ಹಬ್ಬ ಮುಗಿಯುತ್ತಿದ್ದಂತೆ ಬಟ್ಟೆಗಳೆಲ್ಲಾ ವಾಪಸ್! ಆನ್‌ಲೈನ್ ಶಾಪಿಂಗ್ ಹುಚ್ಚಿಗೆ ಬೆಚ್ಚಿಬಿದ್ದ ಡೆಲಿವರಿ ಬಾಯ್
ಹಬ್ಬದ ಸೀಸನ್ ಬಂತೆಂದರೆ ಸಾಕು ಮಿಶೋ, ಅಮೆಜಾನ್, ಪ್ಲಿಪ್‌ಕಾರ್ಟ್ ಸೇರಿದಂತೆ ಇತರ ಆನ್‌ಲೈನ್ ಶಾಪಿಂಗ್ ಆ್ಯಪ್‌ಗಳಲ್ಲಿ ಭರ್ಜರಿ ಆಫರ್‌ಗಳ ಸುರಿಮಳೆಯೇ ಇರುತ್ತದೆ. ಅದರಲ್ಲೂ ನವರಾತ್ರಿ ಮತ್ತು ದಸರಾ ಹಬ್ಬದ ಸಂದರ್ಭದಲ್ಲಿ ಹೊಸ ಬಟ್ಟೆಗಳನ್ನ ಖರೀದಿಸುವವರ ಸಂಖ್ಯೆ ಹೆಚ್ಚಾಗಿರುತ್ತದೆ. ದಾಂಡಿಯಾ ಮತ್ತು ಗರ್ಬಾ ನೃತ್ಯಗಳಿಗಾಗಿ ದಿನಕ್ಕೊಂದು ಬಣ್ಣದ, ವಿಭಿನ್ನ ವಿನ್ಯಾಸದ ಉಡುಪುಗಳನ್ನ ಧರಿಸುವುದು ಇತ್ತೀಚಿನ ಟ್ರೆಂಡ್. ಆದರೆ, ಹಬ್ಬ ಮುಗಿದ ತಕ್ಷಣ ಈ ಬಟ್ಟೆಗಳ ಕಥೆ ಏನಾಗುತ್ತದೆ ಎಂಬ ಆಘಾತಕಾರಿ ಸತ್ಯವೊಂದು ಇದೀಗ ಬಯಲಾಗಿದೆ.
ಕೇವಲ ಫೋಟೋಗಳಿಗಾಗಿ ಮತ್ತು ಒಂದು ದಿನದ ಸಂಭ್ರಮಕ್ಕಾಗಿ ಆನ್‌ಲೈನ್‌ನಲ್ಲಿ ದುಬಾರಿ ಬಟ್ಟೆಗಳನ್ನ ಆರ್ಡರ್ ಮಾಡಿ, ಹಬ್ಬ ಮುಗಿದ ಕೂಡಲೇ ಅವುಗಳನ್ನ ರಿಟರ್ನ್ ಮಾಡುವ ಅಮಾನವೀಯ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ವೈರಲ್ ವಿಡಿಯೋ: ಬೆಚ್ಚಿಬಿದ್ದ ಡೆಲಿವರಿ ಏಜೆಂಟ್
ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ನಿಶಾಂತ್ ಚಾಂಟ್ ಎಂಬುವವರು ಹಂಚಿಕೊಂಡಿರುವ ವೈರಲ್ ವಿಡಿಯೋ ಪ್ರಸ್ತುತ ಎಲ್ಲರ ಗಮನ ಸೆಳೆಯುತ್ತಿದೆ. ಒಂದು ದೊಡ್ಡ ಅಪಾರ್ಟ್‌ಮೆಂಟ್ ಆವರಣದಲ್ಲಿ ಡೆಲಿವರಿ ಏಜೆಂಟ್ ಒಬ್ಬರು ರಾಶಿ ರಾಶಿ ಪಾರ್ಸೆಲ್‌ಗಳನ್ನ ಕಲೆಹಾಕುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ.
ಈ ಪಾರ್ಸೆಲ್‌ಗಳ ಮೇಲಿರುವ ಶಿಪ್ಪಿಂಗ್ ಲೇಬಲ್‌ಗಳು ಮತ್ತು ಬಾರ್‌ಕೋಡ್‌ಗಳನ್ನ ಗಮನಿಸಿದರೆ, ಇವೆಲ್ಲವೂ ಇ-ಕಾಮರ್ಸ್ ವೆಬ್‌ಸೈಟ್‌ಗಳಿಂದ ಖರೀದಿಸಿ, ಇದೀಗ ವಾಪಸ್ ಮಾಡಲಾಗುತ್ತಿರುವ ನವರಾತ್ರಿ ಬಟ್ಟೆಗಳು ಎಂಬುದು ಸ್ಪಷ್ಟವಾಗುತ್ತದೆ.
ಗುಲಾಬಿ ಬಣ್ಣದ ದೊಡ್ಡ ಬ್ಯಾಗ್‌ಗಳು ಮತ್ತು ಬಿಳಿ ಚೀಲಗಳಲ್ಲಿ ತುಂಬಿ ತುಳುಕುತ್ತಿರುವ ಈ ಪಾರ್ಸೆಲ್‌ಗಳ ರಾಶಿಯನ್ನ ನೋಡಿ ನೆಟ್ಟಿಗರು ದಂಗಾಗಿದ್ದಾರೆ.
ಇ-ಕಾಮರ್ಸ್ ರಿಟರ್ನ್ಸ್
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಆ್ಯಪ್ ಮತ್ತು ವೆಬ್‌ಸೈಟ್‌ಗಳಲ್ಲಿ ನೀಡುವ ಇಝೀ ರಿಟರ್ನ್ ಪಾಲಿಸಿಯನ್ನ ಗ್ರಾಹಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಈ ಪಾರ್ಸೆಲ್‌ಗಳ ರಾಶಿಯೇ ಒಂದೊಳ್ಳೆ ಉದಾಹರಣೆ. ದಾಂಡಿಯಾ ಫ್ಯಾಷನ್ ಹೆಸರಿನಲ್ಲಿ ನೃತ್ಯದ ಕಾರ್ಯಕ್ರಮಗಳಿಗೆ ಹೋಗಲು ಹೊಸ ಬಟ್ಟೆ ಬೇಕು, ಆದರೆ ಅದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡಲು ಸಿದ್ಧರಿಲ್ಲದ ಕೆಲವರು, ಈ ಅಡ್ಡ ದಾರಿ ಹಿಡಿದಿದ್ದಾರೆ.
Dandiya khatam ... Dress returnShameless generation https://t.co/Jzqye1WZeV
— Nishant (@Nishantchant) October 16, 2026
ಆನ್‌ಲೈನ್‌ನಲ್ಲಿ ಬಟ್ಟೆ ಆರ್ಡರ್ ಮಾಡುವುದು, ಬಹಳ ಎಚ್ಚರಿಕೆಯಿಂದ ಅದನ್ನ ಧರಿಸಿ ಸಂಭ್ರಮಿಸುವುದು, ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು, ಮರುದಿನವೇ ಆ ಬಟ್ಟೆಯನ್ನು 'ಸೈಜ್ ಸರಿಯಿಲ್ಲ' ಅಥವಾ 'ಗುಣಮಟ್ಟ ಚೆನ್ನಾಗಿಲ್ಲ' ಎಂಬ ನೆಪಕೊಟ್ಟು ವಾಪಸ್ ಮಾಡುವುದು.
ಇದು ಇಂದಿನ ಯುವಜನತೆಯ ಶೋ-ಆಫ್ ಸಂಸ್ಕೃತಿಯ ಕರಾಳ ಮುಖವನ್ನ ಅನಾವರಣಗೊಳಿಸಿದೆ. ಈ ರೀತಿಯ ಇ-ಕಾಮರ್ಸ್ ರಿಟರ್ನ್ಸ್ ಪ್ರಮಾಣ ಹಬ್ಬದ ನಂತರ ವಿಪರೀತವಾಗಿ ಏರಿಕೆಯಾಗುತ್ತದೆ.
ಮಾರಾಟಗಾರರಿಗೆ ನಷ್ಟ: ನೆಟ್ಟಿಗರ ಆಕ್ರೋಶ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಕಮೆಂಟ್ ಬಾಕ್ಸ್‌ನಲ್ಲಿ ನೆಟ್ಟಿಗರು ತಮ್ಮ ಆಕ್ರೋಶವನ್ನ ಹೊರಹಾಕುತ್ತಿದ್ದಾರೆ. "ದಾಂಡಿಯಾ ಮುಗೀತು... ಡ್ರೆಸ್ ರಿಟರ್ನ್ ಆಯ್ತು. ಇದೊಂದು ನಾಚಿಕೆಗೆಟ್ಟ ಪೀಳಿಗೆ" ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿತ್ತು.
ಇದಕ್ಕೆ ದನಿಗೂಡಿಸಿರುವ ಅನೇಕರು, ಈ ರೀತಿ ಮಾಡುವುದರಿಂದ ಸಣ್ಣಪುಟ್ಟ ಮಾರಾಟಗಾರರು ಎದುರಿಸುವ ಕಷ್ಟಗಳನ್ನ ಬಿಚ್ಚಿಟ್ಟಿದ್ದಾರೆ. ಪಾರ್ಸೆಲ್ ಕಳುಹಿಸುವ ಮತ್ತು ವಾಪಸ್ ಪಡೆಯುವ ಲಾಜಿಸ್ಟಿಕ್ಸ್ ವೆಚ್ಚ, ಪ್ಯಾಕಿಂಗ್ ಖರ್ಚು ಇದೆಲ್ಲವೂ ಮಾರಾಟಗಾರರ ತಲೆಗೇ ಬೀಳುತ್ತದೆ. ಒಮ್ಮೆ ಬಳಸಿದ ಬಟ್ಟೆಯನ್ನ ಮತ್ತೆ ಹೊಸದೆಂದು ಮಾರಾಟ ಮಾಡಲು ಸಾಧ್ಯವಾಗದೆ ಅವರು ಅನುಭವಿಸುವ ಆರ್ಥಿಕ ನಷ್ಟದ ಬಗ್ಗೆ ಯಾರಿಗೂ ಕಾಳಜಿ ಇಲ್ಲವೇ ಎಂದು ಹಲವರು ಪ್ರಶ್ನಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸುತ್ತಾ, "ಒಂದೆಡೆ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಲು ಹಣವಿಲ್ಲದೆ ಒದ್ದಾಡುವ ಬಡವರಿದ್ದಾರೆ. ಮತ್ತೊಂದೆಡೆ ಕೇವಲ ತಮ್ಮ ಪ್ರತಿಷ್ಠೆಗಾಗಿ ಬಟ್ಟೆ ಖರೀದಿಸಿ, ಬಳಸಿ ವಾಪಸ್ ಮಾಡುವ ಇಂತಹ ಜನರೂ ಇದ್ದಾರೆ. ಇಂಥವರಿಂದಲೇ ಆನ್‌ಲೈನ್ ಶಾಪಿಂಗ್ ಆ್ಯಪ್ ಮತ್ತು ವೆಬ್‌ಸೈಟ್‌ಗಳಲ್ಲಿ 24 ಗಂಟೆಗಳ ಕಠಿಣ ರಿಟರ್ನ್ ಪಾಲಿಸಿಯನ್ನ ಜಾರಿಗೆ ತರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications
