ಬಿಎಂಆರ್‌ಸಿಎಲ್ ಮುಂದೆ ಹೊಸ ಬೇಡಿಕೆ ಮುಂದಿಟ್ಟ ಮೆಟ್ರೋ ಪ್ರಯಾಣಿಕರು
ಬೆಂಗಳೂರು, ಏಪ್ರಿಲ್ 08: ಉದ್ಯಾನ ನಗರಿ ಬೆಂಗಳೂರಿನ ಜನರು ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಹೊಂದಿಕೊಂಡಿಲ್ಲ. ದರ ಏರಿಕೆ ಮಾಡಿರುವ ಬಿಎಂಆರ್‌ಸಿಎಲ್ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಲೇ ಇದ್ದಾರೆ. 2017ರ ಬಳಿಕ ಮೊದಲ ಬಾರಿಗೆ ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಲಾಗಿದ್ದು, ಫೆಬ್ರವರಿ 9ರಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಕುಸಿತವಾಗಿದೆ.
ಬಿಎಂಆರ್‌ಸಿಎಲ್ ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ ಅನ್ವಯ ದರ ನಿಗದಿ ಸಮಿತಿಯ ಶಿಫಾರಸಿಯ ಅನ್ವಯ ದರ ಏರಿಕೆ ಮಾಡಲಾಗಿದೆ. ಮೆಟ್ರೋ ಕಾರ್ಯಾಚರಣೆಯ ವೆಚ್ಚ ಅಧಿಕವಾಗುತ್ತಿದ್ದು, ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿತ್ತು ಎಂದು ಬಿಎಂಆರ್‌ಸಿಎಲ್ ತನ್ನ ತೀರ್ಮಾನವನ್ನು ಸಮರ್ಥಿಸಿಕೊಂಡು, ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ.

ದರ ಏರಿಕೆ ಬಳಿಕ ಮೆಟ್ರೋ ದಿನಕ್ಕೆ ಒಂದು ಲಕ್ಷ ಪ್ರಯಾಣಿಕರನ್ನು ಕಳೆದುಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಬೆಂಗಳೂರು ಮೆಟ್ರೋ ಪ್ರಯಾಣಿಕರು ಈಗ ಬಿಎಂಆರ್‌ಸಿಎಲ್ ಮುಂದೆ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ದರ ನಿಗದಿ ಸಮಿತಿಯ ವರದಿ ಮತ್ತು ಪ್ರಯಾಣಿಕರಿಂದ ಆಗುವ ಆದಾಯ ಸಂಗ್ರಹದ ಅಂಕಿ ಅಂಶವನ್ನು ಬಹಿರಂಗ ಮಾಡಿ ಎಂದು ಒತ್ತಾಯಿಸಿದ್ದಾರೆ.
ಶೇ 71ರಷ್ಟು ದರ ಏರಿಕೆ ಮಾಡುವ ಮೂಲಕ ನಮ್ಮ ಮೆಟ್ರೋ ದೇಶದಲ್ಲಿಯೇ ಅತಿ ದುಬಾರಿ ಮೆಟ್ರೋ ಎಂಬ ಖ್ಯಾತಿ ಪಡೆದುಕೊಂಡಿದೆ. ಆದರೆ ಬಿಎಂಆರ್‌ಸಿಎಲ್ ದರ ನಿಗದಿ ಸಮಿತಿಯ ವರದಿಯನ್ನು ಬಹಿರಂಗ ಮಾಡಲು ಇನ್ನೂ ಸಹ ಒಪ್ಪಿಗೆ ನೀಡಿಲ್ಲ. ಆರ್‌ಟಿಐ ಅಡಿ ಪ್ರಶ್ನಿಸಿದಾಗಲೂ ಈ ವಿವರ ನೀಡಲು ಸಾಧ್ಯವಿಲ್ಲ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಮನಿ ಕಂಟ್ರೋಲ್ ಈ ಕುರಿತು ಆರ್‌ಟಿಐ ಅಡಿ ಮಾಹಿತಿ ಕೇಳಿತ್ತು. ದರ ನಿಗದಿ ಸಮಿತಿಯ ವರದಿಯನ್ನು ಬಿಎಂಆರ್‌ಸಿಎಲ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಬಳಿಕ ಸಾರ್ವಜನಿಕರ ಮಾಹಿತಿಗೆ ನೀಡಲಾಗುತ್ತದೆ. ಅಲ್ಲದೇ 2025 ಜನವರಿ 1 ರಿಂದ ಮಾರ್ಚ್ 31ರ ತನಕದ ಟಿಕೆಟ್ ಆದಾಯ ಎಷ್ಟು? ಎಂಬ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಈಗಾಗಲೇ ಮನಿ ಕಂಟ್ರೋಲ್ ವರದಿ ಮಾಡಿರುವ ಪ್ರಕಾರ ಬಿಎಂಆರ್‌ಸಿಎಲ್ ದರ ನಿಗದಿ ಸಮಿತಿಯ ಸದಸ್ಯರು ವಿದೇಶದ ಮೆಟ್ರೋ ದರಗಳ ಕುರಿತು ಅಧ್ಯಯನ ನಡೆಸಲು 26 ಲಕ್ಷ ರೂ. ಖರ್ಚು ಮಾಡಿದ್ದಾರೆ. ಹಾಂಗ್‌ಕಾಂಗ್, ಸಿಂಗಾಪುರಕ್ಕೆ ತೆರಳಿ ಅಧ್ಯಯನ ಮಾಡಿದ ಬಳಿಕ ತಮ್ಮ ವರದಿಯನ್ನು ಸಲ್ಲಿಕೆ ಮಾಡಿದ್ದು, ಸಮಿತಿಯ ಶಿಫಾರಸು ಆಧರಿಸಿ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಲಾಗಿದೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ ಪಿ. ಸಿ. ಮೋಹನ್ ದರ ನಿಗದಿ ಸಮಿತಿಯ ವರದಿ ಬಗ್ಗೆ ಟೀಕೆಗಳನ್ನು ಮಾಡಿದ್ದಾರೆ. ಕಬ್ಬನ್ ಪಾರ್ಕ್‌ನಿಂದ ಬೈಯಪ್ಪನಹಳ್ಳಿಗೆ 28 ರೂ. ದರವಿದೆ. ವಿಧಾನಸೌಧ (ಕಬ್ಬನ್ ಪಾರ್ಕ್‌ಗಿಂತ ಹಿಂದಿನ ನಿಲ್ದಾಣ)ದಿಂದ ಬೈಯಪ್ಪನಹಳ್ಳಿಗೆ 38 ರೂ. ದರವಿದೆ. ಇದು ಯಾವ ಮಾದರಿಯ ದರ ಏರಿಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡುವ ಮೂಲಕ ಜನರು ಅನಿವಾರ್ಯವಾಗಿ ತಮ್ಮ ಖಾಸಗಿ ವಾಹನವನ್ನು ಹೊರಗೆ ತೆಗೆಯುವಂತೆ ಬಿಎಂಆರ್‌ಸಿಎಲ್ ಮಾಡಿದೆ ಎಂದು ಜನರು ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಮೆಟ್ರೋ ದರ ಏರಿಕೆ ಬಳಿಕ ಜನರ ಆಕ್ರೋಶ ನೋಡಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಟ್ರೋ ದರ ಪರಿಷ್ಕರಣೆ ಮಾಡಬೇಕು ಎಂದು ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿದ್ದರು. ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿತ್ತು. ಯಾವ ಮಾದರಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ? ಎಂಬುದು ಮಾತ್ರ ಜನರಿಗೆ ಇನ್ನೂ ಅರ್ಥವಾಗಿಲ್ಲ.












Click it and Unblock the Notifications