ಮೆಟ್ರೋದ ಪೂ-ಪ ಕಾರಿಡಾರ್ ಪ್ರಾಯೋಗಿಕ ಸಂಚಾರ ಶೀಘ್ರ
ಬೆಂಗಳೂರು, ಮೇ 15 : ನಮ್ಮ ಮೆಟ್ರೋದ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮೈಸೂರು ರಸ್ತೆವರೆಗಿನ ಪೂರ್ವ-ಪಶ್ಚಿಮ ಕಾರಿಡಾರ್ ನಲ್ಲಿ ಇನ್ನು ನಾಲ್ಕು ತಿಂಗಳಿನಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಹೇಳಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ, ಈ ಮಾರ್ಗದಲ್ಲಿ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಂಡಿದೆ. ಸಣ್ಣ-ಪುಟ್ಟ ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು, ನಾಲ್ಕು ತಿಂಗಳಿನಲ್ಲಿ ಅದು ಪೂರ್ಣಗೊಳ್ಳಲಿದೆ ಎಂದರು.

ಎಲ್ಲಾ ಕಾಮಗಾರಿಗಳು ಮುಗಿದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮೈಸೂರು ರಸ್ತೆ ವರೆಗಿನ ಪೂರ್ವ-ಪಶ್ಚಿಮ ಕಾರಿಡಾರ್ ನಲ್ಲಿ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರ ಆರಂಭಗೊಳ್ಳಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ ಎಂದು ಖರೋಲಾ ಅವರು ವಿವರಿಸಿದರು. [ಮೆಟ್ರೋ ಎಫೆಕ್ಟ್: ರಿಯಲ್ ಎಸ್ಟೇಟ್ ಗಗನಕ್ಕೆ]
ನವೆಂಬರ್ ವೇಳೆಗೆ ಪೂರ್ಣ : ಸದ್ಯ ಸಂಪಿಗೆ ರಸ್ತೆ-ಪೀಣ್ಯ ನಡುವೆ ರೈಲು ಸಂಚಾರ ನಡೆಯುತ್ತಿದೆ. ಪೀಣ್ಯದಿಂದ ಹೆಸರಘಟ್ಟದವರೆಗಿನ ಮಾರ್ಗ ನವೆಂಬರ್ ನಲ್ಲಿ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಸೋಪ್ ಫ್ಯಾಕ್ಟರಿ ನಿಲ್ದಾಣದ ಕಾಮಗಾರಿ ಒಂದು ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ ಎಂದು ಖರೋಲಾ ಅವರು ಹೇಳಿದರು.
ನಮ್ಮ ಮೆಟ್ರೋ ರೈಲಿನಲ್ಲಿ ಸಂಚಾರ ದಟ್ಟಣೆ ಅವಧಿಯಲ್ಲಿ ಅಂದರೆ ಬೆಳಗ್ಗೆ ಮತ್ತು ಸಂಜೆ ಪ್ರಯಾಣಿಕರು ಹದಿನೈದು ಕೆಜಿಗಿಂತ ಹೆಚ್ಚು ತೂಕದ ತಮ್ಮ ಸಾಮಗ್ರಿ ಚೀಲಗಳನ್ನು ಒಯ್ಯಲು ಅನುಮತಿ ನೀಡುವ ಕುರಿತು ಚರ್ಚೆ ನಡೆದಿದೆ ಎಂದು ತಿಳಿಸಿದ ಅವರು, ನಮ್ಮ ಮೆಟ್ರೋ ಮಾರ್ಗದ ಪಿಲ್ಲರ್ ಗಳ ನಡುವೆ ಹೂವಿನ ಗಿಡಗಳನ್ನು ನೆಟ್ಟು ನಗರವನ್ನು ಸುಂದರವಾಗಿ ಕಾಣುವಂತೆ ಮಾಡಲಾಗುವುದು ಎಂದರು.
ದರ ಕಡಿಮೆ ಆಗಲಿದೆ : ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ 2015ಕ್ಕೆ ಪೂರ್ಣಗೊಳ್ಳಲಿದೆ. ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಲು 5 ವರ್ಷದ ಕಾಲಾವಕಾಶ ಬೇಕಾಗುತ್ತದೆ. ಎರಡೂ ಹಂತಗಳು ಪೂರ್ಣಗೊಂಡ ಬಳಿಕ ನಗರದಲ್ಲಿ 114 ಕಿ.ಮೀ. ಉದ್ದದ ಮಾರ್ಗ ಮೆಟ್ರೋ ಮಾರ್ಗ ಸಿದ್ಧವಾಗಲಿದ್ದು, ಪ್ರತಿ 2 ನಿಮಿಷಕ್ಕೆ ಒಂದರಂತೆ 50 ರೈಲುಗಳು ಸಂಚರಿಸಲಿವೆ. ಆಗ ಪ್ರಯಾಣದರ ಬಿಎಂಟಿಸಿಗಿಂತ ಕಡಿಮೆಯಾಗಲಿದೆ ಎಂದು ತಿಳಿಸಿದರು.












Click it and Unblock the Notifications