ಖಾಸಗಿ ಆಸ್ಪತ್ರೆ ನಿರ್ಲಕ್ಷ್ಯ; ಕೊರೊನಾಗೆ ನವವಿವಾಹಿತ ಬಲಿ
ಬೆಂಗಳೂರು, ಮೇ 3: ಎರಡು ವಾರಗಳ ಹಿಂದಷ್ಟೇ ಮದುವೆಯಾಗಿದ್ದ 35 ವರ್ಷದ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ನಡೆದಿದೆ.
ಬಿಟಿಎಂ ಲೇಔಟ್ ನಿವಾಸಿ ರಾಮ್ ಎಂಬುವರು ಎರಡು ವಾರದ ಹಿಂದೆ ಕೋಲ್ಕತ್ತಾದಲ್ಲಿ ಮದುವೆಯಾಗಿ, ಹೆಂಡತಿಯೊಂದಿಗೆ ಬೆಂಗಳೂರಿಗೆ ಮರಳಿದ್ದರು. ಬಿಟಿಎಂ ಲೇಔಟ್‌ನಲ್ಲಿ ಅವರು ಮಹಿಳೆಯರ ಪಿ.ಜಿ ನಡೆಸುತ್ತಿದ್ದರು.
ಶನಿವಾರ ಅವರಿಗೆ ಜ್ವರ ಹಾಗೂ ಶೀತ ಕಾಣಿಸಿಕೊಂಡಿದ್ದು, ಖಾಸಗಿ ಆಸ್ಪತ್ರೆಗೆ ತೋರಿಸಿದ್ದರು. ಆದರೆ ಅವರ ಆಮ್ಲಜನಕ ಮಟ್ಟ 80 ಇದ್ದರೂ ಕೆಲವು ಮಾತ್ರೆಗಳನ್ನಷ್ಟೇ ನೀಡಿ ಪರೀಕ್ಷೆಯನ್ನೂ ನಡೆಸದೇ ಆಸ್ಪತ್ರೆಯವರು ಮನೆಗೆ ಕಳುಹಿಸಿದ್ದರು.

ಭಾನುವಾರ ಬೆಳಿಗ್ಗೆ ರಾಮ್ ಎಷ್ಟು ಹೊತ್ತಾದರೂ ಏಳದೇ ಇದ್ದಾಗ ಪತ್ನಿ ಅನುಮಾನಗೊಂಡು ನೋಡಿದಾಗ ರಾಮ್ ಸಾವನ್ನಪ್ಪಿರುವುದು ಕಂಡುಬಂದಿದೆ.
ತಕ್ಷಣವೇ ಬಿಬಿಎಂಪಿ ಅಧಿಕಾರಿಗಳಿಗೆ ಅವರು ಮಾಹಿತಿ ನೀಡಿದ್ದು, ರಾಮ್ ಅವರಿಗೆ ಕೊರೊನಾ ಸೋಂಕು ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅವರಲ್ಲಿ ಆಮ್ಲಜನಕ ಮಟ್ಟ ಇಷ್ಟು ಕಡಿಮೆ ಇದ್ದಾಗ ಖಾಸಗಿ ಆಸ್ಪತ್ರೆಯವರು ಮಾಹಿತಿ ನೀಡಬೇಕಿತ್ತು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಪಿಜಿಯಲ್ಲಿರುವ ಎಲ್ಲಾ ಹದಿನಾರು ಮಹಿಳೆಯರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆ ನಡೆಸಲು ಸಂಗ್ರಹಿಸಲಾಗಿದೆ. ಎಲ್ಲರನ್ನೂ ಐಸೊಲೇಷನ್‌ನಲ್ಲಿರಿಸಲಾಗಿದೆ. ರಾಮ್ ಪತ್ನಿ ಹಾಗೂ ಸಹೋದರನಿಗೂ ಕೊರೊನಾ ಸೋಂಕು ದೃಢಪಟ್ಟಿದೆ.












Click it and Unblock the Notifications