ಬೆಂಗಳೂರಿನ ಬೀದಿ ನಾಯಿಗಳಿಗೆ ಚಿಕನ್ ರೈಸ್: ಜನರ ದುಡ್ಡಿಂದ ಬಿಬಿಎಂಪಿ ಖರ್ಚು!
ಬೆಂಗಳೂರಿನಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವ ಚರ್ಚೆಯ ನಡುವೆಯೇ ಬೀದಿ ನಾಯಿಗಳಿಗೂ ಬಾಡೂಟ ಹಾಕುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಬಿಬಿಎಂಪಿಯ ಈ ಕ್ರಮವು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಜನರಿಗೆ ಇಂದಿರಾ ಕ್ಯಾಂಟೀನ್ ಊಟ ನಾಯಿಗಳಿಗೆ ಚಿಕನ್ ಬಿರಿಯಾನಿನಾ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ. ಬೀದಿ ನಾಯಿಗಳ ವಿಚಾರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇತ್ತೀಚಿನ ದಿನಗಳಲ್ಲಿ ಮಾಡುತ್ತಿರುವ ಕೆಲವೊಂದು ಯೋಜನೆಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಅದರಲ್ಲಿ ಈ ಯೋಜನೆ ಎರಡನೆಯದು. ನಾಯಿಗಳ ಹಬ್ಬ ಎಂದು ಈಚೆಗೆ ಮಾಡಿದ್ದ ಯೋಜನೆ ಸಹ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಬೆಂಗಳೂರಿನ ಬೀದಿ ನಾಯಿಗಳಿಗೆ ಬಾಡೂಟ (ಚಿಕನ್ ರೈಸ್) ಕೊಡುವುದಕ್ಕೆ ಬಿಬಿಎಂಪಿ ಮುಂದಾಗಿದೆ.
ಬೆಂಗಳೂರಿನಲ್ಲಿ ನಾಯಿಗಳಿಗೂ ಇನ್ಮುಂದೆ ಬಾಡೂಟ ಸಿಗಲಿದೆ ಇದು ಹಾಸ್ಯಾಸ್ಪದ ಎನಿಸಿದರೂ ನಿಜ. ಬಿಬಿಎಂಪಿಯ ಈ ಕ್ರಮವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ದಿನಕ್ಕೊಂದು ಬಾರಿ ಬಿಸಿ ಬಿಸಿ ಚಿಕನ್ ರೈಸ್ ಕೊಡುವುದಕ್ಕೆ ಬಿಬಿಎಂಪಿ ಮುಂದಾಗಿದ್ದು ಇದಕ್ಕಾಗಿ ವಾರ್ಷಿಕ ಬರೋಬ್ಬರಿ 2.88 ಕೋಟಿ ವೆಚ್ಚ ಮಾಡಲು ಮುಂದಾಗಿದೆ ಎಂದು "ಕನ್ನಡ ಪ್ರಭ" ವರದಿ ಮಾಡಿದೆ. ಬಿಬಿಎಂಪಿಯ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆಯಾದರೂ ತೀವ್ರ ವಿರೋಧ ವ್ಯಕ್ತವಾಗಿದೆ. ಬೀದಿ ನಾಯಿಗಳಿಗೆ ರಾಜಾತಿಥ್ಯ ಅವಶ್ಯಕತೆ ಇದೆಯಾ ಅಂತಾ ಜನ ಕೇಳುತ್ತಿದ್ದಾರೆ.

ಬೆಂಗಳೂರಿನಲ್ಲಿ ನಿರಾಶ್ರಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೊರ ರಾಜ್ಯಗಳಿಂದ ಬೆಂಗಳೂರಿಗೆ ಒಂದು ದಿನದ ಕೆಲಸ ಅಥವಾ ಕೆಲಸ ಹುಡುಕುವವರಿಗೆ ಇಂದಿಗೂ ತಾತ್ಕಾಲಿಕ ಜಾಗ ಸಿಗುತ್ತಿಲ್ಲ. ಅಲ್ಲದೇ ನಿರಾಶ್ರಿತ ಕೇಂದ್ರಗಳಿದ್ದರೂ ಅವರಿಗೆ ಬೆಂಗಳೂರಿನ ನಾಯಿಗಳಿಗೆ ಸಿಗುವಷ್ಟು ಸೌಕರ್ಯವೂ ಸಿಗುತ್ತಿಲ್ಲ ಎನ್ನುವಂತಾಗಿದೆ. ಇದಕ್ಕೆ ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಯವೈಖರಿ. ಇದೀಗ ಬಿಬಿಎಂಪಿ ನಾಯಿಗಳಿಗೆ ಬಿರಿಯಾನಿ ಕೊಡುವುದಕ್ಕೆ ಮುಂದಾಗಿದೆ. ಅದೂ ಸಹ ಸಾರ್ವಜನಿಕರ ದುಡ್ಡಿನಲ್ಲಿ!
ಬೆಂಗಳೂರಿನ ಬೀದಿ ನಾಯಿಗಳಿಗೆ ಬರೋಬ್ಬರಿ 2.88 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಬಿಎಂಪಿಯು ಚಿಕನ್ ರೈಸ್ ಯೋಜನೆ ರೂಪಿಸುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಬೀದಿ ನಾಯಿಗಳನ್ನು ನಿಯಂತ್ರಣ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಕೆಲವು ಭಾಗದಲ್ಲಿ ಬೀದಿ ನಾಯಿಗಳು ಕಚ್ಚಿ ಮಕ್ಕಳು ಹಾಗೂ ವಯೋವೃದ್ಧರು ಗಂಭೀರವಾಗಿ ಗಾಯಗೊಂಡಿರುವುದು ಸಹ ಇದೆ. ಆದರೆ, ಈ ರೀತಿ ಬೀದಿ ನಾಯಿಗಳನ್ನು ಕಂಟ್ರೋಲ್ ಮಾಡಬೇಕು ಎನ್ನುವ ಸಂದರ್ಭದಲ್ಲಿ ನಾಯಿಗಳಿಗೆ ನಾನ್‌ವೆಜ್ ಕೊಡುವುದಕ್ಕೆ ಮುಂದಾಗಿರುವುದು ಟ್ರೋಲ್ ಹಾಗೂ ಟೀಕೆಗೆ ಕಾರಣವಾಗಿದೆ.

ಪ್ರತಿ ದಿನ ಒಂದು ಬಾರಿ ಬೀದಿನಾಯಿಗೆ ಆಹಾರ ಕೊಡುವುದಕ್ಕೆ ಪಾಲಿಕೆ ಮುಂದಾಗಿದೆ. ಇದರ ಭಾಗವಾಗಿ ಪ್ರತಿ ನಾಯಿಗೆ 22.42 ರೂಪಾಯಿ ಖರ್ಚು ಮಾಡಲಾಗುತ್ತಿದೆ. 15 ಕೆ.ಜಿ ತೂಕವಿರುವ ನಾಯಿಗೆ ದಿನಕ್ಕೆ 465 ರಿಂದ 750 ಕ್ಯಾಲೋರಿ ಎನ್ನುವ ಲೆಕ್ಕಾಚಾರವಾಕಲಾಗಿದೆ. ಬೆಂಗಳೂರಲ್ಲಿ 2.80 ಲಕ್ಷ ಬೀದಿ ನಾಯಿಗಳಿವೆ. ಇವುಗಳ ಪೈಕಿ ಶೇ.2 ರಷ್ಟು ಬೀದಿ ನಾಯಿಗಳಿಗೆ ನಾನ್‌ವೆಜ್ ಸಿಗಲಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಎಂಟು ವಲಯಗಳಿದ್ದು. ಪ್ರತಿ ವಲಯದಲ್ಲಿ ಚಿಕನ್ ರೈಸ್ ಪೂರೈಕೆ ಮಾಡುವುದಕ್ಕೆ 100 ರಿಂದ 125 ಸ್ಥಳಗಳನ್ನು ಗುರುತಿಸಲಾಗಿದೆ. ಬಿಬಿಎಂಪಿ ಗುರುತಿಸಿರುವ ಸ್ಥಳಗಳಲ್ಲಿ ತಲಾ ಒಂದು ನಾಯಿಗೆ 367 ಗ್ರಾಂನಂತೆ ನಾನ್‌ವೆಜ್ ಆಹಾರ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಟೆಂಡರ್ ಕರೆಯಲಾಗುತ್ತಿದೆ. ಈ ರೀತಿ ಮಾಡುವುದರಿಂದ ಬೀದಿ ನಾಯಿಗಳು ದಾಳಿ ಮಾಡುವುದು ಕಡಿಮೆಯಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications