ಯಶವಂತಪುರ-ತುಮಕೂರು ನಡುವೆ ಮೆಮು ರೈಲು ಇಲ್ಲ
ಬೆಂಗಳೂರು, ಡಿಸೆಂಬರ್ 20; "ಯಶವಂತಪುರ- ಹುಬ್ಬಳ್ಳಿ ಜೋಡಿ ರೈಲು ಮಾರ್ಗ ಯೋಜನೆಯನ್ನು ಹಂತ-ಹಂತವಾಗಿ ಕಾರ್ಯಗತಗೊಳಿಸಲಾಗುತ್ತದೆ. ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ" ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ರಾಜ್ಯಸಭಾ ಸದಸ್ಯರಾದ ಕೆ. ನಾರಾಯಣ ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ. ಯಶವಂತಪುರ-ಹುಬ್ಬಳ್ಳಿ ನಡುವಿನ ಜೋಡಿ ಮಾರ್ಗ ಯೋಜನೆಯ ಪೈಕಿ ಚಿಕ್ಕಜಾಜೂರು-ಅರಸೀಕೆರೆ, ತುಮಕೂರು-ಯಶವಂತರಪುರ ನಡುವೆ ಜೋಡಿ ಮಾರ್ಗ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಕರ್ನಾಟಕದ ವಿವಿಧ ರೈಲು ಮಾರ್ಗಗಳ ಕಾಮಗಾರಿ ಪ್ರಗತಿಯ ಕುರಿತು ಸಚಿವರು ರಾಜ್ಯಸಭೆಗೆ ಮಾಹಿತಿಯನ್ನು ನೀಡಿದ್ದು, ಯಶವಂತಪುರ-ಚಿಕ್ಕಬಾಣಾವರ-ತುಮಕೂರು ನಡುವಿನ ಮಾರ್ಗದ ವಿದ್ಯುದೀಕರಣ ಕಾರ್ಯ ಪ್ರಗತಿಯಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಮೆಮು ರೈಲು ಪ್ರಸ್ತಾವನೆ ಇಲ್ಲ; ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, "ಬೆಂಗಳೂರಿನ ಯಶವಂತಪುರ-ತುಮಕೂರು ನಡುವೆ ಮೆಮು ರೈಲು ಓಡಿಸುವ ಯಾವುದೇ ಪ್ರಸ್ತಾಪ ಇಲ್ಲ" ಎಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು ಮತ್ತು ತುಮಕೂರು ನಡುವೆ ಪ್ರತಿನಿತ್ಯ ಸಾವಿರಾರು ಜನರು ಸಂಚಾರ ನಡೆಸುತ್ತಾರೆ. ಉಭಯ ನಗರಗಳ ನಡುವೆ ಮೆಮು ರೈಲು ಓಡಿಸಿದರೆ ಸಹಾಯಕವಾಗಲಿದೆ ಎಂಬ ಪ್ರಸ್ತಾವನೆ ಇತ್ತು. ತುಮಕೂರು ರೈಲು ಪ್ರಯಾಣಿಕರ ವೇದಿಕೆ ಸಹ ಮೆಮು ರೈಲು ಓಡಿಸುವಂತೆ ಮನವಿ ಮಾಡಿತ್ತು.
ಭಾರತೀಯ ರೈಲ್ವೆ ಚಿಕ್ಕಬಣಾವರ-ಹುಬ್ಬಳ್ಳಿ ನಡುವಿನ ಮಾರ್ಗದ ವಿದ್ಯುದೀಕರಣ ಕಾಮಗಾರಿ ಭಾಗವಾಗಿ ಬೆಂಗಳೂರು-ತುಮಕೂರು ನಡುವಿನ 69.47 ಕಿ. ಮೀ. ರೈಲು ಮಾರ್ಗವನ್ನು ವಿದ್ಯುದೀಕರಣ ಮಾಡಿದೆ. ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ.
ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡು, ಸಿಆರ್‌ಎಸ್ ಪರಿಶೀಲನೆ ಮುಗಿದ ಬಳಿಕ ಯಶವಂತಪುರ-ತುಮಕೂರು ನಡುವೆ ಮೆಮು ರೈಲು ಓಡಿಸುವ ಪ್ರಸ್ತಾವನೆ ಇದೆ ಎಂದು ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಹೇಳಿದ್ದರು. ಆದರೆ ಈಗ ಸಚಿವರು ಮೆಮು ರೈಲು ಓಡಿಸುವ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು-ತುಮಕೂರು ನಡುವೆ ಹೆಚ್ಚು ಪ್ರಯಾಣಿಕರು ಸಂಚಾರ ನಡೆಸುತ್ತಾರೆ. ಅದರಲ್ಲಿಯೂ ಬೆಳಗ್ಗೆ ಮತ್ತು ಸಂಜೆಯ ವೇಳೆ ಹೆಚ್ಚು ಜನರು ಸಂಚರಿಸುತ್ತಾರೆ. ಈ ಅವಧಿಯಲ್ಲಿ ಹೆಚ್ಚಿನ ರೈಲುಗಳನ್ನು ಓಡಿಸಬೇಕು ಎಂಬುದು ರೈಲ್ವೆ ಪ್ರಯಾಣಿಕರ ವೇದಿಕೆ ಬೇಡಿಕೆಯಾಗಿದೆ.
ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡು ಇಲೆಕ್ಟ್ರಿಕ್ ಲೋಕೋ ಮೂಲಕ ಪ್ರಾಯೋಗಿಕ ಸಂಚಾರವನ್ನು ನೈಋತ್ಯ ರೈಲ್ವೆ ಪೂರ್ಣಗೊಳಿಸಿತ್ತು. ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಪರಿಶೀಲನೆ ಪೂರ್ಣಗೊಳಿಸಿದ್ದು, ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ಸಿಗಬೇಕಿದೆ.
ತುಮಕೂರು-ಬೆಂಗಳೂರು ನಡುವಿನ ರೈಲು ಪ್ರಯಾಣದ ಅವಧಿ ಸುಮಾರು ಒಂದೂವರೆ ಗಂಟೆ. ಆದ್ದರಿಂದ ಜನರು ಹೆಚ್ಚಾಗಿ ರೈಲುಗಳನ್ನು ಅವಲಂಬಿಸಿದ್ದಾರೆ. ಕೋವಿಡ್ ಪೂರ್ವ ಪರಿಸ್ಥಿತಿಯಲ್ಲಿದ್ದ ಕೆಲವು ರೈಲುಗಳು ಈಗ ಸಂಚಾರ ನಿಲ್ಲಿಸಿವೆ.
ಎರಡೂ ನಗರಗಳ ನಡುವೆ ಈಗ ಡೆಮು ರೈಲು ಓಡಿಸಲಾಗುತ್ತಿದೆ. ಆದರೆ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿರುವುದರಿಂದ ಮೆಮು (ಎಲೆಕ್ಟ್ರಿಕ್ ರೈಲು) ಓಡಿಸಬೇಕು ಎಂಬುದು ಬೇಡಿಕೆಯಾಗಿದೆ.
ಕೋವಿಡ್ ಪೂರ್ವದಲ್ಲಿ ಡೀಸೆಲ್ ಎಂಜಿನ್ ರೈಲು ದಿನಕ್ಕೆ ನಾಲ್ಕು ಬಾರಿ ಬೆಂಗಳೂರು-ತುಮಕೂರು ನಡುವೆ ಸಂಚಾರ ನಡೆಸುತ್ತಿತ್ತು. ಕಡಿಮೆ ದರದಲ್ಲಿ ಜನರು ಉಭಯ ನಗರಗಳ ನಡುವೆ ಸಂಚಾರ ನಡೆಸಲು ಇದು ಅನುಕೂಲವಾಗಿತ್ತು.
ರೈಲ್ವೆ ಇಲಾಖೆಯ ಬೆಂಗಳೂರು ವಿಭಾಗದ ಸಭೆ ಇದ್ದಾಗ ತುಮಕೂರು ಸಂಸದರು ಈ ಕುರಿತು ಧ್ವನಿ ಎತ್ತಬೇಕು ಎಂದು ರೈಲ್ವೆ ಪ್ರಯಾಣಿಕರು ಆಗ್ರಹಿಸಿದ್ದಾರೆ. ಉಭಯ ನಗರಗಳ ನಡುವೆ ಎಲೆಕ್ಟ್ರಿಕ್ ರೈಲುಗಳ ಸಂಚಾರ ಆರಂಭಗೊಂಡರೆ ರೈಲುಗಳ ಸಂಚಾರ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications