'ರಾಹುಲ್, ನೀವು ಹೇಳಿದ್ದಕ್ಕೆಲ್ಲ ಜೈ ಅನ್ನುವವರಲ್ಲ ನಾವು'!

ಮಳೆ ನಿಂತುಹೋದ ಮೇಲೆ ಹನಿಯೊಂದು ಜಾರಿದೆ, ಮಾತೆಲ್ಲ ಮುಗಿದ ಮೇಲೆ ದನಿಯೊಂದು ಮೂಡಿದೆ ಎನ್ನುವ ಹಾಗೆ, ರಾಹುಲ್ ಗಾಂಧಿಯ ಮೌಂಟ್ ಕಾರ್ಮೆಲ್ ಕಾಲೇಜಿನ ಮೋಜಿನ ಪ್ರಸಂಗ ಇನ್ನೂ ರಿಂಗಿಣಿಸುತ್ತಲೇ ಇದೆ, ಸೋಷಿಯಲ್ ಮೀಡಿಯಾದಲ್ಲಿ ಪ್ರತಿಧ್ವನಿಸುತ್ತಲೇ ಇದೆ. ರಾಹುಲ್ ಅವರಿಗೆ ಮುಜುಗರ ತಂದ ಪ್ರಸಂಗವನ್ನು ಸಮರ್ಥಿಸಿಕೊಂಡು ವಿದ್ಯಾರ್ಥಿನಿಯೊಬ್ಬರು ಬರೆದ ಲೇಖನ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಅದನ್ನು ಇಲ್ಲಿ ಯಥಾವತ್ತಾಗಿ ನೀಡುತ್ತಿದ್ದೇವೆ.

***
ಆತ್ಮೀಯ ರಾಹುಲ್ ಗಾಂಧಿ, ನಮ್ಮ ಕಾಲೇಜಿನಲ್ಲಿ ನಡೆದ ಸಂವಾದದಲ್ಲಿ ಭಾಗವಹಿಸಿದ್ದೆ. ನಿಮ್ಮ ಲೆಕ್ಟರ್ ಕುರಿತು ನನ್ನ ಕೆಲ ಅನಿಸಿಕೆಗಳನ್ನು ಹಂಚಿಕೊಳ್ಳಬೇಕೆಂದಿದ್ದೇನೆ. ಮೊದಲನೇಯದಾಗಿ, ನಾವು ಸ್ವತಂತ್ರವಾಗಿ ವಿಚಾರ ಮಾಡುವಂಥ ಯುವತಿಯರು, ನೀವು ಹೇಳಿದ್ದಕ್ಕೆಲ್ಲ ತಲೆಯಾಡಿಸುವಂಥ, ಜೈಜೈಕಾರ ಮಾಡುವಂಥವರಲ್ಲ.

ನೀವು ಅರುಹಿದ ಕೆಲ ವಿಚಾರಧಾರೆಗಳನ್ನು ನಾವು ಮೆಚ್ಚಿಕೊಂಡೆವು ಮತ್ತು ಬೆಂಬಲಿಸಿದೆವು. ಕೆಲ ವಿಷಯಗಳ ಪ್ರಸ್ತಾಪನೆ ನಮಗೆ ಒಪ್ಪಿಗೆಯಾಗಲಿಲ್ಲ ಮತ್ತು ಅದಕ್ಕೆ ಅಸಮ್ಮತಿ ವ್ಯಕ್ತಪಡಿಸಿದೆವು. ದಯವಿಟ್ಟು ಇದನ್ನು ಕ್ರೀಡಾಸ್ಫೂರ್ತಿಯಿಂದ ತೆಗೆದುಕೊಳ್ಳಿ.

ಒಂದು ವೇಳೆ ಸ್ವಚ್ಛ ಭಾರತ ಅಭಿಯಾನ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ನಿಮ್ಮ ಮಾತು ಒಪ್ಪಿಕೊಂಡಿದ್ದರೂ ಅದು ದೇಶದ ವೈಫ್ಯಲ್ಯತೆಯಾಗುತ್ತದೆಯೇ ಹೊರತು ಪ್ರಧಾನಿ ಅವರದೊಬ್ಬರದೇ ಅಲ್ಲ! ಪೊಲಿಯೋ ಅಭಿಯಾನದಂತೆ ಸ್ವಚ್ಛ ಭಾರತ ಅಭಿಯಾನ ಕೂಡ ಪ್ರತಿ ವ್ಯಕ್ತಿಯ ಭಾಗವಹಿಸುವಿಕೆಯಿಂದ ಸಾಧ್ಯವಾಗುವಂಥದ್ದು. ದಶಕಗಳ ಪ್ರಯತ್ನದ ನಂತರ ಈಗ ಅದರ ಪ್ರತಿಫಲ ಸಿಗುತ್ತಿದೆ. ಇನ್ನು, ದಶಕಗಳಿಂದ, ಶತಮಾನಗಳಿಂದ ದೇಶದಲ್ಲಿ ತುಂಬಿಕೊಂಡಿರುವ ಕೊಳೆಯನ್ನು ಒಂದೇ ವರ್ಷದಲ್ಲಿ ತೊಲಗಿಸಲು ಹೇಗೆ ಸಾಧ್ಯ? [#RahulStumped? ನೋ ವೆ ಅಂತಾರೆ ಕಾರ್ಮೆಲ್ ಯುವತಿ]

Never play with fire or youth women, Rahul

ನೀವು ಮತ್ತು ನಾವು ಸೇರಿದಂತೆ ಎಲ್ಲರೂ ಸಾಂಸ್ಕೃತಿಕ ಬದಲಾವಣೆ ತರಬೇಕು. ಕೇವಲ ಮೋದಿ ಮತ್ತು ಅವರ ಅಧಿಕಾರಿಗಳಿಂದ ದೇಶವನ್ನು ಸ್ವಚ್ಛಗೊಳಿಸಲು ಸಾಧ್ಯವೆ? ಸಾಧ್ಯವೇಇಲ್ಲ. ದೇಶದ ಉದ್ಧಾರಕ್ಕಾಗಿ ಆರಂಭಿಸಿದಂಥ ಇಂಥ ಅಭಿಯಾನದ ಯಶಸ್ಸಿಗಾಗಿ ನಾವು ಪ್ರತಿಯೊಬ್ಬರೂ ಕೈಜೋಡಿಸಬೇಕು.

ಏನೇ ಆಗಲಿ, ದೇಶದ ಬಗ್ಗೆ ಸಕಾರಾತ್ಮಕ ಧೋರಣೆ ಇರುವಂಥ ನನ್ನಂಥ ಲಕ್ಷಾಂತರ ಯುವಕ ಯುವತಿಯರೆಲ್ಲ ಸೇರಿಕೊಂಡು ನಮ್ಮ ಸುತ್ತಮುತ್ತಲಿನ ಪ್ರದೇಶ ಸ್ವಚ್ಛ ಮಾಡುವುದು, ಜನರಲ್ಲಿ ಜಾಗೃತಿ ಮೂಡಿಸುವುದು, ಕಸದಬುಟ್ಟಿ ಹಂಚುವುದನ್ನು, ನಮಗಿರುವ ನಿಯಮಿತ ಸಾಮರ್ಥ್ಯದಲ್ಲಿಯೇ ಸಾಧ್ಯವಾದಮಟ್ಟಿಗೆ ಮಾಡುತ್ತಿದ್ದೇವೆ. ಅದಕ್ಕಾಗಿ, ನೀವು ಕೇಳಿದ ಪ್ರಶ್ನೆಗೆ ನಾನು 'ಯಸ್' ಎಂದು ಉತ್ತರಿಸಿದೆ. [ಅಂಗೈ ತೋರಿಸಿ ಅವಲಕ್ಷಣ ಎನ್ನಿಸಿಕೊಂಡ ರಾಹುಲ್!]

ಎರಡನೇಯದಾಗಿ, ಮೇಕ್ ಇನ್ ಇಂಡಿಯಾ ಫ್ಲಾಪ್ ಆಗಿದೆ ಎಂಬ ಪ್ರಶ್ನೆಗೆ ಅಲ್ಲಿಯೇ ಉತ್ತರಿಸಬೇಕೆಂದಿದ್ದೆ. ಆದರೆ, ಅಲ್ಲಿ ಸಾಕಷ್ಟು ಗದ್ದಲವೆದ್ದಿದ್ದರಿಂದ ಸಾಧ್ಯವಾಗಲಿಲ್ಲ. ಈ ಕಾರ್ಯಕ್ರಮ ಯಶಸ್ವಿಯಾಗಲು ನೀವು ಏನಾದರೂ ಮಾಡಿದ್ದೀರಾ? ಮೇಕ್ ಇನ್ ಇಂಡಿಯಾ ಸಾಧ್ಯವಾಗಿಸಲು ಮಸೂದೆಗಳನ್ನು ಅನುಮೋದಿಸುವುದನ್ನು ಹೊರತುಪಡಿಸಿ ನಿಮ್ಮನ್ನು ಏನೂ ಕೇಳಿಲ್ಲ. ಇದನ್ನು ಮಾಡ್ತೀರಾ? ಸಣ್ಣಸಣ್ಣ ಸಂಗತಿಗಳಿಗೆ ಜಾತಿ ಬಣ್ಣ ಬಳಿದು ದೇಶದ ದಾರಿ ತಪ್ಪಿಸಲು ಯತ್ನಿಸುತ್ತೀರಿ.

ನಿಮ್ಮ ಅಹಂಕಾರ ಪಕ್ಕಕ್ಕಿಡಿ, ದೇಶ ಮುಂದುವರಿಯಲು ಸಹಾಯ ಮಾಡಿ. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಮೋದಿಯವರು ಬೇಟಿ ಬಚಾವೋ, ಬೇಟಿ ಪಢಾವೋ ಅಭಿಯಾನ ಶುರು ಮಾಡಿದ್ದಾರೆ. ಅದನ್ನಾದರೂ ಬೆಂಬಲಿಸಿದಿರಾ? ನಿಮ್ಮಿಂದ ಒಂದೇಒಂದು ಸಕಾರಾತ್ಮಕ ಮಾತು ಕೇಳಿಬಂದಿಲ್ಲ. ನಿಮ್ಮ ಮಾತು ಒಂದೇ, ಸರಕಾರ ಸರಿಯಿಲ್ಲ. ಸರಕಾರ ಸರಿ ಕೆಲಸ ಮಾಡುತ್ತಿಲ್ಲ ಅಂತ ಯಾರೇ ಹೇಳಿದರೂ ಬೆಂಬಲಿಸುತ್ತೀರಿ. ಕೆಲ ಕೆಲಸಗಳು ಕೆಟ್ಟದ್ದಿರಬಹುಹು, ಕೆಲವು ಒಳ್ಳೆಯವೂ ಇವೆ.

ಪ್ರಧಾನಿ ಸೂಟ್ ಹಾಕುವುದನ್ನೇ ದೊಡ್ಡ ಇಶ್ಶೂ ಮಾಡುತ್ತಿದ್ದೀರಿ ಮತ್ತು ಹೊದಲ್ಲೆಲ್ಲ ಅದನ್ನೇ ಮಾತಾಡುತ್ತಿದ್ದೀರಿ. ಅದೇ ಮುಲಾಯಂ ತಮ್ಮ ಹುಟ್ಟುಹಬ್ಬದಂದು 90 ಕೋಟಿ ಖರ್ಚು ಮಾಡಿದ ಸಂಗತಿಯನ್ನು ಪ್ರಶ್ನಿಸಿದ್ದೀರಾ?

ನಾನೇನು ಬಿಜೆಪಿ ಭಕ್ತನಲ್ಲ. ದೇಶ ಮುನ್ನಡೆಯಬೇಕು ಎಂದು ಆಶಿಸುವ ಸಾಮಾನ್ಯ ವಿದ್ಯಾರ್ಥಿನಿ ಅಷ್ಟೆ. ನಮಗೆ ಸಕಾರಾತ್ಮಕವಾಗಿ ಮತ್ತು ರಚನಾತ್ಮಕವಾಗಿ ಕೆಲಸ ಮಾಡುವುದನ್ನು ಕಲಿಸಲಾಗಿದೆ. ನಿಮಗೂ ಅದನ್ನೇ ಹೇಳುತ್ತೇನೆ. ಸರಕಾರ ಮಾಡುತ್ತಿರುವ ಪ್ರತಿಯೊಂದನ್ನೂ ವಿರೋಧಿಸುವ ನಾಯಕ ನಮಗೆ ಬೇಕಿಲ್ಲ. ಇದು ಸಮಂಜಸವೂ ಅಲ್ಲ. ಯಾವುದನ್ನು ವಿರೋಧಿಸಬೇಕೋ ಅದನ್ನು ವಿರೋಧಿಸಿ, ಯಾವುದನ್ನು ಬೆಂಬಲಿಸಬೇಕೋ ಅದನ್ನು ಬೆಂಬಲಿಸಿ.

ಕಡೆಯದಾಗಿ, ನಿಮಗೆ ಮುಜುಗರ ತಂದವರಿಗೆ ಪಾಠ ಕಲಿಸಿ ಎಂದು ಬೆಂಗಳೂರಿಂದ ಹೊರಡುವ ಮುನ್ನ ರಾಜ್ಯ ಸರಕಾರಕ್ಕೆ ಹೇಳಿ ಹೋಗಿದ್ದೀರಂತೆ. ಇಲ್ಲಿ ನಡೆದಿದ್ದನ್ನೇ ಪ್ರತಿಷ್ಠೆಯನ್ನಾಗಿಸಿ ನೀವು ಈ ಮಟ್ಟಕ್ಕೆ ಇಳಿಯುತ್ತಿರುವುದು ನಿಜಕ್ಕೂ ದುರಾದೃಷ್ಟಕರ. ನಮ್ಮ ಕಾಲೇಜಿನ ವಿದ್ಯಾರ್ಥಿನಿಯರನ್ನು ಮತ್ತೆ ಕೆಣಕಬೇಡಿ. ಹಾಗೇನಾದರೂ ನಿಮ್ಮ ರಾಜ್ಯ ಸರಕಾರ ಮಾಡಿದರೆ ನಾವು ಮತ್ತೆ ಅದೇ ರೀತಿ ಪ್ರತಿಕ್ರಿಯಿಸಬೇಕಾಗುತ್ತದೆ, ಅದೂ ಇನ್ನೂ ದೊಡ್ಡ ಮಟ್ಟದಲ್ಲಿ.

ಅದೇನೋ ಕನ್ನಡದಲ್ಲಿ ಹೇಳ್ತಾರಲ್ಲ, ಬೆಂಕಿಯೊಂದಿಗೆ ಮತ್ತು ಯುವ ನಾರಿಯರೊಂದಿಗೆ ಯಾವತ್ತಿಗೂ ಸರಸವಾಡಬೇಡಿ. ಒಲಿದರೆ ನಾರಿ, ಮುನಿದರೆ ಮಾರಿ ಎಂಬುದನ್ನು ಮರೆಯಬೇಡಿ.

ಇಂತಿ,

ಮಾಧುರಿ, ಮೌಂಟ್ ಕಾರ್ಮೆಲ್ ಕಾಲೇಜು ವಿದ್ಯಾರ್ಥಿನಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+