Gode Bengaluru: ನಮ್ಮ ಮೆಟ್ರೋ ಗೋಡೆಗಳ ಮೇಲೆ ಪ್ರಸಿದ್ಧ ಕಲಾವಿದರ ಕೈಚಳಕ
ಬೆಂಗಳೂರು, ನವೆಂಬರ್ 18: ಬೆಂಗಳೂರಿನಲ್ಲಿ ಸರ್ಕಾರ, ಖಾಸಗಿ ಮಾಲೀಕತ್ವದ ಕಟ್ಟಡಗಳ ಗೋಡೆಗಳು ಸುಂದರವಾಗಿ, ಕಂಗೊಳಿಸುವಂತೆ ಮಾಡಲು ಈ ಹಿಂದೆ ಅನ್‌ಬಾಕ್ಸಿಂಗ್ ಬೆಂಗಳೂರು ಫೌಂಡೇಷನ್ ಸಹಯೋಗದಲ್ಲಿ "ಗೋಡೆ ಬೆಂಗಳೂರು" ಉಪಕ್ರಮವನ್ನು ಈಗಾಗಲೇ ಘೋಷಣೆ ಮಾಡಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಬೆಂಗಳೂರು ನಮ್ಮ ಮೆಟ್ರೋ ಗೋಡೆಗಳು ಬಣ್ಣ, ಚಿತ್ರಾರಗಳಿಂದ ಕಂಗೊಳಿಸಲಿವೆ.
ಹೌದು, "ಗೋಡೆ ಬೆಂಗಳೂರು" ಉಪಕ್ರಮಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಸಹ ಸಹಕಾರ ನೀಡಿದೆ. ಇದೇ ಉಪಕ್ರಮದ ಅಡಿಯಲ್ಲಿ ನಗರದ ಒಟ್ಟು 10 ಗೋಡೆಗಳನ್ನು ಚಿತ್ರಗಳ ಮೂಲಕ ಅಲಂಕರಿಸಲು ಕಲಾವಿದರು ಸಜ್ಜಾಗಿದ್ದಾರೆ.

ಬೆಂಗಳೂರಿನ ಪ್ರಮುಖ ಮೆಟ್ರೋ ನಿಲ್ದಾಣಗಳಾದ ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜು ನಿಲ್ದಾಣ, ಜಯನಗರ ನಿಲ್ದಾಣ, ಆರ್.ವಿ (ರಾಷ್ಟ್ರೀಯ ವಿದ್ಯಾಲಯ) ರಸ್ತೆ ನಿಲ್ದಾಣ, ಜೆಪಿ ನಗರ ನಿಲ್ದಾಣ, ಯಶವಂತಪುರ ನಿಲ್ದಾಣ, ಹಲಸೂರು ನಿಲ್ದಾಣ ಮತ್ತು ಶ್ರೀರಾಂಪುರ ಮತ್ತು ಇನ್ನೆರಡು ಗೋಡೆಗಳಲ್ಲಿ ಚರ್ಚ್ ಸ್ಟ್ರೀಟ್ ಮತ್ತು ಸೈನ್ಸ್ ಗ್ಯಾಲರಿ ಗೋಡೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಸಿದ್ಧ ಕಲಾವಿದರು ಈ ಗೋಡೆಗಳ ಮೇಲೆ ಚಿತ್ರ ಬಿಡಲಿದ್ದಾರೆ.
ಈ ಕುರಿತು ಮಾತನಾಡಿದ ಗೋಡೆ ಬೆಂಗಳೂರು ಬಿಎಲ್ಆರ್ (GodeBLR)ನ ಮುಖ್ಯ ಮೇಲ್ವಿಚಾರಕಿ ಕಾಮಿನಿ ಸಾಹ್ನಿ 'ಬೆಂಗಳೂರು ಹ್ಯೂಸ್' ಎಂಬ ಥೀಮ್‌ನೊಂದಿಗೆ, ಗೋಡೆ ಬಿಎಲ್ಆರ್, ಬೆಂಗಳೂರಿನ ಶ್ರೀಮಂತ ಇತಿಹಾಸ ಮತ್ತು ಪರಂಪರೆಯಿಂದ ಹಿಡಿದು, ವೈವಿಧ್ಯಮಯ ಜನ ಸಮುದಾಯ ಮತ್ತು ನೈಸರ್ಗಿಕ ಸೌಂದರ್ಯದವರೆಗೆ, ನಗರದ ಬಹುಮುಖಿ ಅಸ್ಮಿತೆಯ ಕಲಾತ್ಮಕ ಆಚರಿಸಲಿದೆ ಎಂದು ಮಾಹಿತಿ ನೀಡಿದರು.
ಚಿತ್ರ ಬಿಡಿಸಲು ಸಜ್ಜಾದ 10 ಕಲಾವಿದರ ತಂಡ
ಟೀಮ್ ಗಿಚ್‌ಪಿಚ್, ಅರವಾಣಿ ಆರ್ಟ್ ಪ್ರಾಜೆಕ್ಟ್, ಮಂಜುನಾಥ ಹೊನ್ನಾಪುರ, ಮಂಜುನಾಥ ಎಚ್. ಪಿ., ಪರಮ್ ಆರ್ಟ್ ಸ್ಟುಡಿಯೋಸ್, ರೋಹಿತ್ ಭಾಸಿ, ಸಂತೋಷ್ ಪತ್ತಾರ್, ಶಾಂತಮಣಿ ಮುದ್ದಯ್ಯ, ಅಂಪು ವರ್ಕಿ ಮತ್ತು ಅನಿಲ್ ಕುಮಾರ್ ಸೇರಿದಂತೆ ಪ್ರಸಿದ್ಧ ಕಲಾವಿದರು ಈ ತಂಡದಲ್ಲಿದ್ದಾರೆ.
ವೈವಿಧ್ಯಮಯ ಚಿತ್ರಗಳನ್ನು ಬಿಡಿಸಿ ಬಣ್ಣ ತುಂಬಲಿದ್ದಾರೆ. ಆಯ್ಕೆ ಮಾಡಿ ಈ ಎಲ್ಲಾ 10 ಗೋಡೆಗಳ ಮೇಲೆ ಜನಮನಸೂರೆಗೊಳ್ಳಬಲ್ಲ ಕಲಾಕೃತಿಗಳನ್ನು ರಚಿಸಲಿದ್ದಾರೆ. ಪ್ರತಿಯೊಂದೂ ಬೆಂಗಳೂರಿನ ಚೈತನ್ಯವನ್ನು ಪ್ರತಿಬಿಂಬಿಸುವ ಮತ್ತು ನಗರದ ಶಕ್ತಿಯನ್ನು ಸೆರೆಹಿಡಿಯುವ ವಿಶಿಷ್ಟ ಕಥೆಯನ್ನು ಹೇಳಲಿವೆ.
ಇದರೊಂದಿಗೆ ನಮ್ಮ ಕಲೆ, ಸಂಸ್ಕೃತಿ, ಆಚರಣೆ, ಇಲ್ಲಿನ ಸೊಬಗನ್ನು ಕುಂಚದಿಂದ ಗೋಡೆಗಳ ಮೇಲೆ ಬಿಡಿಸಲಾಗುತ್ತದೆ. ಸ್ಥಳೀಯ ಸಂಸ್ಕೃತಿ ಬಗ್ಗೆ ತಿಳಿಸುವ ಉದ್ದೇಶದಿಂದ ಈ ಹಿಂದೆಯು ಕಲಾವಿದರ ನಗರದ ವಿವಿಧೆಡೆ ಗೋಡೆಗಳನ್ನು ಅಲಂಕರಿಸಿದ್ದರು.












Click it and Unblock the Notifications