ಬೆಂಗಳೂರಿಗರ ಮೇಲೆ ಮತ್ತಷ್ಟು ಟೋಲ್ ಹೊರೆ
ಬೆಂಗಳೂರು, ಮೇ 7 : ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಟೋಲ್ ದರ ಹೆಚ್ಚಳ ವಿವಾದ ಬಗೆಹರಿಯವು ಮುನ್ನವೇ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನಗರದ ಮತ್ತೊಂದು ರಸ್ತೆಯ ಟೋಲ್ ದರ ಹೆಚ್ಚಳಕ್ಕೆ ಮುಂದಾಗಿದೆ. ನೆಲಮಂಗಲ ಮತ್ತು ಹೊಸೂರು ರಸ್ತೆಯ ಟೋಲ್ ದರ ಹೆಚ್ಚಿಸಲು ಪ್ರಕ್ರಿಯೆ ಆರಂಭಗೊಂಡಿದೆ.
ಸಗಟು ಬೆಲೆ ಸೂಚ್ಯಂಕದ ನಿರ್ದೇಶನದಂತೆ ಪ್ರತಿ ವರ್ಷ ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ ಪರಿಷ್ಕರಣೆ ಮಾಡಲು ಅವಕಾಶವಿದ್ದು, ಅದರ ಅನ್ವಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೆಲಮಂಗಲ ಮತ್ತು ಹೊಸೂರು ರಸ್ತೆಯ ಟೋಲ್ ದರವನ್ನು ಶೇ 7-8ರಷ್ಟು ಹೆಚ್ಚಿಸಲು ಸಿದ್ಧತೆ ನಡೆಸುತ್ತಿದೆ. ಇದು ವಾಹನ ಸವಾರರ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆ ಇದೆ. [ದೇವನಹಳ್ಳಿ ಟೋಲ್ ಕೇಂದ್ರದತ್ತ ಕೈ ತೋರಿದ ರಾಜ್ಯ]

ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ನಿರ್ದೇಶನಕ್ಕೆ ಈ ಹೊಸೂರು ಮತ್ತು ನೆಲಮಂಗಲ ರಸ್ತೆ ಒಳಪಡಲಿದ್ದು, ವಾರ್ಷಿಕವಾಗಿ ಇದರ ಟೋಲ್ ದರವನ್ನು ಹೆಚ್ಚಳ ಮಾಡಲು ಅವಕಾಶವಿದೆ. ಸದ್ಯ ವಿವಾದ ಉಂಟಾಗಿರುವ ದೇವನಹಳ್ಳಿ ರಸ್ತೆ ಇನ್ನೂ ಡಬ್ಲ್ಯುಪಿಐ ವ್ಯಾಪ್ತಿಗೆ ಒಳಪಟ್ಟಿಲ್ಲ. ಆದರೆ, ಮೂಲಭೂತ ಸೌಕರ್ಯ ಒದಗಿಸುವ ಉದ್ದೇಶದಿಂದ ಟೋಲ್ ದರ ಹೆಚ್ಚಳ ಮಾಡಲಾಗಿದೆ. [ದೇವನಹಳ್ಳಿ ಟೋಲ್ ದರ ಎಷ್ಟಾಗಿದೆ?]
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ವ್ಯವಸ್ಥಾಪಕ ಎ.ಕೆ.ಮಾಥೂರ್, ಟೋಲ್ ದರ ಹೆಚ್ಚಳದ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, ಬಳ್ಳಾರಿ ರಸ್ತೆಯಲ್ಲಿ ಅಭಿವೃದ್ಧಿ ಮತ್ತು ಮೂಲಸೌಕರ್ಯದ ಕಾರಣದಿಂದ ಈಗ ಶುಲ್ಕ ಹೆಚ್ಚಿಸಲಾಗಿದೆ. ಇದು ಇನ್ನೂ ಡಬ್ಲ್ಯುಪಿಐ ನಿರ್ದೇಶನದಡಿ ಸೇರಿಲ್ಲ. ಸೇರಿದರೆ ಪ್ರತಿವರ್ಷ ಈ ಮಾರ್ಗದಲ್ಲಿಯೂ ಶೇ 7-8ರಷ್ಟು ಟೋಲ್ ಶುಲ್ಕ ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ.
ರಾಜ್ಯಕ್ಕೆ ಅಧಿಕಾರವಿಲ್ಲ : ದೇವನಹಳ್ಳಿ ಟೋಲ್ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ ಮಾಥೂರ್, ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ ನಿಗದಿಪಡಿಸುವ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಕೇಂದ್ರ ಸರ್ಕಾರ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ, ಹೆದ್ದಾರಿಯೊಂದಿಗೆ ಸಂಪರ್ಕಿಸುವ ಇತರ ರಸ್ತೆಗಳು ಮುಂತಾದ ಮಾನದಂಡಗಳನ್ನು ಆಧರಿಸಿ ಶುಲ್ಕ ನಿಗದಿ ಮಾಡುತ್ತದೆ ಎಂದು ಹೇಳಿದರು.












Click it and Unblock the Notifications