ದೇಗುಲ ಒತ್ತುವರಿಗೆ ಅವಕಾಶ ನೀಡಿದ 6 ಅಧಿಕಾರಿಗಳಿಗೆ ನೋಟೀಸ್: ಸಚಿವೆ ಶಶಿಕಲಾ ಜೊಲ್ಲೆ
ಬೆಂಗಳೂರು, ಸೆಪ್ಟೆಂಬರ್ 14: ರಾಜ್ಯದ ಮುಜರಾಯಿ ಇಲಾಖೆಯ ಅಡಿಯಲ್ಲಿರುವ ದೇವಸ್ಥಾನಗಳ ಭೂಮಿ ಒತ್ತುವರಿದಾರರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಅ ಜೊಲ್ಲೆ ತಿಳಿಸಿದ್ದಾರೆ. ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಸೇರಿದ ಜಮೀನು ಒತ್ತುವರಿ ತಡೆಗಟ್ಟಲು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದಾರೆ
ವಿಧಾನಪರಿಷತ್ತಿನ ಪ್ರಶ್ನೋತ್ತರ ಕಾರ್ಯಕಲಾಪದಲ್ಲಿ ಸದಸ್ಯರಾದ ಎನ್ ರವಿಕುಮಾರ್ ಪ್ರಶ್ನೆಗೆ ಉತ್ತರಿಸುವ ಸಂಧರ್ಭದಲ್ಲಿ ಈ ವಿಚಾರವನ್ನು ಹೇಳಿದರು. ಬೆಂಗಳೂರು ನಗರ ತಿಗಳರ ಪೇಟೆಯಲ್ಲಿರುವ ಶ್ರೀ ಧರ್ಮರಾಯ ಸ್ವಾಮಿ ದೇವಾಲಯವು ಪ್ರವರ್ಗ "ಬಿ" ವರ್ಗದ ಧಾರ್ಮಿಕ ಸಂಸ್ಥೆಯಾಗಿರುತ್ತದೆ. ಪ್ರಸ್ತಾವಿತ ದೇವಾಲಯವು ಬೆಂಗಳೂರು ನಗರ ನೀಲಸಂದ್ರ ಗ್ರಾಮದ ಸರ್ವೇ ನಂ 79 ರಲ್ಲಿ 15 ಎಕರೆ 12 ಗುಂಟೆ ವಿಸ್ತೀರ್ಣ, ಹೊಂಗಸಂದ್ರ ಗ್ರಾಮದ ಸರ್ವೇ ನಂ. 33 ರಲ್ಲಿ 16 ಎಕರೆ 25 ಗುಂಟೆ ಜಮೀನು ಕಂದಾಯ ದಾಖಲಾತಿಯಂತೆ ದೇವಸ್ಥಾನದ ಹೆಸರಿನಲ್ಲಿದೆ.
ಈ ಜಮೀನಿನಲ್ಲಿ ಅತಿಕ್ರಮವಾಗಿ 229 ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡಿವೆ. ಇದಕ್ಕೆ ಸಂಬಂಧಪಟ್ಟಂತೆ 13 ಜನರ ವಿರುದ್ದ ಕರ್ನಾಟಕ ಭೂಕಬಳಿಕೆ ನಿಷೇದ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅತಿಕ್ರಮಣಕಾರರ ಪರ ಸಲ್ಲಿಸಲಾಗಿದ್ದ ಬೆಂಗಳೂರಿನ 8ನೇ ಹೆಚ್ಚುವರಿ ಸಿಟಿ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣವು ವಜಾಗೊಂಡಿದ್ದು, ಅರ್ಜಿದಾರರು ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದಾರೆ. ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಇಲಾಖೆಯ ವತಿಯಿಂದ ಸೂಕ್ತ ವಾದವನ್ನು ಮಂಡಿಸಲಾಗುತ್ತಿದೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದರು.

80 ಲಕ್ಷ ರೂಪಾಯಿ ಮಂಜೂರು
ನೀಲಸಂದ್ರ ಗ್ರಾಮದಲ್ಲಿನ ಅನಧಿಕೃತ ಅತಿಕ್ರಮಣಗಾರರನ್ನು ತೆರವುಗೊಳಿಸಿ 9 ಎಕರೆ ಜಮೀನಿಗೆ ಕಾಂಪೌಂಡ್ ನಿರ್ಮಿಸಲು ಈಗಾಗಲೇ 80 ಲಕ್ಷ ರೂಪಾಯಿಗಳನ್ನು ಜಿಲ್ಲಾಧಿಕಾರಿಗಳಿಗೆ ಮಂಜೂರು ಮಾಡಲಾಗಿದೆ. ಆದರೆ, ಈ ಕಾಮಗಾರಿಯನ್ನು ಕೈಗೊಳ್ಳುವ ಕೆಲವು ತಾಂತ್ರಿಕ ಅಡಚಣೆಗಳಿದ್ದು, ಕಂದಾಯ ಸಚಿವರ ಗಮನಕ್ಕೆ ಈ ವಿಷಯವನ್ನು ತಂದಿದ್ದು ಶೀಘ್ರದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಖಾತೆ ನೊಂದಾಯಿಸದಂತೆ ನಿರ್ದೇಶನ
ಮುಜುರಾಯಿ ಇಲಾಖೆ ಮತ್ತು ವಕ್ಫ್ ಮಂಡಳಿದೆ ಸೇರಿರುವ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಮನೆಗಳಿಗೆ ವಿದ್ಯುತ್, ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಮಾಡದಂತೆ ಹಾಗೂ ಖಾತೆಯನ್ನು ನೊಂದಾಯಿಸದಂತೆ ಬಿಬಿಎಂಪಿ ಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ದೇವಸ್ಥಾನಗಳ ಆಸ್ತಿಗಳ ಒತ್ತುವರಿದಾರರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ
ದೇವಸ್ಥಾನಗಳ ಆಸ್ತಿಗಳು ದೇವಸ್ತಾನಗಳ ಹೆಸರಿನಲ್ಲೇ ಇರಬೇಕು. ದೇವಸ್ಥಾನಗಳ ಆಸ್ತಿಗಳನ್ನು ಸರ್ವೇ ಕಾರ್ಯವೂ ಭರದಿಂದ ಸಾಗಿದೆ. ಈ ಸರ್ವೇ ಕಾರ್ಯ ದ ವರದಿಯ ಆಧಾರದ ಮೇಲೆ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ತಿನಲ್ಲಿ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ.

6 ಅಧಿಕಾರಿಗಳಿಗೆ ನೋಟೀಸ್
ಧರ್ಮರಾಯ ದೇವಸ್ಥಾನದ ಜಮೀನು ಅತಿಕ್ರಮಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಕರ್ತವ್ಯಲೋಪ ಕಂಡು ಬಂದಿರುವ ಹಿನ್ನಲೆಯಲ್ಲಿ 6 ಅಧಿಕಾರಿಗಳಿಗೆ ನೋಟೀಸ್ ನೀಡಲಾಗಿದೆ. ಈಗಾಗಲೇ ಅತಿಕ್ರಮಣ ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ನೀಡಿದ ಅಧಿಕಾರಿಗಳ ಮೇಲೂ ಕ್ರಮಕೈಗೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ವಿಧಾನ ಪರಿಷತ್ತಿನ ಸದಸ್ಯರು ಈ ಸಂದರ್ಭದಲ್ಲಿ ಒತ್ತಾಯಿಸಿದರು.












Click it and Unblock the Notifications