ಅನುಗ್ರಹ ಬಂಗಲೆಯಲ್ಲಿ ಭೂತಗಳಿವೆಯೇ?
ಬೆಂಗಳೂರು, ಜ.25 : ಕರ್ನಾಟಕದ ರಾಜಕಾರಣಿಗಳು ಭೂತ ಭಂಗಲೆ ಎಂದು ಕರೆಯುವ ಅನುಗ್ರಹದಲ್ಲಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಸತ್ತ ಜನರ ಅತೃಪ್ತ ಆತ್ಮಗಳೆಲ್ಲ ಬಿಡಾರ ಹೂಡಿವೆಯೇ?. ಈ ಕುರಿತು ಚಿಂತಕರ ಚಾವಡಿ ಎಂದು ಕರೆಯುವ ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಸ್ವಾರಸ್ಯಕರ ಚರ್ಚೆ ನಡೆದಿದೆ.
ಶುಕ್ರವಾರದ ಕಲಾಪದಲ್ಲಿ ಜೆಡಿಎಸ್ ನಾಯಕ ಎಂ.ಸಿ. ನಾಣಯ್ಯ ಮಂಡಿಸಿದ ಖಾಸಗಿ ಮಸೂದೆಗೆ ಸಂಬಂಧಿಸಿದಂತೆ ಪರಿಷತ್ ಸಭಾ ನಾಯಕ ಎಸ್.ಆರ್. ಪಾಟೀಲ್ ನೀಡಿದ ಹೇಳಿಕೆ ಕುರಿತು ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ಅನುಗ್ರಹ ನಿವಾಸದಲ್ಲಿ ಭೂತಗಳಿವೆ ಎಂಬ ಸುದ್ದಿಗಳಿಗೆ ಪಾಟೀಲ್ ಸದನದಲ್ಲಿ ಉತ್ತರ ನೀಡಿದರ. [ಶುಕ್ರವಾರದ ಕಲಾಪದ ಹೈಲೈಟ್ಸ್]

ಸಭಾನಾಯಕ ಎಸ್.ಆರ್.ಪಾಟೀಲ್, "ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಹಿಂದಿನ ಸರ್ಕಾರ ನನಗೆ ‘ಅನುಗ್ರಹ' ನಿವಾಸವನ್ನು ಹಂಚಿಕೆ ಮಾಡಿತ್ತು, ಅನುಗ್ರಹದ ಸಮೀಪವಿರುವ ರೈಲ್ವೆ ಹಳಿಯ ಮೇಲೆ ಆತ್ಮಹತ್ಯೆ ಮಾಡಿಕೊಂಡವರ ಅತೃಪ್ತ ಆತ್ಮಗಳೆಲ್ಲ ಆ ಮನೆಯಲ್ಲಿ ವಾಸವಾಗಿವೆ" ಎಂದು ಹಲವಾರು ಜನರು ನನಗೆ ಹೇಳಿದರು.
ಆ ಭೂತ ಬಂಗಲೆಯಲ್ಲಿ ವಾಸಿಸುವುದು ಬೇಡ ಎಂಬ ಸಲಹೆಯನ್ನು ಹಲವರು ನೀಡಿದರು. ಆದರೆ, ನಾನು ಮನಸ್ಸು ಬದಲಿಸದೆ ಅಲ್ಲಿಯೇ ವಾಸಿಸಿದೆ ಎಂದು ಪಾಟೀಲ ಹೇಳಿದರು. ತಕ್ಷಣ ‘ಭೂತಗಳು ಭೇಟಿಯಾದವೆ' ಎಂಬ ಪ್ರಶ್ನೆ ಸದನದಿಂದ ತೂರಿಬಂತು.
ಅದಕ್ಕೆ ಉತ್ತರಿಸಿದ ಪಾಟೀಲರು, "ಸಚಿವನಾದ ಮೇಲೂ ನಾನು ಅದೇ ಮನೆಯಲ್ಲಿ ವಾಸವಾಗಿದ್ದೇನೆ. ನನಗೆ ಇದುವರೆಗೆ ಭೂತದ ದರ್ಶನವಾಗಿಲ್ಲ. ಬೆಳಗಿನ ವಾಕಿಂಗ್ ಮಾಡದ ದಿನ ನಡುರಾತ್ರಿಯಲ್ಲೂ ಮನೆಸುತ್ತ ಓಡಾಡಿದ್ದೇನೆ. ದೆವ್ವ-ಭೂತ ಯಾವುದೂ ಸಿಕ್ಕಿಲ್ಲ" ಎಂದು ಉತ್ತರಿಸಿದರು.
ಇದಕ್ಕೆ ತಕ್ಕ ಉತ್ತರ ನೀಡಿದ ಬಿಜೆಪಿಯ ಕೆ.ಬಿ.ಶಾಣಪ್ಪ ‘" ಎಸ್.ಆರ್.ಪಾಟೀಲ್ ಯಾವುದೇ ಅಂಜಿಕೆ-ಅಳುಕಿಲ್ಲದೆ ಓಡಾಡುವುದನ್ನು ನೋಡಿದ ಭೂತಗಳು ಪೆಡಂಭೂತ ಕಂಡಂತೆ ಅಲ್ಲಿಂದ ಮಾಯಾವಾಗಿರಬೇಕು" ಎಂದು ಹೇಳಿದಾಗ ಸದನದಲ್ಲಿ ನಗುವಿನ ಅಲೆ ಎದ್ದಿತು.
ತಮ್ಮ ಮಾತು ಮುಂದುವರೆಸಿದ ಪಾಟೀಲರು, "ನಾವು ಚಿಕ್ಕವರಿದ್ದಾಗ ಕೊಳ್ಳಿದೆವ್ವಗಳು ಇದ್ದವಂತೆ. ಅವು ಸಹ ನಮಗೆ ದರ್ಶನ ನೀಡಲಿಲ್ಲ ಎಂದು ಪಾಟೀಲ್ ಬೇಸರ ವ್ಯಕ್ತಪಡಿಸಿದರು. ವಾಸ್ತುದೋಷ ಸರಿಪಡಿಸಲು ನಾನು ಹೋಮ-ಹವನ ಮಾಡಿಸಲಿಲ್ಲ, ಆದರೂ ಭೂತ ಕಾಣಯಾಗಿವೆ" ಎಂದು ಹೇಳಿದಾಗ ಸದನದಲ್ಲಿ ಮತ್ತೆ ನಗು ಕೇಳಿಬಂತು.











Click it and Unblock the Notifications