ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೊಸ ರಸ್ತೆ; ಸರ್ಕಾರದ ಒಪ್ಪಿಗೆ
ಬೆಂಗಳೂರು, ಡಿಸೆಂಬರ್ 07: ಬೆಂಗಳೂರು ನಗರದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚಾಗುತ್ತಿದೆ. ನಗರದಿಂದ ವಿಮಾನ ನಿಲ್ದಾಣಕ್ಕೆ ಮತ್ತೊಂದು ರಸ್ತೆ ನಿರ್ಮಾಣ ಕಾರ್ಯ ಶೀಘ್ರವೇ ಆರಂಭವಾಗಲಿದೆ.
ನಗರದ ಪೂರ್ವ ಮತ್ತು ಈಶಾನ್ಯ ಪ್ರದೇಶಗಳಿಂದ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಜನರಿಗೆ ಇದು ಸಿಹಿಸುದ್ದಿ. ವಿಮಾನ ನಿಲ್ದಾಣಕ್ಕೆ ಹೋಗಲು 3 ರಿಂದ 5 ಕಿ. ಮೀ. ಕಡಿಮೆ ಪ್ರಯಾಣಿಸುವ ರಸ್ತೆ ನಿರ್ಮಾಣ ವಾಗಲಿದೆ.
ಕರ್ನಾಟಕ ಸರ್ಕಾರ ಈಗಾಗಲೇ ಹೊಸ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸ ರಸ್ತೆ ನಿರ್ಮಾಣದ ಮೂಲ ಕೆಲಸಗಳನ್ನು ಆರಂಭಿಸುವಂತೆ ಸೂಚನೆಯನ್ನು ಕೊಟ್ಟಿದೆ. ಈ ರಸ್ತೆ ಸಂಪೂರ್ಣ ಟೋಲ್ ಮುಕ್ತವಾಗಿರಲಿದೆ.
ಮುಂದಿನ ಕೆಲವು ವರ್ಷಗಳಲ್ಲಿ ನಗರದಿಂದ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆಗಳಲ್ಲಿ ಹೆಚ್ಚಾಗುವ ವಾಹನಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ.

ಎರಡು ರಸ್ತೆಗಳು ಇವೆ
ಸಾತನೂರು ಕ್ರಾಸ್-ಚಿಕ್ಕಜಾಲ-ವಿಮಾನ ನಿಲ್ದಾಣ ಸಂಪರ್ಕಿಸುವ ಟೋಲ್ ಸಹಿತ ಹೆದ್ದಾರಿ ಈಗಾಗಲೇ ಇದೆ. ಸಾತನೂರು ಕ್ರಾಸ್-ಬಾಗಲೂರು-ವಿಮಾನ ನಿಲ್ದಾಣ ಸಂಪರ್ಕಿಸುವ 2ನೇ ರಸ್ತೆ ಇದ್ದು, ಇದು ಟೋಲ್ ಫ್ರೀ ರಸ್ತೆಯಾಗಿದೆ.

ವಿಮಾನ ನಿಲ್ದಾಣಕ್ಕೆ 3ನೇ ರಸ್ತೆ
ಕರ್ನಾಟಕ ಸರ್ಕಾರ ಈಗ 3ನೇ ರಸ್ತೆಗೆ ಒಪ್ಪಿಗೆ ಕೊಟ್ಟಿದೆ. ಸಾತನೂರು, ಹೊಸಹಳ್ಳಿ, ಹುಟ್ಟನಹಳ್ಳಿ, ಮೀಸಗಾನಹಳ್ಳಿ, ಬೋಯಿಲಹಳ್ಳಿ, ಬೇಗೂರು ಮೂಲಕ ಈ ರಸ್ತೆ ವಿಮಾನ ನಿಲ್ದಾಣವನ್ನು ಸಂಪರ್ಕಿಸಲಿದೆ. ವಿಮಾನ ನಿಲ್ದಾಣದ ಪ್ರಯಾಣ ಈ ರಸ್ತೆಯಲ್ಲಿ ಸಾಗಿದರೆ 3 ರಿಂದ 5 ಕಿ. ಮೀ. ಕಡಿಮೆಯಾಗಲಿದೆ.

30 ಅಡಿ ರಸ್ತೆ ಇದೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ರಸ್ತೆಯ ಮೂಲ ಕೆಲಸಗಳನ್ನು ಕೈಗೆತ್ತಿಕೊಳ್ಳಲಿದೆ. ಪ್ರಸ್ತುತ 30 ಅಡಿ ರಸ್ತೆ ಇದ್ದು, ಅದನ್ನು ವಿಸ್ತರಣೆ ಮಾಡಲು ಭೂಸ್ವಾಧೀನ ಮಾಡಿಕೊಳ್ಳಬೇಕು. ರಸ್ತೆ ವಿಸ್ತರಣೆ ಕೈಗೊಂಡರೆ ಹಲವಾರು ಗ್ರಾಮಗಳು, ಕೃಷಿ ಜಮೀನು ಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ.
Recommended Video

ವಿಸ್ತರಣೆ ಅಗತ್ಯವಿದೆ
ಈಗ ಇರುವ ರಸ್ತೆಯಲ್ಲಿ ಸಂಚಾರಿ ಪೊಲೀಸರು ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ. ವಿಮಾನ ನಿಲ್ದಾಣದ ಮಾರ್ಗದಲ್ಲಿ ಹೆಚ್ಚಾಗುತ್ತಿರುವ ವಾಹನಗಳ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ರಸ್ತೆ ವಿಸ್ತರಣೆ ಮಾಡುವುದು ಅನಿವಾರ್ಯವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications