Namma Metro: ಎಲಿವೇಟೆಡ್ ರಸ್ತೆಗಳ ಮೇಲೆ ಓಡಲಿವೆ ಮೆಟ್ರೋ ರೈಲುಗಳು- ಏನಿದು ಸರ್ಕಾರದ ಹೊಸ ಪ್ಲಾನ್?
ಬೆಂಗಳೂರು, ನವೆಂಬರ್ 21: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ತಡೆಗೆ ಜಾರಿಯಾಗುವ ಸರ್ಕಾರ ಯೋಜನೆಗಳಿಗೆ ಭೂಸ್ವಾಧೀನ, ಅಧಿಕ ಖರ್ಚು ಇನ್ನಿತರ ತೊಡಕುಗಳು ಎದುರಾಗುತ್ತವೆ. ಭವಿಷ್ಯದಲ್ಲಿ ಹೀಗಾದಂತೆ ನೋಡಿಕೊಳ್ಳಲು ಮತ್ತು ಉತ್ತರ ಸಾರಿಗೆ ವ್ಯವಸ್ಥೆ ರೂಪಿಸಲು ರಾಜ್ಯ ಸರ್ಕಾರ ಹೊಸ ಪ್ಲಾನ್ ರೂಪಿಸಿದೆ.
ರಾಜ್ಯ ಸರ್ಕಾರವು ಒಂದೇ ಎಲಿವೇಟೆಡ್ ರಸ್ತೆಗಳ ಮೇಲೆ ನಮ್ಮ ಮೆಟ್ರೋ ರೈಲು ಮತ್ತು ಬಸ್ ಸೇರಿದಂತೆ ಇತರೆ ವಾಹನಗಳನ್ನು ಸಂಚಾರಕ್ಕೆ ಯೋಗ್ಯವಾಗುವಂತೆ ಯೋಜನೆ ರೂಪಿಸುವ ಚಿಂತನೆಯಲ್ಲಿದೆ. ಇದರಿಂದ ಒಂದೇ ಯೋಜನೆಯಲ್ಲಿ ಎರಡು ಸಾರಿಗೆ ಸೇವೆ ನೀಡಿದಂತಾಗುತ್ತದೆ.

ಹೆಚ್ಚುತ್ತಿರುವ ಸಂಚಾರ ದಟ್ಟಣೆ ತಪ್ಪಿಸಲು ಸರ್ಕಾರ ಹೆಚ್ಚು ಹಣ ಖರ್ಚು ಮಾಡದೇ ಡಬಲ್ ವೇ ಮೆಟ್ರೋ ಮಾರ್ಗ ನಿರ್ಮಾಣ ಮಾಡಲು ಸಜ್ಜಾಗಿದೆ. ಇದರಿಂದ ಹೆಚ್ಚುವರಿ ಹಣ ಖರ್ಚಾಗುವುದು ತಪ್ಪಲಿದೆ ಎಂದು ಹೊಸ ಪ್ಲಾನ್ ಕುರಿತು ಬೆಂಗಳೂರು ನಗರ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ತಿಳಿಸಿರುವ ಬಗ್ಗೆ 'ಕನ್ನಡಪ್ರಭ' ವರದಿ ಮಾಡಿದೆ.
ರೈಲು ಮಾರ್ಗ ಜತೆಗೆ ರಸ್ತೆ ನಿರ್ಮಾಣ
ಬೆಂಗಳೂರಿನಾದ್ಯಂತ ಎಲ್ಲೆಲ್ಲಿ ಮೆಟ್ರೊ ಮಾರ್ಗ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆಯೋ ಅಲ್ಲಿ ರಸ್ತೆ ಮೇಲ್ಸೇತುವೆ (ಡಬಲ್ ವೇ) ನಿರ್ಮಿಸಲು ಯೋಜಿಸಲಾಗಿದೆ. ಈ ಯೋಜನೆ ಅನುಷ್ಠಾನಗೊಂಡರೆ ಜನರ ತೆರಿಗೆ ಹಣದಲ್ಲಿ ಕಡಿಮೆ ಅನುದಾನದಲ್ಲಿ ಒಂದೇ ಮಾರ್ಗದಲ್ಲಿ ಮೆಟ್ರೋ ಸೇವೆ, ವಾಹನ ಸೇವೆ ಲಭ್ಯವಾಗಲಿದೆ.
ವಿವರವಾಗಿ ನೋಡುವುದಾದರೆ, ಮೇಲ್ಸೇತುವೆ ಮಾರ್ಗದ ಮೇಲೆಯೇ ಮೆಟ್ರೋ ಲೈನ್ ನಿರ್ಮಿಸಲಾಗುವುದು. ಎಂದಿನಂತೆ ನೆಲದ ಮೇಲೆ ಒಂದು ಮಾರ್ಗ ಇರಲಿದೆ. ಮೇಲ್ಸೇತುವೆ ನಿರ್ಮಿಸುವ ಜೊತೆಗೆ ಮೆಟ್ರೋ ಲೈನ್ ಸ್ಥಾಪಿಸಲಾಗುವುದು.

ಈ ಯೊಜನೆ ಸಾಕಾರವಾದರೆ ಭೂಸ್ವಾಧೀನ, ರಸ್ತೆ ನಿರ್ಮಾಣ ಮತ್ತು ಮೆಟ್ರೋ ನಿರ್ಮಾಣಕ್ಕೆ ಆಗುವ ಪ್ರತ್ಯೇಕ ಖರ್ಚು ತಪ್ಪಲಿದೆ. ಜನರಿಗೆ ಬಹುಸಾರಿಗೆ ಸೇವೆ ಒಂದು ಯೋಜನೆಯಡಿ ಒದಗಿಸಲು ಸರ್ಕಾರ ಪ್ಲಾನ್ ಮಾಡಿದೆ. ಸದ್ಯ ಯೋಜನೆ ಆದಷ್ಟು ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ ಎಂದು ಉಪಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ಜಯದೇವ ಬಳಿ ಬಹುಮಾದರಿ ಸಾರಿಗೆ ವ್ಯವಸ್ಥೆ
ನಗರದ ಬನ್ನೇರುಘಟ್ಟ ರಸ್ತೆಯ ಜಯದೇವ ಆಸ್ಪತ್ರೆ ಸಮೀಪ ಮಲ್ಟಿ ಲೆವೆಲ್ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣ ನಿರ್ಮಾಣವಾಗುತ್ತಿದೆ. ಇದು ಅತ್ಯಂತ ದೊಡ್ಡ ಮೆಟ್ರೋ ನಿಲ್ದಾಣವಾಗಲಿದೆ ಎಂದು BMRCL ತಿಳಿಸಿದೆ. ಈ ಭಾಗದಲ್ಲಿ ಮಲ್ಟಿಲೆವೆಲ್ ಸಾರಿಗೆ ಸೇವೆ ಲಭ್ಯವಾಗಲಿದೆ.
ಜಯದೇವ ಸಮೀಪ ಒಂದು ಕಡೆ ಅಂಡರ್ ಗ್ರೌಂಡ್ ರಸ್ತೆ ಇದ್ದು, ಅದರ ಮೇಲೆ ಗ್ರೌಂಡ್ ಲೇವಲ್, ಅದರ ಮೇಲೆ ರಸ್ತೆ ಮೇಲ್ಸೇತುವೆ ಇದೆ. ಈ ಮೇಲ್ಸೇತುವೆ ಮೇಲೆ ನಮ್ಮ ಮೆಟ್ರೋ ರೈಲು ಮಾರ್ಗ ನಿರ್ಮಾಣವಾಗುತ್ತಿದೆ. ಇದೊಂದು ಬಹುಮಾದರಿಯ ಸಾರಿಗೆ ಯೋಜನೆ ಆಗಿದೆ.
ಈ ದೊಡ್ಡ ಮೆಟ್ರೋ ನಿಲ್ದಾಣ 2023ರ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಹಳದಿ ಮಾರ್ಗವಾದ ಬೊಮ್ಮಸಂದ್ರ-ಆರ್‌ವಿರಸ್ತೆ ಮಧ್ಯದಲ್ಲಿ ಈ ನಿಲ್ದಾಣ ಸ್ಥಾಪನೆ ಆಗುತ್ತಿದೆ. ಇಲ್ಲಿ ಇಂಟರ್‌ಚೇಂಜ್ ವ್ಯವಸ್ಥೆ ಇರಲಿದ್ದು, ಕಾಳೇನ ಅಗ್ರಹಾರದಿಂದ ನಾಗರವಾರದವರೆಗಿನ ಪಿಂಕ್ ಲೈನ್ ಇಲ್ಲಿ ಹಾದು ಹೋಗಲಿದೆ. ಇದರಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುವ ವಿಶ್ವಾಸ ವಿದೆ.












Click it and Unblock the Notifications