ಬೆಂಗಳೂರಿನಲ್ಲಿ ನವ ವಿವಾಹಿತೆ ಆತ್ಮಹತ್ಯೆಗೆ ಶರಣು!
ಬೆಂಗಳೂರು, ನವೆಂಬರ್ 9 : ನವ ವಿವಾಹಿತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪತಿಯ ಮನೆಯವರು ಹತ್ಯೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಇಟ್ಟಮಡು ನಿವಾಸಿ ಚೇತನ್ ಅವರ ಪತ್ನಿ ಹರ್ಷಿತಾ (25) ಗುರುವಾರ ಪತಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನವೆಂಬರ್ 1ರಂದು ಹರ್ಷಿತಾ ಮತ್ತು ಚೇತನ್ ವಿವಾಹ ಮದ್ದೂರಿನಲ್ಲಿ ನಡೆದಿತ್ತು.

ಚೇತನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹರ್ಷಿತಾ ಅವರು ಸಹ 5 ವರ್ಷಗಳಿಂದ ಬೆಂಗಳೂರಿನಲ್ಲಿದ್ದು ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಪೋಷಕರ ಜೊತೆ ದೇವಾಲಯಕ್ಕೆ ಹೋಗಿದ್ದರು. ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚೇತನ್ ಮನೆಯವರು ನೇಣು ಕುಣಿಕೆ ಬಿಚ್ಚಿ ವಿಕ್ಟೋರಿಯಾ ಆಸ್ಪತ್ರೆಗೆ ಹರ್ಷಿತಾ ಅವರನ್ನು ದಾಖಲು ಮಾಡಿದ್ದರು. ಪತಿಯ ಮನೆಯವರು ಹತ್ಯೆ ಮಾಡಿದ್ದಾರೆ, ಈಗ ಆತ್ಮಹತ್ಯೆ ಎಂದು ಹೇಳುತ್ತಿದ್ದಾರೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.
ಆರು ತಿಂಗಳ ಹಿಂದೆ ಚೇತನ್-ಹರ್ಷಿತಾ ನಿಶ್ಚಿತಾರ್ಥ ನಡೆದಿತ್ತು. ಕೃಷಿಕರಾದ ಹರ್ಷಿತಾ ಮನೆಯವರು ನವೆಂಬರ್ 1ರಂದು ಮದ್ದೂರಿನಲ್ಲಿ ಅದ್ದೂರಿಯಾಗಿಯೇ ವಿವಾಹ ಮಾಡಿಕೊಟ್ಟಿದ್ದರು.
ಗುರುವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಕಾಫಿ ಕುಡಿಯಲೆಂದು ಚೇತನ್ ಕೋಣೆಯಿಂದ ಹೊರಬಂದಾಗ ಹರ್ಷಿತಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚನ್ನಮ್ಮನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications