ಬಿಬಿಎಂಪಿ: ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ 1,200 ಕೋಟಿ ರೂ. ಯೋಜನೆಗಳು ಆರಂಭ ಸಾಧ್ಯತೆ
ಬೆಂಗಳೂರು, ಅಕ್ಟೋಬರ್ 06: ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಜೆಪಿ ಅವಧಿಯಲ್ಲಿ ಉಂಟಾದ ಅಸಮಾನತೆಗಳ ನಿವಾರಣೆಗೆ ಮತ್ತು ಕಾಂಗ್ರೆಸ್ ಶಾಕಸರು ತಮ್ಮ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು 1,200 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಬೇಕಾದ ಹೊಸ ಯೋಜನೆಗಳನ್ನು ಆರಂಭಿಸುವ ಸಾಧ್ಯತೆಗಳು ಇವೆ.
ಪಾಲಿಕೆ ವ್ಯಾಪ್ತಿಯ ಯೋಜನೆಗಳಿಗೆ ಅಗತ್ಯವಾದ 1,200 ಕೋಟಿ ರೂ. ಅನುದಾನವನ್ನು 6,000 ಕೋಟಿ ರೂಪಾಯಿ ಮುಖ್ಯಮಂತ್ರಿಗಳ 'ಅಮೃತ ನಗರೋತ್ಥಾನ' ಕಾರ್ಯಕ್ರಮದ ಭಾಗವಾಗಿದೆ, ಕಳೆದ ವರ್ಷ ಇಷ್ಟು ಹಣವನ್ನು ಮಂಜೂರು ಮಾಡಲಾಗಿತ್ತು.

ಬಿಬಿಎಂಪಿಯು ಈಗಾಗಲೇ ಸುಮಾರು 4,800 ಕೋಟಿ ರೂಪಾಯಿಗಳ ಯೋಜನೆಗಳನ್ನು ಆರಂಭಿಸಿದ್ದು, ಯೋಜನೆಗಳಲ್ಲಿ ಕೆಲವು ನಿರ್ಮಾಣ ಹಂತದಲ್ಲಿವೆ. ಇದೇ ವರ್ಷ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಘೋಷಣೆ ಆಗಿದ್ದರಿಂದ ಬಾಕಿ ಹಣ ಬಳಕೆ ಆಗಲಿಲ್ಲ. ಅದು ಈಗ ಯೋಜನೆಗಳಿಗೆ ಬಳಕೆ ಮಾಡಲು ಕಾಂಗ್ರೆಸ್ ಮುಂದಾಗಿದೆ ಎಂದು 'ಡಿಎಚ್' ವರದಿ ಮಾಡಿದೆ.
ಡಿಕೆಶಿ ಒಪ್ಪಿಗೆ ಪಡೆಯುವ ನಿರೀಕ್ಷೆ
ಬಿಬಿಎಂಪಿ ಮಟ್ಟದಲ್ಲಿ ಹಲವು ಯೋಜನೆಗಳಿಗೆ ಹಣ ಸಿಕ್ಕಿದ್ದು, ಕ್ರಿಯಾ ಯೋಜನೆ ಅಂತಿಮಗೊಳಿಸುವ ಮೊದಲು ಬಿಬಿಎಂಪಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಒಪ್ಪಿಗೆ ಪಡೆಯುವ ನಿರೀಕ್ಷೆಯಿದೆ. ಈ ತಿಂಗಳಾಂತ್ಯಕ್ಕೆ ಹೊಸ ಯೋಜನೆಗಳನ್ನು ಘೋಷಣೆ ಆಗುವ ಸಾಧ್ಯತೆಗಳು ಇದೆ ಎನ್ನಲಾಗಿದೆ.
ಗ್ಯಾರಂಟಿ ಯೋಜನೆಗಳ ಮಧ್ಯೆ ಈ ಅನುದಾನವನ್ನು ಬೃಹತ್ ಯೋಜನೆಗಳಿಗೆ ಬಳಸುತ್ತದೆಯೇ ಅಥವಾ ಸಣ್ಣ ಕಾಮಗಾರಿಗಳಿಗೆ ಬಳಸಲಾಗುತ್ತದೆಯೇ ಎಂಬುದು ತಿಳಿದು ಬರಬೇಕಿದೆ.

ರೈಲ್ವೆ ಕ್ರಾಸಿಂಗ್ ಸೇತುವೆ-ಅಂಡರ್‌ಪಾಸ್‌ಗಳಿಗೆ ಹಣ ನೀಡಿ
ಒಂದು ವರ್ಷದ ಹಿಂದೆ ಬಿಬಿಎಂಪಿಯು ರಸ್ತೆ ಬದಿಯ ಒಳಚರಂಡಿಗಳ ಹೂಳು ತೆಗೆಯಲು ಮತ್ತು ಈಗಾಗಲೇ ಸುಸ್ಥಿತಿಯಲ್ಲಿದ್ದ ಪಾದಾಚಾರಿ ಮಾರ್ಗ (ಫುಟ್‌ಪಾತ್) ಸರಿಪಡಿಸಲು ಗಮನಾರ್ಹ ಮೊತ್ತ ಹಂಚಿಕೆ ಮಾಡಿದೆ. ಸಂಚಾರ ದಟ್ಟಣೆಯ ತಾಣಗಳಾಗಿ ಬದಲಾಗಿರುವ ಮಾನವ ರಹಿತ ರೈಲ್ವೆ ಕ್ರಾಸಿಂಗ್‌ಗಳಲ್ಲಿ ಸೇತುವೆಗಳು ಅಥವಾ ಅಂಡರ್‌ಪಾಸ್‌ಗಳ ನಿರ್ಮಾಣಕ್ಕೆ ಸರ್ಕಾರ ಹಣ ಮಂಜೂರು ಮಾಡಲಿ ಎಂಬ ಒತ್ತಾಯ ಕೇಳಿ ಬಂದಿವೆ.
ಭೂಮಾಲೀಕರಿಗೆ ಪರಿಹಾರ ನೀಡಲು ಹಣದ ಕೊರತೆಯಿಂದ ವಿವಿಧ ರಸ್ತೆಗಳ ವಿಸ್ತರಣೆ ಯೋಜನೆಗಳು ಸ್ಥಗಿತಗೊಂಡಿವೆ. ಇದರಿಂದ ಹಣದ ಗಣನೀಯ ಭಾಗವನ್ನು ಆಸ್ತಿ ಸ್ವಾಧೀನಕ್ಕೆ ಮೀಸಲಿಡಬೇಕಾಗಿದೆ. 1,200 ಕೋಟಿ ಅನುದಾನ ಜೊತೆಗೆ ಬಿಬಿಎಂಪಿಗೆ ರಾಜ್ಯ ಬಜೆಟ್ ನಲ್ಲಿ ಭರವಸೆ ನೀಡಿದಂತೆ ಹೊಸದಾಗಿ 800 ಕೋಟಿ ಅನುದಾನ ಬರುವ ನಿರೀಕ್ಷೆ ಇದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಸ್ತೆಗಳ ವೈಟ್ ಟಾಪಿಂಗ್, ಟ್ರಾಫಿಕ್ ಸಮಸ್ಯೆಗಳ ಕಾರಿಡಾರ್‌ಗಳಿಗೆ ವರ್ಧನೆ ಮತ್ತು ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬಳಿ ಮೇಲ್ಸೇತುವೆ ನಿರ್ಮಾಣದ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಪ್ರಮುಖ ಘೋಷಣೆಗಳಾಗಿವೆ.












Click it and Unblock the Notifications