ಬೆಂಗಳೂರಿಗೆ ಸದ್ಯಕ್ಕಿಲ್ಲ ಕೋವಿಡ್ 3ನೇ ಅಲೆಯ ಭೀತಿ
ಬೆಂಗಳೂರು, ಆಗಸ್ಟ್ 25; ದೇಶದಲ್ಲಿ ಕೋವಿಡ್ 3ನೇ ಅಲೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ತಜ್ಞರು ಈ ಕುರಿತು ಸರ್ಕಾರಗಳಿಗೆ ವರದಿಗಳನ್ನು ನೀಡುತ್ತಿದ್ದಾರೆ. ಆದರೆ ಬೆಂಗಳೂರು ನಗರಕ್ಕೆ ಮೂರನೇ ಅಲೆ ನಿರೀಕ್ಷೆ ಸದ್ಯಕ್ಕೆ ಇಲ್ಲ ಎಂಬ ಸಮಾಧಾನಕರ ಸಂಗತಿ ತಿಳಿದುಬಂದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತ (ಆರೋಗ್ಯ) ಡಿ. ರಂದೀಪ್ ಈ ಕುರಿತು ಮಾತನಾಡಿದ್ದಾರೆ, "ಮೂರನೇ ಅಲೆ ಬಂದರೆ ಅದು ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿಯಿಂದ ಎಂದು ತಜ್ಞರು ಹೇಳಿದ್ದಾರೆ. ಬೆಂಗಳೂರಲ್ಲಿ ಸದ್ಯಕ್ಕೆ ಮೂರನೇ ಅಲೆಯ ನಿರೀಕ್ಷೆ ಸದ್ಯಕ್ಕೆ ಇಲ್ಲ" ಎಂದರು.
"ಬೆಂಗಳೂರು ನಗರದಲ್ಲಿ ಡೆಲ್ಟಾ ಪ್ಲಸ್ ತಳಿಯಿಂದ ಸೋಂಕು ಹರಡುವಿಕೆ ಹೆಚ್ಚಾದರೆ ಅದು ಮೂರನೇ ಅಲೆ ಎಂದರ್ಥ. ಎಲ್ಲಾ ವಲಯಗಳಲ್ಲಿ ಕೋವಿಡ್ ಪರೀಕ್ಷೆಗೆ ಬಂದ ಶೇ 10ರಷ್ಟು ಮಾದರಿಗಳ ವೈರಾಣುವಿನ ರೂಪಾಂತರಿ ತಳಿ ಪತ್ತೆ ಹಚ್ಚುವ ಸಲುವಾಗಿ ಜೀನೋಮ್ ಸೀಕ್ವೆನ್ಸಿಂಗ್‌ಗೆ ಒಳಪಡಿಸಲಾಗುತ್ತಿದೆ" ಎಂದು ಆಯುಕ್ತರು ವಿವರಣೆ ನೀಡಿದರು.
"ಜೀನೋಮ್ ಸೀಕ್ವೆನ್ಸಿಂಗ್ ವೇಳೆ ಶೇ 75ರಷ್ಟು ವೈರಾಣುವಿನ ಡೆಲ್ಟಾ ರೂಪಾಂತರಿ ಕಂಡುಬಂದಿದೆ. ಡೆಲ್ಟಾ ಪ್ಲಸ್ ರೂಪಾಂತರಿ ಮೂರು ಪ್ರಕರಣದಲ್ಲಿ ಮಾತ್ರ ಲಭಿಸಿದೆ. ಇದರ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದರೆ ಮೂರನೇ ಅಲೆ ಕಂಡುಬಂದಿದೆ ಎನ್ನಬಹುದು. ಸದ್ಯಕ್ಕೆ ಮೂರನೇ ಅಲೆ ಶುರುವಾಗಿದೆ ಎನ್ನಲು ಯಾವುದೇ ಆಧಾರವಿಲ್ಲ" ಎಂದು ಆಯುಕ್ತರು ಸ್ಪಷ್ಟಪಡಿಸಿದರು.

ಸಿದ್ಧತೆಗೆ ಗಮನ ಹರಿಸಿದ್ದೇವೆ
ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಿ. ರಂದೀಪ್, "ಕೋವಿಡ್ 3ನೇ ಅಲೆ ಕಾಣಿಸಿಕೊಳ್ಳುವ ಸಮಯದ ಖಚಿತತೆ ಇಲ್ಲ. ಅಕ್ಟೋಬರ್ ಅಥವ ನವೆಂಬರ್‌ನಲ್ಲಿ ಕಂಡುಬರಬಹುದು. ಸೆಪ್ಟೆಂಬರ್ ಅಂತ್ಯದಲ್ಲೂ ಕಾಣಿಸಿಕೊಳ್ಳಬಹುದು. ನಾವು ಮೂರನೇ ಅಲೆ ಬಂದರೆ ಬೇಕಾದ ಸಿದ್ಧತೆಗಳ ಕಡೆ ಗಮನಹರಿಸಿದ್ದೇವೆ. ಮಕ್ಕಳ ಚಿಕಿತ್ಸೆಗೆ ಎಷ್ಟು ಹಾಸಿಗೆ ಲಭ್ಯವಿದೆ?, ಆಕ್ಸಿಜನ್ ಪೂರೈಕೆ ಇರುವ ಬೆಡ್‌ಗಳು ಎಷ್ಟು?, ಕೋವಿಡ್ ಆರೈಕೆ ಕೇಂದ್ರಗಳು ಸಿದ್ಧವಾಗಿದೆಯೇ? ಮುಂತಾದವುಗಳನ್ನು ಪರಿಶೀಲಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

ಐಸಿಯು ಅಗತ್ಯವೇ ಇರುವುದಿಲ್ಲ
"ಬಿಬಿಎಂಪಿ ವ್ಯಾಪ್ತಿಯಲ್ಲಿ 700 ಐಸಿಯು ಲಭ್ಯವಿದೆ. ಆರಂಭಿಕ ಹಂತದಲ್ಲೇ ಚಿಕಿತ್ಸೆ ಕೊಡಿಸಿದರೆ ಐಸಿಯು ಅಗತ್ಯವೇ ಬೀಳುವುದಿಲ್ಲ. 2ನೇ ಅಲೆಯಲ್ಲಿ ಕೆಲವರು 8, 9 ದಿನಗಳ ಬಳಿಕ ಆರೋಗ್ಯ ಸಂಪೂರ್ಣ ಹದಗೆಟ್ಟ ಮೇಲೆ ಆಸ್ಪತ್ರೆಗೆ ಬಂದರು. ಅವರ ಚಿಕಿತ್ಸೆಗೆ ಏಕಾಏಕಿ ವೆಂಟಿಲೇಟರ್ ಸಿದ್ಧಗೊಳಿಸುವುದು ಸಾಧ್ಯವಾಗದೇ ಸಾವಿನ ಸಂಖ್ಯೆ ಹೆಚ್ಚಾಯಿತು" ಎಂದು ಡಿ. ರಂದೀಪ್ ಹೇಳಿದರು.

ಅಷ್ಟು ತೀವ್ರತೆ ಇರುವುದಿಲ್ಲ
"ಈಗ ಹೆಚ್ಚಿನ ಜನರು ಕೋವಿಡ್ ಲಸಿಕೆ ಪಡೆದಿದ್ದಾರೆ. ಸೋಂಕಿತರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯತೆ ನಿರ್ಧರಿಸಲು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಸೋಂಕಿತರು ಇರುವಲ್ಲಿಗೆ ವೈದ್ಯರು ತೆರಳಿ ಅವರು ಮನೆ ಚಿಕಿತ್ಸೆಗೆ ಅರ್ಹರೇ?, ಅವರಿಗೆ ಇತರ ರೋಗಗಳು ಇದೆಯೇ ಎಂದು ಪರಿಶೀಲನೆ ನಡೆಸಲಿದ್ದಾರೆ. ಆದ್ದರಿಂದ ಮೂರನೇ ಅಲೆಯು ಎರಡನೇ ಅಲೆಯಷ್ಟು ತೀವ್ರವಾಗಿ ಇರುವುದಿಲ್ಲ" ಎಂದು ಡಿ. ರಂದೀಪ್ ವಿಶ್ವಾಸ ವ್ಯಕ್ತಪಡಿಸಿದರು.
Recommended Video

ಪ್ರಧಾನಿ ಕಚೇರಿಗೆ ವರದಿ
ಕೋವಿಡ್ 3ನೇ ಅಲೆ ಬಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (ಎನ್‌ಐಡಿಎಂ) ಪ್ರಧಾನಿ ಕಚೇರಿಗೆ ವರದಿಯೊಂದನ್ನು ನೀಡಿದೆ. ಅಕ್ಟೋಬರ್‌ನಲ್ಲಿ ಕೋವಿಡ್ 3ನೇ ಅಲೆ ಉತ್ತುಂಗಕ್ಕೆ ಹೋಗಲಿದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡಿರುವ ಸಮಿತಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ರಚನೆ ಮಾಡಿದೆ. ಇದೇ ತಜ್ಞರ ಸಮಿತಿ ವಯಸ್ಕರ ಜೊತೆ ಮಕ್ಕಳು ಸಹ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ. ಅಗತ್ಯ ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ವರದಿಯಲ್ಲಿ ಸಲಹೆಯನ್ನು ನೀಡಿದೆ.












Click it and Unblock the Notifications