ಆಟೋ, ಬೈಕ್, ಕಾರಲ್ಲಿ ಬಂದು ಮನೆಗಳನ್ನು ದೋಚುತ್ತಿದ್ದ!
ಬೆಂಗಳೂರು, ನವೆಂಬರ್ 09 : ಆಟೋ, ಬೈಕ್, ಕಾರುಗಳಲ್ಲಿ ಬಂದು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಚಂದರ್ ಅಲಿಯಾಸ್ ಆಂಥೋಣಿ ಎಂಬ ಆರೋಪಿಯನ್ನು ಬೆಂಗಳೂರಿನ ವಿವೇಕನಗರ ಪೊಲೀಸರು ಬಂಧಿಸಿದ್ದು, 32 ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಯಿಂದ 3 ಕೆಜಿ ಚಿನ್ನ ಮತ್ತು 80 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಾಗಿದೆ.
ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಅವರು ಚಂದರ್ ಬಂಧನದ ಕುರಿತು ಮಾಹಿತಿ ನೀಡಿದರು. ಕದ್ದ ಮಾಲನ್ನು ತನ್ನ ಇಬ್ಬರು ಪತ್ನಿಯರಿಗೂ ಹಂಚುತ್ತಿದ್ದ ಚಂದರ್, ಕದ್ದ ಹಣದಲ್ಲಿಯೇ ಮನೆಗೆ ಐಷಾರಾಮಿ ವಸ್ತುಗಳನ್ನು ಖರೀದಿಸಿದ್ದ. [ಸ್ವಂತ ಮನೆಗೆ ಕನ್ನ ಹಾಕಲು ಗೆಳೆಯನಿಗೆ ಕೀ ಕೊಟ್ಟಳು!]

ಚಂದರ್ ವಿರುದ್ಧ ವಿವೇಕನಗರ ಠಾಣೆಯಲ್ಲಿ 11, ಕೋರಮಂಗಲ ಠಾಣೆಯಲ್ಲಿ 7, ಅಶೋಕನಗರದಲ್ಲಿ 5, ವೈಯಾಲಿಕಾವಲ್‌ನಲ್ಲಿ 7, ಶೇಷಾದ್ರಿಪುರಂ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿದ್ದವು. ರಾತ್ರಿ ಯಾರೂ ಇಲ್ಲದ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಈತ, ಹಗಲಿನ ಹೊತ್ತಿನಲ್ಲಿಯೂ ಭಿಕ್ಷುಕರ ವೇಷ ಧರಿಸಿ ಒಬ್ಬರೇ ಇರುವ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ. [ಸಂಬಂಧಿಕರ ವಿಕೃತ ಸಂತೋಷಕ್ಕೆ ಬಲಿಯಾದ ಸಂಗೀತಾ]
ಕಳ್ಳತನವೇ ವೃತ್ತಿ : ಚಂದರ್ ಮೂಲತಃ ಕೆಜಿಎಫ್ ಮೂಲದವನು. ಮನೆಗಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಈತ ಕೆಲವು ವರ್ಷ ಜೈಲಿನಲ್ಲಿದ್ದ. ಬಿಡುಗಡೆಗೊಂಡ ನಂತರ ಬೆಂಗಳೂರಿಗೆ ಆಗಮಿಸಿ ಮಾರುತಿ ಸೇವಾನಗರದಲ್ಲಿ ವಾಸವಾಗಿದ್ದ ಚಂದರ್ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ. [ದರೋಡೆ ಮಾಡಿ ಮತ್ತೆ ಪಂಜರ ಸೇರಿದ ಪಾರಿವಾಳ ಮಂಜ]
ಚಂದರ್ ಹೆಸರಿನಲ್ಲಿ 4 ಅಂತಸ್ತಿನ ಮನೆ, 2 ಕಾರು, 2 ಬೈಕ್, 1 ಆಟೋ ರಿಕ್ಷಾವಿದೆ. ಆಟೋದಲ್ಲಿ ನಗರದಲ್ಲಿ ಸುತ್ತಾಟ ನಡೆಸುತ್ತಿದ್ದ ಈಗ ಯಾವ ಮನೆಯಲ್ಲಿ ಕಳ್ಳತನ ಮಾಡಬೇಕು ಎಂದು ಸಂಚು ರೂಪಿಸುತ್ತಿದ್ದ. ನಂತರ ರಾತ್ರಿ ಕಾರು, ಬೈಕ್ ಅಥವ ಆಟೋದಲ್ಲಿ ಹೋಗಿ ಮನೆಗಳನ್ನು ದೋಚುತ್ತಿದ್ದ.
ಬೆಂಗಳೂರಿನಲ್ಲಿ ನೆಲೆಸಿದ್ದ ಈತ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ. ಚಂದರ್ ಬಂಧನದಿಂದಾಗಿ 32 ಮನೆಗಳವು ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪೊಲೀಸರು ಆರೋಪಿಯಿಂದ 3 ಕೆಜಿ ಚಿನ್ನಾಭರಣ, 80 ಲಕ್ಷ ಬೆಳೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.












Click it and Unblock the Notifications