ಈ ಬಾರಿಯ ಬೆಂಗಳೂರು ಸಾಹಿತ್ಯ ಉತ್ಸವಕ್ಕೆ ಚೇತನ್ ಭಗತ್ ಇಲ್ಲ
ಬೆಂಗಳೂರು, ಅಕ್ಟೋಬರ್ 11: ಖ್ಯಾತ ಇಂಗ್ಲಿಷ್ ಕಾದಂಬರಿಕಾರ ಚೇತನ್ ಭಗತ್ ಅವರು ಈ ಬಾರಿಯ ಪ್ರತಿಷ್ಠಿತ 'ಬೆಂಗಳೂರು ಸಾಹಿತ್ಯ ಉತ್ಸವ'ದಲ್ಲಿ ಪಾಲ್ಗೊಳ್ಳುತ್ತಿಲ್ಲ.
ಬಿಡುಗಡೆ ಆಗುತ್ತಿರುವ ತಮ್ಮ ಹೊಸ ಕಾದಂಬರಿ 'ದಿ ಗರ್ಲ್ ಇನ್ ರೂಮ್ 105' ನ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಕಾರಣ ಅಕ್ಟೋಬರ್ 27 ಮತ್ತು 28 ರಂದು ನಗರದ ಅಶೋಕ ಹೊಟೆಲ್‌ನಲ್ಲಿ ನಡೆಯಲಿರುವ ಸಾಹಿತ್ಯ ಉತ್ಸವಕ್ಕೆ ಗೈರಾಗಲಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಚೇತನ್ ಭಗತ್ ಅವರಿಗೂ #ಮಿಟೂ ಬಿಸಿ ತಗುಲಿತ್ತು. ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಕೆಲವು ಮಹಿಳೆಯರು ಸ್ಕ್ರೀನ್ ಶಾಟ್‌ಗಳನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದರು. ಈ ಆರೋಪ ಬಂದ ಕಾರಣ ಅವರನ್ನು ಸಾಹಿತ್ಯೋತ್ಸವಕ್ಕೆ ಕರೆದಿಲ್ಲವೇ ಎಂಬ ಅನುಮಾನವೂ ಮೂಡಿದೆ.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಉತ್ಸವದ ಆಯೋಜಕರು 'ಆರೋಪ ಬಂದ ಕಾರಣ ಕರೆದಿಲ್ಲ ಎನ್ನುವುದು ಸುಳ್ಳು, ಮೂರು ತಿಂಗಳ ಹಿಂದೆಯೇ ಅವರನ್ನು ಆಹ್ವಾನಿಸಿದ್ದೇವೆ, ಆದರೆ ಅವಿಶ್ರಾಂತ ಕಾರ್ಯಗಳು ಇರುವುದರಿಂದ ಅವರಿಗೆ ಬರಲಾಗುತ್ತಿಲ್ಲ' ಎಂದು ಹೇಳಿದ್ದಾರೆ.
ಚೇತನ್ ಭಗತ್ ಅವರು ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಭಾಗವಹಿಸುತ್ತಿಲ್ಲ ಎಂಬುದನ್ನು ಆಯೋಜಕರು ಅಧಿಕೃತವಾಗಿ ಇನ್ನೂ ಪ್ರಕಟಿಸಿಲ್ಲ. ಆದರೆ ಅವರು ಈ ಬಾರಿಯ ಉತ್ಸವಕ್ಕೆ ಗೈರಾಗುವುದಂತೂ ಪಕ್ಕಾ ಎನ್ನಲಾಗಿದೆ.
ಚೇತನ್ ಭಗತ್ ಅವರು ಮೂರು ವರ್ಷ ಸತತವಾಗಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಅವರು ಸಾಹಿತ್ಯ ಉತ್ಸವದ ಪ್ರಮುಖ ಆಕರ್ಷಣೆ ಸಹ ಆಗಿದ್ದರು.












Click it and Unblock the Notifications