ಬೆಂಗಳೂರಿನಲ್ಲಿ 5 ದಿನ ಭಾರಿ ಮಳೆ: ಶುಕ್ರವಾರ ನಗರದಲ್ಲಿ ಎಲ್ಲೆಲ್ಲಿ ಎಷ್ಟು ಮಳೆ ಬಿದ್ದಿದೆ
ಬೆಂಗಳೂರು ಆಗಸ್ಟ್ 26: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಐದು ದಿನ ಭಾರಿ ಮಳೆ ಸುರಿಯಲಿದೆ. ಈ ಪೈಕಿ ಎರಡು ದಿನ ನಗರದಲ್ಲಿ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಹಗುರದಿಂದ ಸಾಧಾರಣವಾಗಿ ಬರುತ್ತಿದ್ದ ಮಳೆಯಲ್ಲಿ ಶುಕ್ರವಾರಕ್ಕೆ ಮತ್ತಷ್ಟು ಏರಿಕೆ ಕಂಡು ಬಂತು. ನಗರದಲ್ಲಿ ಈ ಮಳೆ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ. ಮುಂದಿನ ಐದು ಅಂದರೆ ಆಗಸ್ಟ್ 31ರವರೆಗೆ ಮುಂದುವರಿಯಲಿದೆ. ಇದರಲ್ಲಿ ಆ.27ರಂದು ಶನಿವಾರ ಮತ್ತು ಆಗಸ್ಟ್ 31ರಂದು ಬುಧವಾರ ಎರಡು ದಿನ ಗುಡುಗು ಸಹಿತ ಭಾರಿ ಮಳೆ ಅಬ್ಬರಿಸಲಿದೆ.
ಹೀಗಾಗಿ ಈ ಎರಡು ದಿನ ಬೆಂಗಳೂರಿಗೆ 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಲಾಗಿದೆ. ಈ ಮುನ್ಸೂಚನೆಯ ದಿನಗಳಲ್ಲಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಆಗಲಿದೆ. ಗರಿಷ್ಟ 12ಸೆಂ.ಮೀ.ವರೆಗೆ ಮಳೆ ಬೀಳಬಹುದು ಎಂದು ಹವಾಮಾನ ಕೇಂದ್ರ ಅಧಿಕಾರಿಗಳು ಅಂದಾಜಿಸಿದ್ದಾರೆ.

ನಗರದಲ್ಲಿ ಮಳೆಯಿಂದ ಚಳಿ ಹೆಚ್ಚಾಗಲಿದೆ
ಕೆಲವು ಬಡಾವಣೆಗಳಲ್ಲಿ ತುಂತುರು ಹಾಗೂ ಸಾಧಾರಣವಾಗಿ ಮಳೆ ಬಿದ್ದರೆ, ಉಳಿದೆಡೆ ಗಂಟೆಗಟ್ಟಲೇ ಧಾರಾಕಾರವಾಗಿ ಅಬ್ಬರಿಸುವ ಸಾಧ್ಯತೆ ಇದೆ. ನಿರಂತರ ಮಳೆಯಿಂದಾಗಿ ನಗರದಲ್ಲಿ ಉಷ್ಣಾಂಶ ಕಡಿಮೆ ಆಗಲಿದೆ. ಈ ಅವಧಿಯಲ್ಲಿ ನಗರಾದ್ಯಂತ ಚಳಿ ಮತ್ತು ಮೋಡ ಕವಿದ ವಾತಾವರಣ ಕಂಡು ಬರಲಿದೆ. ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿ.ಸೆ. ದಾಖಲಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ನಗರದ ಹಲವೆಡೆ ಭಾರಿ ಮಳೆ ದಾಖಲು
ಒಂದು ವಾರದಿಂದ ಹಗರುವಾಗಿ ಸುರಿದಿದ್ದ ವರುಣ ಶುಕ್ರವಾರ ಮಧ್ಯಾಹ್ನದ ವೇಳಗೆ ತೀವ್ರ ಸ್ವರೂಪ ಪಡೆದಿದ್ದಾನೆ. ಬೆಳಗ್ಗೆಯಿಂದ ಕಂಡು ತುಸು ಬಿಸಿಲಿನ ವಾತಾವರಣ ಮಧ್ಯಾಹ್ನವಾಗುತ್ತಿದ್ದಂತೆ ಮರೆಯಾಯಿತು. ಮಧ್ಯಾಹ್ನ 3 ಗಂಟೆ ನಂತರ ನಗರದ ಬಹುತೇಕ ಎಲ್ಲ ಕಡೆಗಳಲ್ಲಿ ಜೋರು ಮಳೆ ಶುರುವಾಯಿತು.
ವಿದ್ಯಾಪೀಠ, ಹೆಮ್ಮಿಗೆಪುರ, ಉತ್ತರಹಳ್ಳಿ, ಕೆಂಗೇರಿ, ಆರ್‌ಆರ್‌ನಗರ, ವಿಜಯನಗರ, ಜಯನಗರ, ಮೆಜೆಸ್ಟಿಕ್, ಬಾಪೂಜಿನಗರ, ದೊಡ್ಡಾನೆಕ್ಕುಂದಿ, ಸಿಂಗಸಂದ್ರ, ಎಚ್‌ಎಎಲ್ ವಿಮಾನ ನಿಲ್ದಾಣ ಸೇರಿದಂತೆ ಬೆಂಗಳೂರಿನಾದ್ಯಂತ ಕೆಲ ಕಾಲ ಜೋರು ಮಳೆ ಅಬ್ಬರಿಸಿತು. ನಂತರ ಕೆಲವು ಪ್ರದೇಶಗಳಲ್ಲಿ ಜಿಟಿ ಜಿಟಿ ಮಳೆ ಮುಂದುವರಿಯಿತು.

ರಸ್ತೆ ಮೇಲೆ ನೀರು: ವಾಹನ ಸವಾರರಿಗೆ ತೊಂದರೆ
ಮಳೆಯಿಂದಾಗಿ ರಸ್ತೆ ಬದಿ ಮತ್ತು ತಳ್ಳು ಗಾಡಿ ವ್ಯಾಪಾರಿಗಳು ವ್ಯಾಪಾರವಿಲ್ಲದೇ ಹೈರಾಣಾದರು. ಕೆ.ಆರ್.ಮಾರುಕಟ್ಟೆ, ಟೌನ್‌ಹಾಲ್, ಚಾಲುಕ್ಯ ವೃತ್ತ, ಶಿವಾಜಿನಗರ, ಕೆ.ಆರ್.ವೃತ್ತ, ಸುಜಾತ, 80 ಅಡಿ ರಸ್ತೆ, ಪಶ್ಚಿಮ ಕಾರ್ಡ್ ರಸ್ತೆ, ನಾಯಂಡಹಳ್ಳಿ ರಸ್ತೆ ಜಂಕ್ಷನ್ ಸೇರಿದಂತೆ ವಿವಿಧೆಡೆ ಪ್ರಮುಖ ರಸ್ತೆಗಳ ಮೇಲೆ ನೀರು ತುಂಬಿ ಹರಿಯಿತು. ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸಿದರು. ಕೆಲವಡೆ ಸಂಚಾರ ದಟ್ಟಣೆಯೂ ಉಂಟಾಯಿತು. ತಗ್ಗು ಪ್ರದೇಶ ಮನೆಗಳಿಗೆ ನೀರು ನುಗ್ಗಿದ್ದು ಕಂಡು ಬಂತು.

ದೊರೆಸಾನಿಪಾಳ್ಯದಲ್ಲಿ ಅಧಿಕ ಮೆಳೆ
ಶುಕ್ರವಾರ ಸಂಜೆ 4.30ರವರೆಗಿನ ಮಾಹಿತಿ ಪ್ರಕಾರ, ಬೆಂಗಳೂರಿನ ದೊರೆಸಾನಿಪಾಳ್ಯದಲ್ಲಿ ಅಧಿಕ 34ಮಿ.ಮೀ. ಮಳೆ ದಾಖಲಾಗಿದೆ. ಉಳಿದಂತೆ ಸಿಂಗಸಂದ್ರ ಮತ್ತು ಬಿಟಿಎಂ ಬಡಾವಣೆಯಲ್ಲಿ ತಲಾ 28.5 ಮಿ.ಮೀ, ಬೇಗೂರು 26 ಮಿ.ಮೀ, ಬಿಳೆಕಳ್ಳಿ 24 ಮಿ.ಮೀ, ಬೊಮ್ಮನಹಳ್ಳಿ 23.5 ಮಿ.ಮೀ, ಅರಕೆರೆ ಹಾಗೂ ಬೆಳ್ಳಂದೂರು 21 ಮಿ.ಮೀ, ನಾಯಂಡಹಳ್ಳಿ 19.5ಮಿ.ಮೀ, ರಾಜರಾಜೇಶ್ವರಿ ನಗರ, ಸಿಂಗಸಂದ್ರ ಮತ್ತು ದೊಡ್ಡಾನೆಕ್ಕುಂದಿ 18.5 ಮಿ.ಮೀ, ದೊಮ್ಮಲೂರು, ಕೋಣನಕುಂಟೆಯಲ್ಲಿ ತಲಾ 18 ಮಿ.ಮೀ. ಮಳೆ ಬಿದ್ದಿದೆ. ಉಳಿದಂತೆ ನಾಗರಬಾವಿ, ಕೋರಮಂಗಲ, ಜೆ.ಪಿ ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಹಗುರ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ತಿಳಿಸಿದೆ.












Click it and Unblock the Notifications