Odisha Train Accident: ಕನ್ನಡಿಗರನ್ನು ಕರೆತರಲು ಹೊರಟ ಸಚಿವ ಸಂತೋಷ್ ಲಾಡ್: ಮೊಬೈಲ್‌ಗೆ ಸಂಪರ್ಕಿಸಲು ಮನವಿ
ಒಡಿಶಾದ ಬಾಲಸೋರ್ನಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಕಾರ್ಮಿಕ ಖಾತೆ ಸಂತೋಷ್ ಲಾಡ್ ಅವರಿಗೆ ಕನ್ನಡಿಗರನ್ನು ಕರೆತರಲು ಜವಾಬ್ದಾರಿ ನೀಡಿದ್ದು, ಅವರು ಚಾರ್ಟರ್ಡ್ ಫ್ಲೈಟ್‌ನಲ್ಲಿ ಒಡಿಶಾಗೆ ತೆರಳಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ತಂಡದ ಜೊತೆ ಸಂತೋಷ್ ಲಾಡ್ ಭುವನೇಶ್ವರಕ್ಕೆ ತೆರಳಿದ್ದು, ಕನ್ನಡಿಗರನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವುದಾಗಿ ಹೇಳಿದ್ದಾರೆ. ದೂರವಾಣಿ ಮೂಲಕ ಈಗಾಗಲೇ ರೈಲ್ವೆ ಡಿಐಜಿ ಶಶಿಕುಮಾರ್ ಜೊತೆ ಮಾತುಕತೆ ನಡೆಸಿದ್ದು, ಅಪಘಾತದಲ್ಲಿ ಗಾಯಗೊಂಡಿರುವ, ಸಿಲುಕಿರುವ ಕನ್ನಡಿಗರನ್ನು ಸಂಪರ್ಕಿಸಲಿದ್ದಾರೆ.

ಒಡಿಶಾಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೈಲು ದುರಂತದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು. ಸಂಜೆ 6-7 ಗಂಟೆ ವೇಳೆಗೆ ದುರಂತದ ಸ್ಥಳವನ್ನು ತಲುಪಲಿದ್ದೇನೆ, ಭುವನೇಶ್ವರದಿಂದ ದುರಂತ ನಡೆದ ಸ್ಥಳಕ್ಕೆ ರಸ್ತೆ ಮಾರ್ಗವಾಗಿ ತಲುಪಬೇಕು, ಸ್ಥಳಕ್ಕೆ ತೆರಳಿದ ಮೇಲೆ ಅಲ್ಲಿ ಸಿಲುಕಿರುವ ಕನ್ನಡಿಗರನ್ನು ಯಾವ ರೀತಿ ಕರೆತರಬೇಕು ಎಂದು ಯೋಚಿಸುತ್ತೇವೆ ಎಂದರು.
ಮೊಬೈಲ್ ನಂಬರ್ ಹಂಚಿಕೊಂಡ ಸಂತೋಷ್ ಲಾಡ್
ರೈಲು ದುರಂತದಲ್ಲಿ ಕನ್ನಡಿಗರಿಗೆ ಏನಾದರು ಗಾಯಗಳಾಗಿದ್ದರೆ ಸೂಕ್ತ ಚಿಕಿತ್ಸೆ ನೀಡಲಾಗುವುದು, ಅವರನ್ನು ವಾಪಸ್ ಕರೆತರಲು ವ್ಯವಸ್ಥೆ ಮಾಡಲಾಗುವುದು. ಪ್ರಾಥಮಿಕವಾಗಿ ಬಂದ ಮಾಹಿತಿ ಪ್ರಕಾರ ಕನ್ನಡಿಗರಿಗೆ ಯಾವುದೇ ಸಮಸ್ಯೆ ಆಗಿಲ್ಲ. ದುರಂತ ಸ್ಥಳದಲ್ಲಿರುವ ಕನ್ನಡಿಗರು ನನ್ನ ಮೊಬೈಲ್ ಸಂಖ್ಯೆ 9845739999 ಸಂಪರ್ಕಿಸಬಹುದು, ನಾನೇ ಖುದ್ದಾಗಿ ಕರೆ ಸ್ವೀಕರಿಸಿ ಮಾತನಾಡುತ್ತೇನೆ ಎಂದು ಹೇಳಿದರು.
ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ರೈಲು ದುರಂತದ ಹಿನ್ನೆಲೆಯಲ್ಲಿ ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸುವಂತೆ ಹಾಗೂ ಅವರಿಗೆ ಅಗತ್ಯ ನೆರವನ್ನು ನೀಡುವಂತೆ ಸಚಿವ ಸಂತೋಷ್ ಲಾಡ್ ಅವರಿಗೆ ಸೂಚಿಸಿದ್ದೇನೆ.
— Siddaramaiah (@siddaramaiah) June 3, 2023
ಘಟನೆಯಲ್ಲಿ ಗಾಯಗೊಂಡ ಅಥವಾ ಇತರೆ ಯಾವುದೇ ಸಮಸ್ಯೆ ಎದುರಿಸುತ್ತಿರುವ ಕನ್ನಡಿಗರ ರಕ್ಷಣೆಗೆ ನಾವು…
ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಬದ್ಧವಾಗಿದೆ
ರೈಲು ದುರಂತದಲ್ಲಿ ಸಿಲುಕಿರುವ ಕನ್ನಡಿಗರನ್ನು ರಕ್ಷಿಸಿ ಸುರಕ್ಷಿತವಾಗಿ ವಾಪಸ್ ಕರೆತರಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನಹರಿಸಲು ಹಾಗೂ ಅವರಿಗೆ ಅಗತ್ಯ ನೆರವು ನೀಡಲು ಸಂತೋಷ್ ಲಾಡ್ ಅವರನ್ನು ನೇಮಿಸಿರುವುದಾಗಿ ಸಿದ್ದರಾಮಯ್ಯ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಅಥವಾ ಯಾವುದೇ ಸಮಸ್ಯೆಗೆ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ನೆರವು ನೀಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 280 ಮೀರಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಈ ಮಾರ್ಗದಲ್ಲಿ ಚಲಿಸುವ ಎಲ್ಲಾ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.












Click it and Unblock the Notifications