ಅಂಗಾಂಗ ದಾನ ಮಾಡಿ ನಾಲ್ವರಿಗೆ ಮರು ಜೀವ ನೀಡಿದರು
ಬೆಂಗಳೂರು, ಜುಲೈ 26 : ಒಂದೇ ವಾರದಲ್ಲಿ ಎರಡನೇ ಬಾರಿಗೆ ಜೀವಂತ ಹೃದಯ ಸಾಗಣೆಗೆ ಉದ್ಯಾನ ನಗರಿ ಬೆಂಗಳೂರು ಸಾಕ್ಷಿಯಾಗಿದೆ. ಸಂಚಾರಿ ಪೊಲೀಸರ ನೆರವಿನೊಂದಿಗೆ ಭಾನುವಾರ ಬೆಳಗ್ಗೆ ಬನ್ನೇರುಘಟ್ಟ ರಸ್ತೆಯ ಸಾಗರ್ ಆಸ್ಪತ್ರೆಯಿಂದ ಹೊಸೂರು ರಸ್ತೆಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ಜೀವಂತ ಹೃದಯವನ್ನು ತೆಗೆದುಕೊಂಡು ಹೋಗಲಾಗಿದೆ.
ಬೆಂಗಳೂರಿನ ವಿನಾಯಕ ಟ್ರಾವೆಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಚೆನ್ನೈ ಮೂಲದ ಇಳವರಸನ್ (32) ತಮ್ಮ ಹೃದಯ, ಕಿಡ್ನಿ, ಕಣ್ಣು, ಲೀವರ್ ದಾನ ಮಾಡಿದ್ದಾರೆ. ನಾರಾಯಣ ಹೃದಯಾಲಯದಲ್ಲಿ ಜೀವಂತ ಹೃದಯವನ್ನು ಅಳವಡಿಸುವ ಶಸ್ತ್ರ ಚಿಕಿತ್ಸೆ ನಡೆಯುತ್ತಿದೆ. [ಸಾವಿನ ಬಳಿಕ ಮತ್ತೊಂದು ಜೀವಕ್ಕೆ ಚೇತನ ತುಂಬಿದ ಚೇತನ್]

ಜುಲೈ 22ರಂದು ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಇಳವರಸನ್ ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ಘೋಷಿಸಿದ್ದರು. ಆದ್ದರಿಂದ, ಕುಟುಂಬ ವರ್ಗದವರು ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದ್ದರು. ಇಂದು ಬೆಳಗ್ಗೆ ಬನ್ನೇರುಘಟ್ಟ ರಸ್ತೆಯ ಸಾಗರ್ ಆಸ್ಪತ್ರೆಯಿಂದ ಜೀವಂತ ಹೃದಯ ಸೇರಿದಂತೆ ವಿವಿಧ ಅಂಗಾಂಗಗಳನ್ನು ಬೇರೆ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. [ಅಪಘಾತದಲ್ಲಿ ಮಡಿದ ಜೀವನ್ ಫರ್ನಾಂಡೀಸ್ ಆತ್ಮ ಅಮರ]
ಹೃದಯ, ಕಿಡ್ನಿ, ಕಣ್ಣು ದಾನ : ಇಳವರಸನ್ ಅವರ ಹೃದಯವನ್ನು ನಾರಾಯಣ ಹೃದಯಾಲಯಕ್ಕೆ ತೆಗೆದುಕೊಂಡು ಹೋಗಲಾಗಿದೆ. ಕಿಡ್ನಿಯನ್ನು ಸಾಗರ್ ಮತ್ತು ವಿಕ್ಟೋರಿಯಾ ಆಸ್ಪತ್ರೆಗೆ ದಾನ ಮಾಡಲಾಗಿದೆ. ಲಯನ್ಸ್ ಕ್ಲಬ್ ಎರಡು ಕಣ್ಣುಗಳನ್ನು ನೀಡಲಾಗಿದ್ದರೆ, ಬಿಜಿಎಸ್ ಆಸ್ಪತ್ರೆಗೆ ಲಿವರ್ ನೀಡಲಾಗಿದೆ.
ಒಂದೇ ವಾರದಲ್ಲಿ ಎರಡನೇ ದಾನ : ಗುರುವಾರ ಮಂಡ್ಯ ಮೂಲದ 22 ವರ್ಷದ ಚೇತನ್ ಹೃದಯವನ್ನು ದಾನ ಮಾಡಿದ್ದರು. ಸಾಗರ್ ಆಸ್ಪತ್ರೆಯಿಂದ ಹೊಸೂರು ರಸ್ತೆಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ಜೀವಂತ ಹೃದಯವನ್ನು ತೆಗೆದುಕೊಂಡು ಹೋಗಲಾಗಿತ್ತು. ಇಂದು ಮತ್ತೊಂದು ಹೃದಯ ಸಾಗಟ ನಡೆದಿದೆ. ಒಂದೇ ವಾರದಲ್ಲಿ ಎರಡು ಹೃದಯ ದಾನಗಳಾಗಿವೆ.
ಹೃದಯ ದಾನದ ಪ್ರಕರಣಗಳು
* 2014ರಲ್ಲಿ ಎರಡು ಬಾರಿ ಬೆಂಗಳೂರಿನಿಂದ ಚೆನ್ನೈಗೆ ಜೀವಂತ ಹೃದಯವನ್ನು ಸಾಗಣೆ ಮಾಡಲಾಗಿತ್ತು
* 2015ರ ಜನವರಿಯಲ್ಲಿ ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಬಿಜಿಎಸ್ ಆಸ್ಪತ್ರೆಗೆ ಹೃದಯ ಸಾಗಣೆ ಮಾಡಲಾಗಿತ್ತು
* 2015ರ ಫೆ. 28ರಂದು ಬೆಂಗಳೂರಿನಿಂದ ಹೈದರಾಬಾದ್ ಜೀವಂತ ಹೃದಯವನ್ನು ಸಾಗಣೆ ಮಾಡಲಾಗಿತ್ತು
* 2015ರ ಏ.13ರಂದು ಮಂಗಳೂರಿನಿಂದ ಜೀವಂತ ಹೃದಯವನ್ನು ಬಿಜಿಎಸ್ ಆಸ್ಪತ್ರೆಗೆ ತೆಗೆದುಕೊಂಡು ಬರಲಾಗಿತ್ತು
* 2015ರ ಜುಲೈ 23ರಂದು ಚೇತನ್ ಹೃದಯವನ್ನು ದಾನ ಮಾಡಲಾಗಿತ್ತು.












Click it and Unblock the Notifications