RV Road-Bommasandra Metro Line: ಹೆಚ್ಚಾಯ್ತು ಪ್ರಯಾಣಿಕರ ಸಂಖ್ಯೆ! 4ನೇ ರೈಲಿನ ಸಂಚಾರ ಯಾವಾಗ?
ಬೆಂಗಳೂರು, ಸೆಪ್ಟಂಬರ್ 01: ಬೆಂಗಳೂರು ನಮ್ಮ ಮೆಟ್ರೋ ಯೆಲ್ಲೋ ಲೈನ್ ನಲ್ಲಿ ಕಡಿಮೆ ರೈಲುಗಳ ಸೇವೆಯ ಹೊರತಾಗಿಯು ಪ್ರಯಾಣಿಕರ ಹೆಚ್ಚಾಗುತ್ತಿದ್ದಾರೆ. ಆರ್‌ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊದಲ ದಿನವೇ 52,000 ಜನರು ಪ್ರಯಾಣಿಸಿದ್ದ ಈ ಮಾರ್ಗದಲ್ಲಿ ದೈನಂದಿನ ಪ್ರಯಾಣಿಕರ ಮೆಟ್ರೋ ಮೇಲಿನ ಅವಲಂಬನೆ ಏರಿಕೆ ಆಗಿದೆ ಎಂದು BMRCL ಮೂಲಗಳು ಮಾಹಿತಿ ನೀಡಿವೆ.
ಹೌದು, ಆಗಸ್ಟ್ 10 ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಈ ಮೆಟ್ರೋ ಹಳದಿ ಮಾರ್ಗ ಉದ್ಘಾಟಿಸಿದ್ದರು. ಅಂದಿನಿಂದ ಈವರೆಗೆ 20 ದಿನಗಳ ಡ್ರೈವರ್‌ಲೆಸ್ ಮೆಟ್ರೋ ಸೇವೆ ಮುಂದುವರಿದಿದೆ. ಪ್ರತಿ 25 ನಿಮಿಷಕ್ಕೆ ಒಂದಂತೆ 3 ರೈಲುಗಳು ಸಂಚರಿಸುತ್ತಿವೆ. ನಾಲ್ಕನೇ ರೈಲು ಪರೀಕ್ಷೆ ಹಂತದಲ್ಲಿದೆ. ಈ ಮೆಟ್ರೋ ಲೈನ್‌ನಿಂದ ಸಿಲ್ಕ್‌ಬೋರ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ಭಾಗದಲ್ಲಿದ್ದ ಸಂಚಾರ ದಟ್ಟಣೆ ಪ್ರಮಾಣ ಕಡಿಮೆ ಆಗಿದೆ.

ಕೇವಲ ಮೂರೇ ರೈಲುಗಳ ಸಂಚಾರದಿಂದಾಗಿ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಬಹುದೆಂದು ಅಂದಾಜಿಸಲಾಗಿತ್ತು. ಇಲ್ಲವೇ ಅರ್ಧದಷ್ಟು ಜನರ ಮೆಟ್ರೋ ಅವಲಂಬನೆ ಕಡಿಮೆ ಆಗಬಹುದು ಅಂತಲೂ ಹೇಳಲಾಗಿತ್ತು. ಇದೀಗ ಪ್ರಯಾಣಿಕರ ಸಂಖ್ಯೆ ಸ್ಥಿರವಾಗಿದೆ. ಒಂದು ದಿನಕ್ಕೆ 60,000 ಜನರು ಪ್ರಯಾಣ ಮಾಡುತ್ತಿದ್ದಾರೆ. ಈ ಪೈಕಿ ಸಂಜೆ ಸಮಯದಲ್ಲಿ ಹೆಚ್ಚಿನ ದಟ್ಟಣೆ ಕಂಡು ಬರುತ್ತಿದೆ. ಏಕೆಂದರೆ ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಸುತ್ತಮುತ್ತಲಿನ ಕೈಗಾರಿಕಾ ಕೇಂದ್ರಗಳಲ್ಲಿ ನೆಲೆಸಿದವರು ಬೆಳಗ್ಗೆ ಕ್ಯಾಬ್‌ಗಳಿಗೆ ಹೋದರೂ ಸಹಿತ ಸಂಜೆ ಮನೆಗೆ ಬೇಗ ತೆರಳಲು ಮೆಟ್ರೋ ಸಾರಿಗೆ ಬಳಸುತ್ತಿದ್ದಾರೆ. ಇದರಿಂದಾಗಿ ರಸ್ತೆ ಸಾರಿಗೆಗಿಂತ ಮೆಟ್ರೋ ಸಾರಿಗೆಯು ಕನಿಷ್ಠ 30 ನಿಮಿಷಗಳ ಸಂಚಾರ ಸಮಯ ಕಡಿಮೆ ಮಾಡಿದೆ.
ಕೇವಲ ಈ ಭಾಗಗಳಲ್ಲಿ ಮಾತ್ರವಲ್ಲದೇ ಬೊಮ್ಮಸಂದ್ರ, ಎಂ.ಜಿ. ರಸ್ತೆ ಸಂಪರ್ಕಿಸುವ ರಸ್ತೆಗಳ ಸಂಚಾರವು ಕಡಿಮೆ ಮಾಡಿದೆ ಎಂದು ತಿಳಿದು ಬಂದಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯ ಸುತ್ತಲಿನ ದಟ್ಟಣೆ ಕಡಿಮೆ ಆಗಿದ್ದು ಖಚಿತವಾಗಿದೆ. ಮುಂದಿನ ದಿನಗಳಲ್ಲಿ ರೈಲು ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಈ ಭಾಗದಲ್ಲಿ ಓಡಾಡುವವರು ಖಾಸಗಿ ವಾಹನ ಮೇಲಿನ ಅವಲಂಬನೆ ಕಡಿಮೆ ಮಾಡಲಿದೆ. ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದೆಂದು ಸಾರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನಾಲ್ಕನೇ ರೈಲಿನ ಸಂಚಾರ ಯಾವಾಗ?
ಆಗಸ್ಟ್ 14ರಂದು ನಾಲ್ಕನೇ ರೈಲಿನ ಆರು ಬೋಗಿಗಳು ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದಿಳಿದವು. ಅವುಗಳನ್ನು ಹಳಿ ಮೇಲೆ ಜೋಡಿಸಿ ವಿವಿಧ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ ಪರೀಕ್ಷೆ ಆರಂಭವಾಗಿದೆ. ಸದ್ಯ ರಾತ್ರಿ ಹೊತ್ತು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇನ್ನೇನು ವಾರಗಳಲ್ಲಿ ಆ ರೈಲು ಸಹ ಹಳದಿ ಮಾರ್ಗದಲ್ಲಿ ಸೇವೆ ಆರಂಭಿಸುವ ನಿರೀಕ್ಷೆ ಇದೆ. ಇದು ಸಾಧ್ಯವಾದಲ್ಲಿ 25 ನಿಮಿಷಗಳಿಗೆ ಇರುವ ಮೆಟ್ರೋ ರೈಲಿನ ಆವರ್ತನವು ಸುಮಾರು 18-20 ನಿಮಿಷಗಳಿಗೆ ಇಳಿಕೆ ಆಗಲಿದೆ. ಆಗ ಒಂದು ರೈಲಿನಿಂದ ಮತ್ತೊಂದು ರೈಲು ಹತ್ತಲು ಇರುವ ಸಮಯ ತಗ್ಗಲಿದೆ. ಪ್ರಯಾಣಿಕರ ಕಾಯುವಿಕೆ ಕಡಿಮೆ ಆಗಲಿದೆ ಎಂದು ಸಾರಿಗೆ ತಜ್ಞರು ಮಾಹಿತಿ ನೀಡಿದ್ದಾರೆ.
ಇದೇ ಮೆಟ್ರೋ ಯೆಲ್ಲೋ ಮಾರ್ಗವನ್ನು ಅತ್ತಿಬೆಲೆವರೆಗೂ ವಿಸ್ತರಣೆ ಮಾಡಲು ಪ್ಲಾನ್ ಸಹ ಇದೆ. ಈ ಬಗ್ಗೆ ವ್ಯಾಪಕ ಪರ ವಿರೋಧಗಳು ಚರ್ಚೆ ಆಗುತ್ತಿವೆ. ಆರ್‌ವಿ.ರಸ್ತೆ-ಬೊಮ್ಮಸಂದ್ರವರೆಗಿನ 19 ಕಿಮಿ ಮಾರ್ಗದಲ್ಲಿ 15 ರೈಲುಗಳು ಸಂಚಾರ ಮಾಡುವ ನಿರೀಕ್ಷೆ ಇದೆ. ಅಕ್ಟೋಬರ್ ತಿಂಗಳಿನಿಂದ ಮೆಟ್ರೋ ತಯಾರಕ ಕಂಪನಿ ಟಾಟಾಗಢ್ ಪ್ರತಿ ತಿಂಗಳಿಗೆ ಎರಡು ರೈಲನ್ನು ಬೆಂಗಳೂರಿಗೆ ರವಾನಿಸುವ ಭರವಸೆ ನೀಡಿದೆ.












Click it and Unblock the Notifications