Bengaluru Suburban Rail: ಮಲ್ಲಿಗೆ ಕಾರಿಡಾರ್ 8 ನಿಲ್ದಾಣ ನಿರ್ಮಾಣ ಅಪ್‌ಡೇಟ್
ಬೆಂಗಳೂರು, ಜನವರಿ 05: ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಜಾರಿಗೊಳಿಸಲಾಗುತ್ತಿದೆ. 148 ಕಿ. ಮೀ. ಉದ್ದದ ಈ ಯೋಜನೆಯು 4 ಕಾರಿಡಾರ್ ಒಳಗೊಂಡಿದೆ. ರಾಜ್ಯ ಸರ್ಕಾರ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಮಲ್ಲಿಗೆ ಕಾರಿಡಾರ್ ಕಾಮಗಾರಿ ಚುರುಕಿನಿಂದ ಸಾಗಿದೆ. 2026ಕ್ಕೆ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ಬೆನ್ನಿಗಾನಹಳ್ಳಿ-ಯಶವಂತಪುರ-ಚಿಕ್ಕಬಣಾವರ ಮಾರ್ಗದ 24.8 ಕಿ. ಮೀ. ಮಾರ್ಗಕ್ಕೆ 'ಮಲ್ಲಿಗೆ' ಕಾರಿಡಾರ್ ಎಂದು ನಾಮಕರಣ ಮಾಡಲಾಗಿದೆ. ಈ ಮಾರ್ಗದ ಪ್ರಮುಖ ಅಪ್‌ಡೇಟ್ ಒಂದು ಈಗ ಲಭ್ಯವಾಗಿದೆ. ಈ ಮಾರ್ಗದ 8 ನಿಲ್ದಾಣಗಳನ್ನು ನಿರ್ಮಾಣ ಮಾಡಲು ಕೆ-ರೈಡ್ 501 ಕೋಟಿ ರೂ. ಮೊತ್ತದ ಟೆಂಡರ್ ಅನ್ನು ಅಂತಿಮಗೊಳಿಸಿದೆ.

ಟೆಂಡರ್ ಮಾಹಿತಿಯಂತೆ 8 ನಿಲ್ದಾಣಗಳ ನಿರ್ಮಾಣ ಮಾತ್ರವಲ್ಲ. ಸಬ್ ಅರ್ಬನ್ ರೈಲು ನಿಲ್ದಾಣ ನಿರ್ಮಾಣ, ಪ್ರವೇಶ/ ನಿರ್ಗಮನ ದ್ವಾರ ನಿರ್ಮಾಣ, ಪಾದಚಾರಿ ಮೇಲ್ಸೇತುವೆ ನಿರ್ಮಾಣ, ಪಿಇಬಿ ಕಾಮಗಾರಿ, ಎಲೆಕ್ಟ್ರಿಕ್ ಕೆಲಸಗಳು, ಡಿಡಿಸಿ ಕೆಲಸಗಳನ್ನು ಸಹ ಟೆಂಡರ್ ಪಡೆದ ಕಂಪನಿ ಮಾಡಬೇಕಿದೆ.
ಯಾರ ಪಾಲಾಗಿದೆ ಟೆಂಡರ್?; ಜನವರಿ 3ರಂದು ಕೆ-ರೈಡ್ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ (ಎನ್‌ಸಿಸಿ)ಗೆ 8 ನಿಲ್ದಾಣಗಳನ್ನು ನಿರ್ಮಾಣ ಮಾಡುವ ಟೆಂಡರ್‌ನ ಪತ್ರವನ್ನು ಹಸ್ತಾಂತರ ಮಾಡಿದೆ. ಎನ್‌ಸಿಸಿ, ರೈಲ್ವೆ ವಿಕಾಸ್ ನಿಗಮ ಲಿಮಿಟೆಡ್, ಜೆ. ಕುಮಾರ್ ಇನ್‌ಫ್ರಾ ಪ್ರಾಜೆಕ್ಟ್ ಲಿಮಿಟೆಡ್ ಈ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದವು.
ಎನ್‌ಸಿಸಿ ಕಾರಿಡಾರ್ 2ಎನಲ್ಲಿ ಬೆನ್ನಿಗಾನಹಳ್ಳಿ, ಕಸ್ತೂರಿ ನಗರಿ, ಸೇವಾ ನಗರ, ಬಾಣಸವಾಡಿ, ನಾಗವಾರ, ಕನಕನಗರ, ಹೆಬ್ಬಾಳ ಮತ್ತು ಮತ್ತಿಕೆರೆ ಮತ್ತು ಕಾರಿಡಾರ್ 2ಬಿನಲ್ಲಿ ಯಶವಂತಪುರ, ಶೆಟ್ಟಿಹಳ್ಳಿ, ಮೈದಾರಹಳ್ಳಿ ಮತ್ತು ಚಿಕ್ಕಬಣಾವರ ನಿಲ್ದಾಣಗಳನ್ನು ನಿರ್ಮಾಣ ಮಾಡಲಿದೆ.
2024ರ ಸೆಪ್ಟೆಂಬರ್‌ನಲ್ಲಿ ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸಬ್ ಅರ್ಬನ್ ರೈಲು ಯೋಜನೆ ಕುರಿತು ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದ್ದರು. ಈ ಸಭೆಯಲ್ಲಿ 2026ರ ಡಿಸೆಂಬರ್‌ನಲ್ಲಿ ಬೆನ್ನಿಗಾನಹಳ್ಳಿ-ಚಿಕ್ಕಬಣಾವರ ಮತ್ತು ಹೀಲಲಿಗೆ-ರಾಜನಕುಂಟೆ ಕಾರಿಡಾರ್‌ಗಳು ಸಂಚಾರಕ್ಕೆ ಮುಕ್ತವಾಗಲಿವೆ ಎಂದು ಎಂದು ಹೇಳಿದ್ದರು.
ಕರ್ನಾಟಕ ಸರ್ಕಾರ ಈಗಾಗಲೇ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ)ಗೆ 306 ರೈಲು ಬೋಗಿ ಖರೀದಿ ಮಾಡಲು ಒಪ್ಪಿಗೆ ನೀಡಿದೆ, ಇದರ ವೆಚ್ಚ ಸುಮಾರು 4,300 ಕೋಟಿ ರೂ.ಗಳು. ಇದಕ್ಕಾಗಿ ಕೆ-ರೈಡ್ ಇನ್ನೂ ಟೆಂಡರ್ ಕರೆಯಬೇಕಿದೆ. ರೈಲುಗಳ ಖರೀದಿಗೆ ಕರ್ನಾಟಕ ಸರ್ಕಾರ ಶೇ 50ರಷ್ಟು ಅಂದರೆ 2,135 ಕೋಟಿ ಅನುದಾನವನ್ನು ನೀಡಲಿದೆ. ಉಳಿದ ಅನುದಾನವನ್ನು ಕೇಂದ್ರ ಸರ್ಕಾರ ನೀಡಲಿದೆ.
ಕೇಂದ್ರ ರೈಲ್ವೆ ಸಚಿವಾಲಯದ ಒಪ್ಪಿಗೆ ಬಳಿಕ ರೈಲು ಬೋಗಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಬೇಗ ಒಪ್ಪಿಗೆ ಸಿಕ್ಕಿ, ಪ್ರಕ್ರಿಯೆ ಆರಂಭಿಸಿದರೆ ಎಲ್ಲಾ ಬೋಗಿ ಪೂರೈಕೆಗೆ ಸುಮಾರು ಮೂರುವರೆ ವರ್ಷಗಳು ಬೇಕು ಎಂದು ಅಂದಾಜಿಸಲಾಗಿದೆ.
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ
* ಮಲ್ಲಿಗೆ ಕಾರಿಡಾರ್: ಬೈಯಪ್ಪನಹಳ್ಳಿ-ಚಿಕ್ಕಬಣಾವರ (24.8 ಕಿ. ಮೀ.)
* ಕನಕ ಕಾರಿಡಾರ್: ಹೀಲಲಿಗೆ-ರಾಜನಕುಂಟೆ (46.2 ಕಿ. ಮೀ.)
* ಸಂಪಿಗೆ ಕಾರಿಡಾರ್: ಕೆಎಸ್ಆರ್ ಬೆಂಗಳೂರು-ಯಲಹಂಕ (41 ಕಿ. ಮೀ.)
* ಪಾರಿಜಾತ ಕಾರಿಡಾರ್: ಕೆಂಗೇರಿ-ವೈಟ್‌ಫೀಲ್ಡ್ (35.52 ಕಿ. ಮೀ.)












Click it and Unblock the Notifications