NCB ಕಾರ್ಯಚರಣೆ: ಬೆಂಗಳೂರಿಗೆ ಹ್ಯಾಷಿಶ್ ಆಯಿಲ್ ಸಪ್ಲೇ ಮಾಡ್ತಿದ್ದ ಪೆಡ್ಲರ್ಸ್ ಅರೆಸ್ಟ್
ಬೆಂಗಳೂರು, ಏ. 14: ನೇಪಾಳದಿಂದ ಉತ್ತರ ಪ್ರದೇಶಕ್ಕೆ ಹ್ಯಾಷಿಶ್ ಮಾದಕ ವಸ್ತು ಪೂರೈಕೆ ಮಾಡಲಾಗುತ್ತದೆ. ಅಲ್ಲಿಂದ ಬೆಂಗಳೂರಿಗೆ ಸಾಗಣೆ ಮಾಡಿ ಇಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಜಾಲ ವರ್ಷಗಳಿಂದ ಸಕ್ರಿಯವಾಗಿದೆ!
ಇಂತಹ ಸ್ಫೋಟಕ ಸಂಗತಿ ಎನ್‌ಸಿಬಿ ಅಧಿಕಾರಿಗಳ ಕಾರ್ಯಚರಣೆಯಲ್ಲಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದಿಂದ ರೈಲಿನಲ್ಲಿ ಬೆಂಗಳೂರಿಗೆ ಹ್ಯಾಷಿಶ್ ಆಯಿಲ್ ಸಾಗಣೆ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್ ಗಳನ್ನು ಬೆಂಗಳೂರು ವಲಯದ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 7 ಲಕ್ಷ ರೂ. ಮೌಲ್ಯದ 3.176 ಕೆ.ಜಿ ಹ್ಯಾಷಿಶ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿಚಾರಣೆ ವೇಳೆ ನೇಪಾಳ ಮತ್ತು ಬೆಂಗಳೂರು ನಡುವಿನ ಡ್ರಗ್ ಲಿಂಕ್ ಇರುವ ಸ್ಫೋಟಕ ಸಂಗತಿ ಹೊರ ಬಿದ್ದಿದೆ.

ಉತ್ತರ ಪ್ರದೇಶದಿಂದ ಬೆಂಗಳೂರಿಗೆ ಹ್ಯಾಷಿಶ್ ಆಯಿಲ್ ಡ್ರಗ್ ರವಾನೆ ಮಾಡುತ್ತಿರುವ ಖಚಿತ ಮಾಹಿತಿ ಎನ್‌ಸಿಬಿ ಅಧಿಕಾರಿಗಳಿಗೆ ಸಿಕ್ಕಿತ್ತು. ಪ್ರಯಾಣಿಕರ ಸೋಗಿನಲ್ಲಿ ಎನ್‌ಸಿಬಿ ಅಧಿಕಾರಿಗಳು ಯಶವಂತಪುರ ರೈಲ್ವೇ ನಿಲ್ದಾಣ ಸೇರಿದ್ದರು. ಉತ್ತರ ಪ್ರದೇಶದ ಲಕ್ನೋದಿಂದ ಬೆಂಗಳೂರಿಗೆ ಟ್ರೈನ್‌ನಲ್ಲಿ ಬರುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಹ್ಯಾಷಿಶ್ ಆಯಿಲ್ ಮಾದಕ ವಸ್ತುವನ್ನು ಅರು ಪಾಕೆಟ್‌ಗಳಲ್ಲಿ ಸುತ್ತಿ ಬಟ್ಟೆಗಳಿದ್ದ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದರು. ಇಬ್ಬರನ್ನು ಮಾಲು ಸಮೇತ ಬಂಧಿಸಿದ್ದು, ಈ ವೇಳೆ ನೇಪಾಳದಿಂದ ಹ್ಯಾಷಿಶ್ ಆಯಿಲ್ ಸಪ್ಲೇ ಮಾಡ್ತಿರುವ ಸಂಗತಿ ಬಾಯಿ ಬಿಟ್ಟಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ಹ್ಯಾಷಿಶ್ ಆಯಿಲ್ ಖರೀದಿ ಮಾಡಲು ಬಂದಿದ್ದ ಆರೋಪಿಯನ್ನು ಇದೇ ವೇಳೆ ಬಂಧಿಸಿದ್ದಾರೆ. ಈ ಮೂಲಕ ಹಲವು ವರ್ಷದಿಂದ ಉತ್ತರ ಪ್ರದೇಶದಿಂದ ಬೆಂಗಳೂರಿಗೆ ಮಾದಕ ವಸ್ತು ರವಾನೆ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿದಂತಾಗಿದೆ. ಇದೀಗ ನೇಪಾಳ ಮತ್ತು ಭಾರತ ನಡುವಿನ ಡ್ರಗ್ ಜಾಲ ಬೇಧಿಸುವ ಕಾರ್ಯದಲ್ಲಿ ಎನ್‌ಸಿಬಿ ಅಧಿಕಾರಿಗಳು ನಿರತರವಾಗಿದ್ದಾರೆ.

ಗಾಂಜಾ ಗಿಡಗಳಿಂದ ಹ್ಯಾಷಿಶ್ ಆಯಿಲ್ ತೆಗೆಯಲಾಗುತ್ತದೆ. ಈ ರೂಪದ ಮಾದಕ ವಸ್ತುವಿಗೆ ಡ್ರಗ್ ಮಾರ್ಕೆಟ್ ನಲ್ಲಿ ಬಾರೀ ಬೇಡಿಕೆ ಮತ್ತು ದುಬಾರಿ ಬೆಲೆಯಿದೆ. ಸಿಗರೇಟ್, ಬಾಂಗ್ , ಮತ್ತಿತರ ಮಾರ್ಗಗಳ ಮೂಲಕ ಹ್ಯಾಷಿಶ್ ಆಯಿಲ್ ಸೇವನೆ ಮಾಡಿ ನಶೆ ಲೋಕದಲ್ಲಿ ತೇಲಾಡುತ್ತಾರೆ.












Click it and Unblock the Notifications