ಕರ್ನಾಟಕದಲ್ಲಿ ಭದ್ರ ನೆಲೆ ಕಂಡ ನಂದಿನಿಯನ್ನು ಅಮುಲ್ ಜೊತೆ ವಿಲೀನಗೊಳಿಸುವ ಪ್ರಸ್ತಾಪವೇ ಇಲ್ಲ: ಎಸ್‌ಟಿಎಸ್
ಬೆಂಗಳೂರು, ಏಪ್ರಿಲ್ 10: ಕರ್ನಾಟಕದಲ್ಲಿ ಭದ್ರವಾಗಿ ನೆಲೆಯೂರಿರುವ 'ನಂದಿನಿ' ಬ್ರ್ಯಾಂಡ್ ಅನ್ನು ಅಳಿಸಿ ಹಾಕುವ ಶಕ್ತಿ ಯಾರಿಗೂ ಇಲ್ಲ. ಗುಜರಾತ್‌ನ ಅಮುಲ್ ಜೊತೆ ನಂದಿನಿಯನ್ನು ವಿಲೀನಗೊಳಿಸುವ ಯಾವುದೇ ಪ್ರಸ್ತಾಪವು ಇಲ್ಲ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಭಾನುವಾರ ಸ್ಪಷಪಡಿಸಿದ್ದಾರೆ.
ಅಮುಲ್ ಕರ್ನಾಟಕ ಪ್ರವೇಶ ಕುರಿತು ಮಾತನಾಡಿದ ಅವರು, ಕರ್ನಾಟಕದ ನಂದಿನಿ ಹಾಲಿನ ಬ್ರ್ಯಾಂಡ್ ಎಲ್ಲ ಪ್ರತಿಸ್ಪರ್ಧಿಗಳಿಗಿಂತ ಮುಂದಿದೆ. ಅಮುಲ್ ಸಂಸ್ಥೆ ಒಂದು ಲೀಟರ್ ಹಾಲನ್ನು ಲೀಟರ್‌ಗೆ 57 ರೂಪಾಯಿಗೆ ಪೂರೈಸಲಿದೆ. ಆನ್‌ಲೈನ್ ಮೂಲಕವೇ ಮಾರಾಟಕ್ಕೆ ಮುಂದಾಗಿದೆ. ಕರ್ನಾಟಕ ಹಾಲು ಒಕ್ಕೂಟವು ಅದೇ 1 ಲೀಟರ್ ಹಾಲನ್ನು ಲೀಟರ್‌ಗೆ 39 ರೂಪಾಯಿಗೆ ಪೂರೈಸಲು ಸಿದ್ಧವಿದೆ ಎಂದರು.

ಕರ್ನಾಟಕದಲ್ಲಿ ಬೆಳವಣಿಗೆ ಹೊಂದುತ್ತಿರುವ ಡೈರಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಭಾರತದ ಅಗ್ರ ಎರಡು ಹಾಲಿನ ಬ್ರಾಂಡ್‌ಗಳ ಹೋರಾಟವು ಅನಿರೀಕ್ಷಿತ ತಿರುವನ್ನು ಪಡೆದುಕೊಂಡಿದೆ. ರಾಜ್ಯದ ಎರಡನೇ ಅತೀ ದೊಡ್ಡ ಡೈರಿ ಬ್ರಾಂಡ್ ನಂದಿನಿಯ ಪ್ರಾಥಮಿಕ ಮಾರುಕಟ್ಟೆಯ ಪ್ರದೇಶವಾದ ಬೆಂಗಳೂರಿನಲ್ಲಿ ಹಾಲು ಮತ್ತು ಮೊಸರನ್ನು ಮಾರಾಟ ಮಾಡುವುದಾಗಿ ಅಮುಲ್ ಘೋಷಿಸಿದೆ. ಈ ಮೂಲಕ ಮಾರುಕಟ್ಟೆಯ ಪ್ರವೇಶಕ್ಕೆ ಸಿದ್ಧಗೊಂಡಿದೆ. ಇದು ಸಾಕಷ್ಟು ಚರ್ಚೆ ಆಗುತ್ತಿದೆ.
ರಾಜ್ಯದ ಹಾಲು ಒಕ್ಕೂಟ ಲಾಭದಲ್ಲಿವೆ:ಎಸ್‌ಟಿಎಸ್
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ( ಕೆಎಂಎಫ್) ಅಡಿ ಬರುವ ಎಲ್ಲ 15 ಹಾಲು ಒಕ್ಕೂಟಗಳು ಲಾಭದ ಹಾದಿಯಲ್ಲಿವೆ. ಅವುಗಳಿಗೆ ಯಾವುದೇ ಬೆಂಬಲದ ಅಗತ್ಯವಿಲ್ಲ. ನಂದಿನಿ ಬ್ರ್ಯಾಂಡ್ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಮಂಡ್ಯಕ್ಕೆ ಬಂದಾಗ ಮಾರುಕಟ್ಟೆ ವಿಸ್ತರಣೆ ಮತ್ತು ತಂತ್ರಜ್ಞಾನ ಬಳಕೆಗೆ ಅಮುಲ್ ನೆರವು ಪಡೆಯುವಂತೆ ನಂದಿನಿ ಅವರಿಗೆ ಸೂಚಿಸಿದ್ದರು. ಎರಡು ಬ್ರಾಂಡ್‌ಗಳನ್ನು ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯದ 25 ರಿಂದ 26 ಲಕ್ಷ ಹೈನುಗಾರರಿಂದ ನಂದಿನಿ ಕಂಪನಿಯು ಹಾಲು ಸಂಗ್ರಹಿಸುತ್ತಿದೆ ಎಂದು ಉಲ್ಲೇಖಿಸಿದ ಸೋಮಶೇಖರ್, ಹಾಲು ಉತ್ಪಾದನೆಯಲ್ಲಿ ಕೃತಕ ಅಭಾವವನ್ನು ಸೃಷ್ಟಿಸುವ ಉದ್ದೇಶವಿಲ್ಲ ಎಂದು ಹೇಳಿದರು. ಆದರೆ ಕರ್ನಾಟಕದ್ದಲ್ಲದ ಅಮುಲ್ ಹಾಲು ಕಂಪನಿಯು ಕರ್ನಾಟಕ ರಾಜ್ಯ ಡೈರಿ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದೆ. ಇದಕ್ಕೆ ಸರ್ಕಾರ ಪೂರಕವಾಗಿ ನಿಲ್ಲುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಬೇರೆ ರಾಜ್ಯಗಳಿಗೂ ನಂದಿನಿ ಮಾರಾಟ ಮಾಡಿ: ತರೂರ್
ಕರ್ನಾಟಕದಲ್ಲಿ ಹಾಲು ಸಂಗ್ರಹಿಸಿ ನಂದಿನಿ ಸಿದ್ಧಗೊಳ್ಳುತ್ತಿದೆ. ಈ ಹಾಲು ಉತ್ಪಾದಕರು ಮತ್ತು ತಯಾರಕರು ತಮ್ಮ ಒಗ್ಗಟ್ಟು ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಂದಿನಿ ರಕ್ಷಣಾತ್ಮಕವಾಗಲು ಸಾಧ್ಯವಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ ತಿಳಿಸಿದರು.
ಕರ್ನಾಟಕದ ನಂದಿನಿ ಹಾಲನ್ನು ದೇಶದ ಹೆಚ್ಚಿನ ರಾಜ್ಯಗಳಿಗೆ ರಫ್ತು ಮಾಡಿದರೆ ಉತ್ತಮ ಎಂದು ಅಭಿಪ್ರಾಯಪಟ್ಟ ಅವರು, ಕರ್ನಾಟಕ ಒಂದರಲ್ಲೇ ಇಟ್ಟುಕೊಂಡರೆ ಅದು ರಾಷ್ಟ್ರೀಯ ಆರ್ಥಿಕತೆಗೆ ಉತ್ತಮವಾದ ನಡೆಯಲ್ಲ. ಹೀಗಾಗಿ ಕರ್ನಾಟಕವು ನಂದಿನಿ ವಿಚಾರದಲ್ಲಿ ಹೆಚ್ಚು ರಕ್ಷಣಾತ್ಮಕವಾಗಿರಲು ಸಾಧ್ಯವಿಲ್ಲ ಎಂದರು.
ಆದರೆ ಕರ್ನಾಟಕ ರಾಜ್ಯದ ಹಾಲು ಉತ್ಪಾದಕರಿಗೆ ಅಮುಲ್ ಪ್ರವೇಶದಿಂದ ಆಗು ತೊಂದರೆಯನ್ನು ಸಹ ನಿರ್ಲಕ್ಷಿಸುವಂತಿಲ್ಲ. ಅವರ ಪ್ರೋತ್ಸಾಹಿಸಲು, ಸಮಸ್ಯೆ ಪರಿಹರಿಸುವುದು ಅಗತ್ಯವಿದೆ ಎಂದು ತಿಳಿಸಿದರು.












Click it and Unblock the Notifications