ನಿಲೇಕಣಿ ಗೆಲ್ಲಿಸಲೇಬೇಕು- ಸೋನಿಯಾ ಗುಪ್ತ ಎಚ್ಚರಿಕೆ
ಬೆಂಗಳೂರು, ಏಪ್ರಿಲ್ 2: 'ಅಮೇಠಿಯಲ್ಲಿ ರಾಹುಲ್ ಗಾಂಧಿ ಸೋಲ್ತಾರಾ, ರಾಯ್ ಬರೇಲಿಯಲ್ಲಿ ನಾನು ಸೋಲ್ತೀನಾ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಅದರ ಬದಲಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಸೋಲದಂತೆ ನೋಡಿಕೊಳ್ಳಿ. ಈ ಬಗ್ಗೆ ಜಾಗ್ರತೆ ವಹಿಸಿ' ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಗುಪ್ತ ಎಚ್ಚರಿಕೆ ರವಾನಿಸಿದ್ದಾರೆ.
'ಯಾವುದೇ ಕಾರಣಕ್ಕೂ ಬೆಂಗಳೂರು ದಕ್ಷಿಣದಲ್ಲಿ ನಂದನ್ ನಿಲೇಕಣಿ ಸೋಲಬಾರದು' ಎಂದು ಸಿದ್ದರಾಮಯ್ಯ ಸರ್ಕಾರ ಮತ್ತು ಕೆಪಿಸಿಸಿಗೆ ಸೋನಿಯಾ ಕಟ್ಟಪ್ಪಣೆ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದರಿಂದ ಬೆಂಗಳೂರು ದಕ್ಷಿಣ ಕ್ಷೇತ್ರದ ಫಲಿತಾಂಶ ಈ ಬಾರಿ ಕೇವಲ ರಾಜ್ಯಕ್ಕೆ ಮಾತ್ರವಲ್ಲ, ದೇಶದ ಮಟ್ಟದಲ್ಲೂ ತೀವ್ರ ಕುತೂಹಲ ಕೆರಳಿಸುವ ಸಾಧ್ಯತೆಯಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಕೇಂದ್ರದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೋ, ಬಿಡುತ್ತದೋ. ಅದರ ಉಸಾಬರಿ ಬೇಡ. ಹೇಳಿ ಕೇಳಿ ನಂದನ್ ನಿಲೇಕಣಿ ನನ್ನ ಅಭ್ಯರ್ಥಿ. ಇಲ್ಲಿ ನಿಲೇಕಣಿ ಗೆದ್ದರೆ ಸೋನಿಯಾ ಗಾಂಧಿಯೇ ಗೆದ್ದಂತೆ. ಒಂದು ವೇಳೆ ಸೋತು ಬಿಟ್ಟರೆ ಸೋನಿಯಾ ಗಾಂಧಿ ಸೋತಂತೆ. ಇದನ್ನು ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕೆಂದು ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಶಾಸಕರು, ಕಾರ್ಪೊರೇಟರುಗಳಿಗೂ ಸೋನಿಯಾ ಅವರಿಂದ ಫರ್ಮಾನು ಬಂದಿದೆಯಂತೆ ಎಂಬ ಮಾತು ಹೆಚ್ಚಾಗಿ ಕೇಳಿಬರುತ್ತಿದೆ.
'ಇಷ್ಟು ವರ್ಷ ಹಾಲಿ ಸಂಸದ ಅನಂತ ಕುಮಾರ್ ನಿಜವಾಗಿಯೂ ಜನರ ಪ್ರೀತಿ ವಿಶ್ವಾಸದಿಂದ ಗೆದ್ದಿಲ್ಲ. ನಮ್ಮವರೇ ಕಡೆ ಗಳಿಗೆಯಲ್ಲಿ ಅವರತ್ತ ಸಹಾಯಹಸ್ತ ಚಾಚುತ್ತಾ ಬಂದ ಕಾರಣ ಅವರು ಸತತವಾಗಿ ಗೆಲ್ಲುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಅಂತಹ ಯಾವುದೇ ಪ್ರಯತ್ನ ನಡೆದರೆ ಸುಮ್ಮನಿರುವುದಿಲ್ಲ ಎಂದೂ ಸೋನಿಯಾ ಕಟ್ಟಪ್ಪಣೆ ಮಾಡಿರುವುದಾಗಿ ತಿಳಿದುಬಂದಿದೆ.












Click it and Unblock the Notifications