ಸದಾ ವಾಹನಗಳಿಂದ ತುಂಬಿರುವ ಬೆಂಗಳೂರಿನ ಈ ರಸ್ತೆಯಲ್ಲಿ ಫ್ಲೈಓವರ್
ಬೆಂಗಳೂರು, ಸೆಪ್ಟೆಂಬರ್ 10: ನಗರದಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಇರುವ ಟಿನ್ ಫ್ಯಾಕ್ಟರಿ ರಸ್ತೆಯಲ್ಲಿ ಶೀಘ್ರವೇ ಫ್ಲೈಓವರ್ ತಲೆ ಎತ್ತಲಿದೆ.
ಯಾವಾಗಲೂ ವಾಹನಗಳಿಂದ ಗಿಜಿಗುಡುತ್ತಿರುವ ಈ ಪ್ರದೇಶದಲ್ಲಿ ಫ್ಲೈಓವರ್ ನಿರ್ಮಾಣವಾದರೆ ಸತ್ಯವಾಗಲೂ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.
ಹೈಪವರ್ಡ್ ಕಮಿಟಿ ಸಭೆಯಲ್ಲಿ ಈ ಹೊಸ ಮೇಲ್ಸೇತುವೆ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ರೋಡ್ ಕಮ್ ಮೆಟ್ರೋ ಸೇವೆ ಯೋಜನೆ ನಿರ್ಮಿಸಲು ನಿರ್ಧರಿಸಲಾಗಿದ್ದು ಅಂಥದ್ದೇ ಜಾಗವನ್ನು ಆರಿಸಿಕೊಳ್ಳಲಾಗಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯಭಾಸ್ಕರ್ ಅವರಿದ್ದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ನಮಗೆ ಈ ಯೋಜನೆ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ, ಮೆಟ್ರೋ ಅಧಿಕಾರಿಗಳ ಜೊತೆ ಕುಳಿತು ಮಾತನಾಡಿ, ನಮ್ಮ ಮೆಟ್ರೋ ಹಾಗೂ ರೈಲ್ವೆ ಪ್ರಯಾಣಿಕರಿಗಾಗಿ ಸ್ಕೈವಾಕ್ ನಿರ್ಮಿಸುವ ಕುರಿತು ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿಕೊಡುವ ಕುರಿತು ಮಾತನಾಡಬೇಕಿದೆ ಎಂದು ಹಿರಿಯ ಸಂಚಾರ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ನಮ್ಮ ಮೆಟ್ರೋ ಕಾಮಗಾರಿಯು ರಸ್ತೆಯನ್ನು ಇನ್ನಷ್ಟು ಕಿರಿದಾಗಿಸುತ್ತಿದೆ
ಈಗಾಗಲೇ ಸಾವಿರಾರು ವಾಹನಗಳಿಂದ ತುಂಬಿ ಹೋಗಿರುವ ಟಿನ್ ಫ್ಯಾಕ್ಟರಿ ರಸ್ತೆಯು ನಮ್ಮ ಮೆಟ್ರೋ ಕಾಮಗಾರಿಯಿಂದಾಗಿ ಇನ್ನಷ್ಟು ಕಿರಿದಾಗುತ್ತಿದೆ. ಹೀಗಾಗಿ ಈ ಪ್ರದೇಶದಲ್ಲಿ ಮೇಲ್ಸೇತುವೆ ನಿರ್ಮಿಸಲು ತೀರ್ಮಾನಿಸಲಾಗಿದೆ.

ಯಾವ ಮೆಟ್ರೋ ಮಾರ್ಗ ಬರುತ್ತದೆ
ವೈಟ್‌ಫೀಲ್ಡ್-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಕೂಡ ಯೋಜನೆ ರೂಪಿಸಲಾಗಿದೆ. ಈ ಎರಡೂ ಮಾರ್ಗವೂ ಟಿನ್ ಫ್ಯಾಕ್ಟರಿ ಮೂಲಕವೇ ಹಾದುಹೋಗುತ್ತವೆ.

ನಮ್ಮ ಮೆಟ್ರೋ ಎಂಡಿ ಅಜಯ್ ಸೇಠ್ ಹೇಳುವುದೇನು?
ಟಿನ್ ಫ್ಯಾಕ್ಟರಿ ರಸ್ತೆಯಲ್ಲಿ ಫ್ಲೈಓವರ್ ನಿರ್ಮಾಣ ಮಾಡುತ್ತಿರುವುದು ಹೌದು ಎಂದು ನಮ್ಮ ಮೆಟ್ರೋ ಎಂಡಿ ಅಜಯ್ ಸೇಠ್ ಸ್ಪಷ್ಟಪಡಿಸಿದ್ದಾರೆ. ಈ ಪ್ರದೇಶದಲ್ಲಿ ಮೆಟ್ರೋ ಕಮ್ ಫ್ಲೈಓವರ್ ನಿರ್ಮಿಸಲಾಗುತ್ತದೆ. ಫ್ಲೈಓವರ್ ನಿರ್ಮಾಣಕ್ಕೂ ಮುನ್ನ ರಸ್ತೆಯ ಅಗಲೀಕರಣ ಬಗ್ಗೆ ಚಿಂತಿಸಲಾಗಿತ್ತು. ಆದರೆ ಇದೀಗ ಫ್ಲೈಓವರ್ ನಿರ್ಮಾಣವೇ ಒಳಿತು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಎಲ್ಲೆಲ್ಲಿಂದ ವಾಹನಗಳು ಬರುತ್ತವೆ
ಹೆಬ್ಬಾಳ, ಮಾರತ್ತಹಳ್ಳಿ, ಮಹದೇವಪುರ ಕಡೆಗೆ ಹೋಗುವ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಅಲ್ಲಿಂದ ಹೊಸಕೋಟೆ, ಕೆಆರ್‌ಪುರಂ, ಔಟರ್ ರಿಂಗ್ ರೋಡ್‌ಗೆ ಹೋಗುತ್ತವೆ.












Click it and Unblock the Notifications