ಬಸವನಗುಡಿಯಲ್ಲಿ ಧರೆಗುರುಳಿದ ಮರದ ಬೃಹತ್ ರೆಂಬೆ: ಐದು ವಾಹನಗಳು ಜಖಂ
ಬೆಂಗಳೂರು, ಏ.10 : ಹಳೆ ಮರವೊಂದರ ಬೃಹತ್ ರೆಂಬೆಯೊಂದು ಧರೆಗುರುಳಿ, ಎರಡು ಕಾರು ಸೇರಿದಂತೆ ಐದು ವಾಹನಗಳು ಜಖಂ ಆಗಿರುವ ಘಟನೆ ಬೆಂಗಳೂರಿನ ಬಸವನಗುಡಿಯ ಉಡುಪಿ ಗ್ರ್ಯಾಂಡ್ ಹೋಟೆಲ್ ಬಳಿ ಬುಧವಾರ ನಡೆದಿದೆ.
ಪ್ರತಿ ವರ್ಷವೂ ಮರಗಳು ಬಿದ್ದು ನಾಲ್ಕಾರು ಸಾವುಗಳನ್ನು ನೋಡಿದ ಮೇಲೆಯೇ ಬಿಬಿಎಂಪಿ ಎಚ್ಚೆತ್ತುಕೊಳ್ಳುತ್ತದೆ. ಪ್ರತಿ ವರ್ಷವೂ ಮಳೆಗಾಲ ಆರಂಭಕ್ಕೂ ಮುನ್ನವೇ ಸಣ್ಣಪುಟ್ಟ ಮಳೆಗೆ ಮರ, ರೆಂಬೆ-ಕೊಂಬೆಗಳು ವಾಹನ, ಪಾದಚಾರಿಗಳ ಮೇಲೆ ಬಿದ್ದು ಮೃತಪಡುತ್ತಿರುವ ಘಟನೆ ನೋಡುತ್ತಲೇ ಇದ್ದೇವೆ.
ಮರದ ರೆಂಬೆಯೊಂದಕ್ಕೆ ಗೆದ್ದಲು ಹಿಡಿದು ಬೀಳುವ ಸಾಧ್ಯತೆ ಇದೆ ಎಂದು ಬಿಬಿಎಂಪಿಗೆ ಹಲವಾರು ಬಾರಿ ದೂರು ನೀಡಿದ್ದರೂ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಕಾರಿನ ಮಾಲಿಕರು ಆಕ್ಷೇಪ ವ್ಯಕ್ತಪಡಿಸಿದರು. ಅದೃಷ್ಟವಶಾತ್ ಆ ಸ್ಥಳದಲ್ಲಿ ಯಾರೂ ನಿಂತಿರಲಿಲ್ಲವಾದ್ದರಿಂದ ಯಾರೂ ಗಾಯಗೊಂಡಿಲ್ಲ.

ಬಿಬಿಎಂಪಿ ಅಧಿಕಾರಿಗಳು ಮಳೆಗಾಲ ಆರಂಭಕ್ಕೂ ಮುನ್ನ ಪ್ರತಿ ವರ್ಷವೂ ಹಳೆ ಮರಗಳನ್ನು ಗುರುತಿಸಿ ಅವುಗಳನ್ನು ಕಡಿಯುವುದು, ಬೀಳುವಂತಿರುವ ರೆಂಬೆಗಳನ್ನು ಕತ್ತರಿಸುವುದು ಇನ್ನಿತರೆ ಕೆಲಸವನ್ನು ಮಾಡುತ್ತೇವೆ ಎಂದು ಹೇಳುತ್ತದೆ ಆದರೆ ಮಳೆಗಾಲ ಆರಂಭವಾಗಿ ಹಲವಾರು ಮರಗಳು ಬಿದ್ದು ಸಾರ್ವಜನಿಕರಿಗೆ ತೊಂದರೆಯಾದ ನಂತರವೇ ಎಚ್ಚೆತ್ತುಕೊಳ್ಳುತ್ತದೆ.

ಈಗಾಗಲೇ ಹಳೆ ಮರಗಳು ಬೀಳಲು ಆರಂಭಿಸಿದೆ, ಹಳೆ ಮರ ಎನ್ನುವ ಕಾರಣ ಮಾತ್ರವಲ್ಲ ಗೆದ್ದಲು ಹಿಡಿಯುವುದು, ಅತಿ ಹೆಚ್ಚು ರೆಂಬೆಗಳನ್ನು ಹೊಂದಿರುವುದರಿಂದ ಭಾರಕ್ಕೂ ಕೂಡ ಮರ ಬಿದ್ದಿರುವ ಸಾಧ್ಯತೆ ಇದೆ.

ಒಂದೊಮ್ಮೆ ಎಲ್ಲಾದರೂ ಮರಗಳು ಬಿದ್ದಿರುವುದು ಕಂಡುಬಂದಲ್ಲಿ ಬಿಬಿಎಂಪಿ ಹೆಲ್ಪ್‌ಲೈನ್ 08022221188 ಕರೆ ಮಾಡಬಹುದು. ಕಾರಣ ಏನೇ ಇರಲಿ ಇನ್ನೂ ಮಳೆಗಾಲ ಆರಂಭಕ್ಕೆ ಸ್ವಲ್ಪ ಕಾಲಾವಕಾಶವಿದೆ ಈಗಲಾದರೂ ಬಿಬಿಎಂಪಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಬೇಕು ಎನ್ನುವುದು ನಮ್ಮ ಮನವಿ.












Click it and Unblock the Notifications