ನ.10ರಂದು ಮಹತ್ವದ ಸಭೆ: ರಾಜ್ಯ ಕೈಗಾರಿಕಾ ಇಲಾಖೆಯಿಂದ ಮಹತ್ತರ ಯೋಜನೆ ಜಾರಿ ಬಗ್ಗೆ ಚರ್ಚೆ
ಬೆಂಗಳೂರು, ನವೆಂಬರ್ 08: ಕರ್ನಾಟಕ ರಾಜ್ಯ ಸರ್ಕಾರ ಸಿಲಿಕಾನ್ ಸಿಟಿ ಬೆಂಗಳೂರಿನಿಂದ 50-80 ಕಿಲೋ ಮಿಟರ್ ದೂರದಲ್ಲಿ 'ನಾಲೆಡ್ಜ್, ಹೆಲ್ತ್ ಕೇರ್, ರೀಸರ್ಚ್ ಮತ್ತು ಇನ್ನೋವೇಷನ್ ಸಿಟಿ' ನಿರ್ಮಾಣಕ್ಕೆ ನಿರ್ಧರಿಸಿದೆ. ಈ ಸಂಬಂಧ ಇದೇ ಶುಕ್ರವಾರ ಕೈಗಾರಿಕೆ, ಐಟಿ ಬಿಟಿ ಸಚಿವರು ಸೇರಿದಂತೆ ಪ್ರಮುಖರಿಂದ ಮಹತ್ವದ ಸಭೆ ನಡೆಯಲಿದೆ. ಈ ವೇಳೆ ಯೋಜನೆ ಆರಂಭದ ಕುರಿತು ಕೆಲವು ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳು ಇವೆ.
ಶುಕ್ರವಾರದ ಕೈಗಾರಿಕೆ ಸಭೆ ಕುರಿತು ಮಾಹಿತಿ ಬುಧವಾರ ಮಾಹಿತಿ ನೀಡಿರುವ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು, ಬೆಂಗಳೂರು ಸಮೀಪದಲ್ಲಿ ಸುಮಾರು 2 ಸಾವಿರ ಎಕರೆ ವಿಶಾಲ ಪ್ರದೇಶದಲ್ಲಿ 'ನಾಲೆಡ್ಜ್, ಹೆಲ್ತ್ ಕೇರ್, ರೀಸರ್ಚ್ ಮತ್ತು ಇನ್ನೋವೇಶನ್ ಸಿಟಿ' (KHRI City) ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

ಈ ಸಂಬಂಧ ನ.10ರ ಶುಕ್ರವಾರ ಗಣ್ಯ ಉದ್ಯಮಿಗಳು, ವೈದ್ಯರು, ಶಿಕ್ಷಣ ತಜ್ಞರು ಮತ್ತಿತರರ ಮಹತ್ತ್ವದ ದುಂಡುಮೇಜಿನ ಸಭೆ ಆಯೋಜಿಸಲಾಗಿದೆ. ರಾಜ್ಯ ಭಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯು ಈ ಮೂಲಕ ಮಹತ್ವದ ಹೆಜ್ಜೆ ಇಡಲಿದೆ ಎಂದರು.
ಸಭೆಯಲ್ಲಿ ಪಾಲ್ಗೊಳ್ಳುವ ಖ್ಯಾತನಾಮರು
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಂದು ಬೆಳಗ್ಗೆ ಸಭೆ ನಡೆಯಲಿದೆ. ಸಭೆಯಲ್ಲಿ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಸಚಿವರು ಭಾಗವಹಿಸಲಿದ್ದಾರೆ. ಇವರಲ್ಲದೆ ಖ್ಯಾತನಾಮರಾದ ಕ್ರಿಸ್ ಗೋಪಾಲಕೃಷ್ಣನ್, ಡಾ.ದೇವಿ ಶೆಟ್ಟಿ, ಗೀತಾಂಜಲಿ ಕಿರ್ಲೋಸ್ಕರ್, ಪ್ರಶಾಂತ್ ಪ್ರಕಾಶ್, ಮಣಿಪಾಲ್ ಆಸ್ಪತ್ರೆಗಳ ಸಮೂಹದ ಡಾ.ದೀಪಕ್ ವೇಣುಗೋಪಾಲನ್, ಡಾ.ಶರಣ್ ಪಾಟೀಲ್, ನ್ಯಾಷನಲ್ ಸೆಂಟರ್ ಫಾರ್ ಬಯಲಾಜಿಕಲ್ ಸೈನ್ಸಸ್ ಸಂಸ್ಥೆಯ ನಿರ್ದೇಶಕ ಡಾ.ಎಲ್ ಎಸ್.ಶಶಿಧರ, ಏಕಸ್ ಉದ್ಯಮ ಸಂಸ್ಥೆಯ ಸಿಇಒ ಅರವಿಂದ ಮೆಳ್ಳಿಗೇರಿ, ಜೆರೋದಾ ಸಂಸ್ಥೆಯ ಸಹಸಂಸ್ಥಾಪಕ ನಿಖಿಲ್ ಕಾಮತ್, ಕಾಸರಗೋಡು ಉಲ್ಲಾಸ್ ಕಾರಂತ್, ಐಐಎಂಬಿ ನಿರ್ದೇಶಕ ಡಾ.ಹೃಷಿಕೇಶ್ ಕೃಷ್ಣನ್ ಭಾಗವಹಿಸಲಿದ್ದಾರೆ.
ಉದ್ದೇಶಿತ ಕೆ.ಎಚ್.ಆರ್.ಐ ಸಿಟಿಯಲ್ಲಿ ನಾಲ್ಕೂ ವಲಯಗಳಿಗೆ ಸೇರಿದ ಜಾಗತಿಕ ಮಟ್ಟದ ಪ್ರತಿಷ್ಠಿತ ಕಂಪನಿಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು ಬರಲಿವೆ. ತಮ್ಮ ಕಾರ್ಯ ಚಟುವಟಿಕೆ ಆರಂಭಿಸಲಿವೆ. ಇದರಿಂದ ಸಾವಿರಾರು ಸಂಖ್ಯೆಯಲ್ಲಿ ನೇರವಾಗಿ ಮತ್ತು ಇದಕ್ಕಿಂತ ಹಲವು ಪಟ್ಟುಗಳಲ್ಲಿ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದಕ್ಕಾಗಿ ಸ್ಪಷ್ಟವಾದ ನೀಲನಕ್ಷೆಯನ್ನು ರೂಪಿಸಲು ಮತ್ತು ನಿರ್ದಿಷ್ಟ ಕಾರ್ಯತಂತ್ರ ರೂಪಿಸಬೇಕಾದ ಅತ್ಯಗತ್ಯವಾಗಿದೆ. ಈ ಉದ್ದೇಶದಿಂದಲೇ ದುಂಡು ಮೇಜಿನ ಸಭೆ ಕರೆಯಲಾಗಿದೆ ಎಂದು ಸಚಿವರು ವಿವರಿಸಿದರು.
ಗುರಿ ಸಾಧನೆಗೆ ತಂಡಗಳ ರಚನೆ
ಯೋಜನೆ ಸಾಕಾರಕ್ಕೆ ಹಾಕಿಕೊಳ್ಳುವ ನಿರ್ದಿಷ್ಟ ಗುರಿಗಳನ್ನು ಸಾಧಿಸಲು ತಂಡಗಳನ್ನು ರಚಿಸಲಾಗುವುದು. ಒಟ್ಟಾರೆಯಾಗಿ ಯೋಜನೆಯು ರಾಜ್ಯಕ್ಕೆ ವಾಣಿಜ್ಯ ದೃಷ್ಟಿಯಿಂದ ಲಾಭದಾಯಕವಾಗಿ ಪರಿಣಮಿಸಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.
ಇನ್ನೂ ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ಸಹಭಾಗಿತ್ವವು ಪರಿಣಾಮಕಾರಿಯಾಗಿ ಇರುವಂತೆ ನೋಡಿಕೊಳ್ಳಬೇಕಾಗಿದೆ. ಇದಕ್ಕೆ ಉದ್ಯಮಿಗಳು ಸೇರಿದಂತೆ ನಾಲ್ಕೂ ವಲಯಗಳ ಸಾಧಕರ ಸಲಹೆ/ಅಭಿಪ್ರಾಯಗಳನ್ನು ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಬಿಸಿಜಿ ಪಾಲುದಾರ ಅಂಶುಲ್ ಗುಪ್ತ ಕೂಡ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಉದ್ದೇಶಿತ ಯೋಜನೆಯ ಬಗ್ಗೆ ವಿವರವಾದ ಪ್ರಾತ್ಯಕ್ಷಿಕೆಯನ್ನೂ ಸಾದರಪಡಿಸಲಾಗುವುದು ಎಂದು ಪಾಟೀಲ ಅವರು ಪ್ರಕಟಣೆಯಲ್ಲಿ ಹೇಳಿದರು.












Click it and Unblock the Notifications