಮಾರಾಟ ಮಾಡಲಿದ್ದು, ನಂತರ ಈ ವಾಹನಗಳ ಸಂಖ್ಯೆಗೆ 50 ಹೊಸ ವ್ಯಾನ್‌ಗಳನ್ನು ಸೇರ್ಪಡೆ ಮಾಡಲಾಗುವುದು. ಈರುಳ್ಳಿ ದರ ಕಡಿಮೆ ಆಗುವವರೆಗೂ ಈ ವ್ಯಾನ್‌ಗಳು ನಿಮ್ಮ ಏರಿಯಾಗಳಲ್ಲಿ ಸಂಚರಿಸಲಿವೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.
ಮೊಬೈಲ್ ವ್ಯಾನ್ ಮೂಲಕ ಈರುಳ್ಳಿ ಮಾರಾಟ ಇಂದು ಮಧ್ಯಾಹ್ನ 12.30ಕ್ಕೆ ನಗರ ನಂದಿನಿ ಬಡಾವಣೆ, ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್, ನಂ.27, 1 ಮುಖ್ಯ ರಸ್ತೆ, ಬೆಂಗಳೂರು, ಇಲ್ಲಿ ಮಾರಾಟಕ್ಕೆ ಚಾಲನೆ ನೀಡಲಾಗಿದೆ. ಗ್ರಾಹಕರು ಕಡಿಮೆ ಬೆಲೆಯ ಗುಣಮಟ್ಟದ ಈರುಳ್ಳಿಯನ್ನು ಖರೀದಿಸಿ ಈ ಉಪಕ್ರಮದ ಪ್ರಯೋಜನ ಪಡೆದುಕೊಳ್ಳಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಮೊಬೈಲ್ ವ್ಯಾನ್‌ಗಳಲ್ಲಿ ಪ್ರತಿ ಕೆಜಿಗೆ 35 ರೂ.ಗೆ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಬೆಲೆ ಸ್ಥಿರೀಕರಣ ನಿಧಿ (PSF) ಅಡಿಯಲ್ಲಿ ಈ ಉಪಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ಮಾತ್ರವಲ್ಲದೆ, ಮುಂದಿನ ಕೆಲವೇ ದಿನಗಳಲ್ಲಿ ಕರ್ನಾಟಕದಾದ್ಯಂತ ಈ ಸೇವೆ ವಿಸ್ತರಣೆಯಾಗಲಿದೆ.












Click it and Unblock the Notifications