Occupancy Certificate Fraud: ಆಂತರಿಕ ತನಿಖೆ ನಡೆಸಲು ಬಿಬಿಎಂಪಿ ಕಟ್ಟುನಿಟ್ಟಿನ ನಿರ್ದೇಶನ
ನಕಲಿ ಭೂಸ್ವಾಧೀನ ಪ್ರಮಾಣಪತ್ರ (OC) ನೀಡುತ್ತಿರುವ ದೂರುಗಳು ಹೆಚ್ಚಾಗಿ ಸಲ್ಲಿಕೆಯಾಗಿವೆ. ಹೀಗಾಗಿ ಬಿಬಿಎಂಪಿ ಆಂತರಿಕ ತನಿಖೆ ನಡೆಸುವಂತೆ ನಗರ ಯೋಜನಾ ವಿಭಾಗಕ್ಕೆ ಸೂಚನೆ ನೀಡಿದೆ.
ಬೆಂಗಳೂರು, ಜನವರಿ 31: ನಕಲಿ ಭೂಸ್ವಾಧೀನ ಪ್ರಮಾಣಪತ್ರ (OC) ನೀಡುತ್ತಿರುವ ದೂರುಗಳು ಹೆಚ್ಚಾಗಿ ಬರುತ್ತಿವೆ. ಈ ಹಿನ್ನಲೆಯಲ್ಲಿ ಪ್ರಕರಣದ ಆಂತರಿಕ ತನಿಖೆ ನಡೆಸುವಂತೆ ನಗರ ಯೋಜನಾ ವಿಭಾಗಕ್ಕೆ ಬಿಬಿಎಂಪಿ ಕಟ್ಟು ನಿಟ್ಟಿನ ನಿರ್ದೇಶನ ನೀಡಿದೆ.
ಇತ್ತೀಚೆಗೆ ನಗರದಲ್ಲಿ ನಕಲಿ ಆಕ್ಯುಪೆನ್ಸಿ ಸರ್ಟಿಫಿಕೇಟ್ (ಒಸಿ) ನೀಡಿಕೆ ಕುರಿತು ದೂರುಗಳ ಸಲ್ಲಿಕೆಯಾಗಿವೆ. ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡಲೇ ಆಂತರಿಕ ತನಿಖೆ ನಡೆಸುವಂತೆ ನಗರ ಯೋಜನಾ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಶಿವಾಜಿನಗರ ಸಮೀಪದಲ್ಲಿರುವ ಕೆಲವು ಪ್ರದೇಶಗಳಲ್ಲಿ ನಕಲಿ ಭೂಸ್ವಾಧೀನ ಪ್ರಮಾಣ ಪತ್ರ (Occupancy Certificate) ನೀಡಿರುವುದು ಬಿಬಿಎಂಪಿ ಗಮನಕ್ಕೆ ಬಂದಿದೆ. ಈ ಪ್ರಕರಣದಲ್ಲಿ ನಿವೃತ್ತ ಅಧಿಕಾರಿಯೊಬ್ಬರು ಶಾಮೀಲಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಸಂಬಂದ ಮುತುವರ್ಜಿ ವಹಿಸಿ ಬಿಬಿಎಂಪಿ ಅಗತ್ಯ ಪರಿಶೀಲನೆ ನಡೆಸಿದೆ ಎಂದು ತುಷಾರ್ ಗಿರಿನಾಥ್ ವಿವರಿಸದರು.

ಕೇವಲ ಶಿವಾಜಿನಗರ ಸುತ್ತಮುತ್ತಲು ಅಲ್ಲ ಬೆಂಗಳೂರಿನಾದ್ಯಂತ ಇದೇ ರೀತಿ ನಕಲಿ ಓಸಿ ನೀಡಲಾಗುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹ ಮಾಡಿದ್ದಾರೆ ಎಂದು ಮುಖ್ಯ ಆಯುಕ್ತರು ಹೇಳಿದರು. ನಕಲಿ ದಾಖಲೆ ನೀಡಿ ಇಲ್ಲವೇ ಪಡೆದು ನಿವೇಶನ/ ಮನೆ ಸ್ಥಾಪನೆ ಇನ್ನಿತರ ಕಾರ್ಯಚಟುವಟಿಕೆಯಂತಹ ಘಟನೆಗಳನ್ನು ಪರಿಶೀಲಿಸಲು ಮತ್ತು ವಿಚಾರಣೆ ನಡೆಸಲು ನಗರ ಯೋಜನೆ ಹೆಚ್ಚುವರಿ ನಿರ್ದೇಶಕರನ್ನು (ADTP) ಕೇಳಿದ್ದೇನೆ ಎಂದರು.
ಸದ್ಯ ನಗರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಮಾಣಪತ್ರಗಳನ್ನು ವ್ಯಕ್ತಿಗತವಾಗಿ ಅಂದರೆ ಕೈಯ್ಯಾರೆ ಅಧಿಕೃತ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗುತ್ತಿದೆ. ಈ ವೇಳೆ ವಂಚನೆ ಸಂಭವಿಸುವ ಸಾಧ್ಯತೆ ಇದೆ. ಇದರಿಂದ ಭವಿಷ್ಯದಲ್ಲಿ ತೊಂದರೆಯಾಗಬಹುದು. ಹೀಗಾಗಿ ವಂಚನೆ ಮತ್ತು ತೊಂದರೆ ತಡೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ವಯಂಚಾಲಿತ ವ್ಯವಸ್ಥೆ ತರಬೇಕಿದೆ ಎಂದು ಅವರ ಅಭಿಪ್ರಾಯಪಟ್ಟರು.

ಅಪಾರ್ಟ್‌ಮೆಂಟ್ ಓಸಿ ವಾಪಸ್
ಇತ್ತೀಚೆಗಷ್ಟೇ ಬೆಂಳೂರಿನ ಥಣಿಸಂದ್ರದ ಅಪಾರ್ಟ್‌ಮೆಂಟ್‌ಗೆ ನೀಡಿದ್ದ ಭುಸ್ವಾಧಿನ ಪ್ರಮಾಣಪತ್ರವನ್ನು ಬಿಬಿಎಂಪಿ ಹಿಂಪಡೆದಿತ್ತು. ವಸತಿ ಸಮುಚ್ಚಯದ ಡೆವಲಪರ್ ಕಂಪನಿಯು ನಕಲಿ ದಾಖಲೆಗಳನ್ನು ಸಲ್ಲಿಸಿದೆ ಎಂದು ತಿಳಿದು ಬಂದಿತ್ತು. ಈ ಕಾರಣಕ್ಕೆ ನೀಡಿದ್ದ ಓಸಿ ಹಿಂಪಡೆಯಲಾಗಿದೆ ಎಂದು ಬಿಬಿಎಂಪಿ ತಿಳಿಸಿತ್ತು. ಅಪಾರ್ಪ್‌ಮೆಂಟ್ ನಿರ್ಮಿಸಿದ್ದ ಡೆವಲಪರ್ ಕಂಪನಿಯು ಅಲ್ಲಿನ ನಿವಾಸಿಗಳ ಆತಂಕ ದೂರು ಮಾಡಲು ಪ್ರಯತ್ನಿಸಿತ್ತು. ನಾವು ಸರಿಯಾದ ದಾರಿಯಲ್ಲಿದ್ದೇವೆ. ಯಾವ ನಕಲಿ ದಾಖಲಾತಿ ನೀಡಿಲ್ಲ. ಈ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಎಂದು ತನ್ನ ನಿವಾಸಿಗಳಿಗೆ ಕಂಪನಿ ತಿಳಿಸಿತ್ತು.












Click it and Unblock the Notifications