ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಯಾವುದೇ "ಮಾನಹಾನಿ" ಹೇಳಿಕೆ ಪ್ರಕಟಿಸುವಂತಿಲ್ಲ: ಕೋರ್ಟ್ ಆದೇಶ
ಕರ್ನಾಟಕದ ಧರ್ಮಸ್ಥಳದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿವಿಲ್ ಕೋರ್ಟ್ ಮಹತ್ವದ ಆದೇಶವೊಂದನ್ನು ಮಾಡಿದೆ. ರಾಜ್ಯಸಭಾ ಸದಸ್ಯರೂ ಆಗಿರುವ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಹಾಗೂ ಧರ್ಮಸ್ಥಳ ವಿರುದ್ಧ ಯಾವುದೇ ಆಧಾರ ರಹಿತ ಹಾಗೂ ಮಾನಹಾನಿ ಹೇಳಿಕೆಗಳನ್ನು ನೀಡದಂತೆ ಹಾಗೂ ಪ್ರಕಟಿಸದಂತೆ ತಡೆಯಾಜ್ಞೆ ನೀಡಲಾಗಿದೆ.
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಿನಲ್ಲಿ ಡಿ. ಹರ್ಷೇಂದ್ರ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದು, ನ್ಯಾ. ವಿಜಯ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠವು ಮಹತ್ವದ ಆದೇಶವನ್ನು ನೀಡಿದೆ. ವಕೀಲ ರಾಜಶೇಖರ ಹಿಲ್ಯಾರ್ ಅವರ ವಾದವನ್ನು ಆಲಿಸಿರುವ ನ್ಯಾಯಾಲಯವು ಅರ್ಜಿದಾರರ ಕುಟುಂಬ, ಮಂಜುನಾಥ ಸ್ವಾಮಿ ದೇವಸ್ಥಾನ, ಧರ್ಮಸ್ಥಳ ಮತ್ತು ಶ್ರೀಕ್ಷೇತ್ರದ ಕುರಿತು ಯಾವುದೇ ರೀತಿಯ ಮಾನಹಾನಿಕರ ಹೇಳಿಕೆಗಳನ್ನು ಹಾಗೂ ಸಾಕ್ಷ್ಯರಹಿತ ಆರೋಪಗಳನ್ನು ಮಾಡಬಾರದು ಎಂದು ಆದೇಶಿಸಲಾಗಿದೆ. ಅಲ್ಲದೇ ಈಗಾಗಲೇ ಯುಟ್ಯೂಬ್ ಸೇರಿದಂತೆ ಎಲ್ಲಾ ಸೋಷಿಯಲ್ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವ ವಿಡಿಯೊಗಳನ್ನು ಸಹ ಕೂಡಲೇ ಡಿಲೀಟ್ ಮಾಡುವುದಕ್ಕೆ ಆದೇಶಿಸಲಾಗಿದೆ.

ವಾಸ್ತವದಲ್ಲಿ ಈ ಪ್ರಕರಣಗಳಿಗೂ ಧರ್ಮಸ್ಥಳಕ್ಕೂ ಯಾವುದೇ ಸಂಬಂಧವಿಲ್ಲ. ಕ್ಷೇತ್ರದಿಂದ ನಡೆಸಲಾಗುತ್ತಿರುವ ಸತ್ಕಾರ್ಯಗಳನ್ನು ಸಹಿಸದ ಹಾಗೂ ಕ್ಷೇತ್ರದ ಏಳಿಗೆಯನ್ನು ಸಹಿಸದಿರುವ ಕೆಲ ದುಷ್ಟ ಶಕ್ತಿಗಳು ವಿನಾಕಾರಣ ಪೂರ್ವಾಗ್ರಹ ಪೀಡಿತರಾಗಿ ಈ ಪ್ರಕರಣವನ್ನು ಮುಂದಿಟ್ಟುಕೊಂಡಿದ್ದಾರೆ. ಅಲ್ಲದೇ ಪವಿತ್ರ ಕ್ಷೇತ್ರವಾದ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದ ವಿರುದ್ಧ ಸಂಚು ರೂಪಿಸಿ ಅಪಪ್ರಚಾರ ಮಾಡುವ ಮೂಲಕ ತೇಜೋವಧೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಈ ರೀತಿ ಆಗುತ್ತಿರುವುದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತಿದೆ ಎಂದೂ ಆರೋಪಿಸಲಾಗಿದೆ.
ಬೆಂಗಳೂರು ನ್ಯಾಯಾಲಯವು ಈ ಸಂಬಂಧ ಆದೇಶ ಹೊರಡಿಸಿದೆ. ವಿವಿಧ ಮಾಧ್ಯಮ ಸಂಸ್ಥೆಗಳು ಹಾಗೂ ಯೂಟ್ಯೂಬ್ ಚಾನೆಲ್‌ಗಳು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ, ಅವರ ಕುಟುಂಬ ಸದಸ್ಯರು, ಕುಟುಂಬ ನಡೆಸುತ್ತಿರುವ ಸಂಸ್ಥೆಗಳು ಹಾಗೂ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದ ವಿರುದ್ಧ ಯಾವುದೇ ಮಾನಹಾನಿಕರ ವಿಷಯ ಮತ್ತು ಮಾಹಿತಿಯನ್ನು ಪ್ರಕಟಿಸುವುದು ಹಾಗೂ ಪ್ರಸಾರ ಮಾಡುವುದನ್ನು ನಿರ್ಬಂಧಿಸಲಾಗಿದೆ.
ನ್ಯಾಯಾಲಯವು ತನ್ನ ಮಧ್ಯಂತರ ಆದೇಶದಲ್ಲಿ ಆಗಸ್ಟ್ 5ರ ಮುಂದಿನ ವಿಚಾರಣೆಯವರೆಗೆ ಮುದ್ರಣ, ಡಿಜಿಟಲ್ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಮಾನಹಾನಿಕರ ವಿಷಯವನ್ನು ಪ್ರಕಟಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಅಲ್ಲದೇ ನ್ಯಾಯಾಲಯವು ಇದೇ ಸಂದರ್ಭದಲ್ಲಿ ವಿವಿಧ ಸಂಸ್ಥೆಗಳು ವಾದಿ, ಅವರ ಸಂಬಂಧಿಕರು, ಕುಟುಂಬದಿಂದ ನಡೆಸಲ್ಪಡುವ ಸಂಸ್ಥೆಗಳು ಮತ್ತು ದೇವಾಲಯದ ವಿರುದ್ಧದ ಎಲ್ಲಾ ಮಾನಹಾನಿಕರ ವಿಷಯ ಮತ್ತು ಮಾಹಿತಿಯನ್ನು ಮುಂದಿನ ಆದೇಶದವರೆಗೆ ಡಿಜಿಟಲ್ ಅಥವಾ ಮುದ್ರಣ ಮಾಧ್ಯಮದಿಂದ ಅಳಿಸಲು ಅಥವಾ ಡಿ-ಇಂಡೆಕ್ಸ್ ಮಾಡಲು ಸಹ ಸೂಚಿಸಲಾಗಿದೆ. ಇನ್ನು ನ್ಯಾಯಾಲಯವು 338 ಪ್ರತಿವಾದಿಗಳ ವಿರುದ್ಧ ಆದೇಶವನ್ನು ನೀಡಿದೆ.












Click it and Unblock the Notifications