Namma metro: ಸಂಪೂರ್ಣ 'ನೇರಳೆ ಮಾರ್ಗ' ಅ. 7ರಿಂದ ಸಾರ್ವಜನಿಕರಿಗೆ ಮುಕ್ತ, ವಿವರ ನೋಡಿ
ಬೆಂಗಳೂರು, ಅಕ್ಟೋಬರ್ 05: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೂರ್ವದಿಂದ ಪಶ್ಚಿಮದವರೆಗಿನ ಮೊದಲ ಐಟಿ ಕಾರಿಡಾರ್ ಸಂಪರ್ಕಿಸಿದ 'ನೇರಳೆ ಮಾರ್ಗ' (Namma Metro Purple line) ಸಂಪೂರ್ಣವಾಗಿ ಇದೇ ಅಕ್ಟೋಬರ್ 7ರಿಂದ ಉದ್ಘಾಟನೆಗೊಳ್ಳಲಿದೆ ಎಂದು ಬೆಂಗಳೂರು ರೈಲು ಮೆಟ್ರೋ ನಿಗಮ (BMRCL) ಗುರುವಾರ ತಿಳಿಸಿದೆ.
ನಮ್ಮ ಮೆಟ್ರೋ ಈ ನೇರಳೆ ಮಾರ್ಗವು ಚಲ್ಲಘಟ್ಟದಿಂದ ಆಡುಗೋಡಿ (ವೈಟ್‌ಫಿಲ್ಡ್) ವರೆಗೆ ಇದೆ. ಚಲ್ಲಘಟ್ಟ ವಿಸ್ತರಿಸಿದ ಮಾರ್ಗ ನಿರ್ಮಾಣ ಕಾರ್ಯ ಮತ್ತು ತಪ್ಪಿದ್ದ ಸಂಪರ್ಕ ಕೊಂಡಿ ಮಾರ್ಗದ ಕೆಲಸ ಪೂರ್ಣಗೊಂಡಿದೆ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRC) ಇತ್ತೀಚೆಗಷ್ಟೇ ಬೈಯಪ್ಪನಹಳ್ಳಿ-ಕೆ.ಆರ್.ಪುರ ಮಾರ್ಗದಲ್ಲಿ ಮೆಟ್ರೋ ಓಡಿಸಲು ಅನುಮೋದನೆ ನೀಡಿದೆ.

ಇದೀಗ ಬೈಯಪ್ಪನಹಳ್ಳಿ-ಕೆಆರ್ ಪುರ ವರೆಗೆ 2.2 ಕಿಲೋ ಮೀಟರ್ ಉದ್ದದ ಮಾರ್ಗವು ಇದೇ ಅಕ್ಟೋಬರ್ 6ರಂದು ಲೋಕಾರ್ಪಣೆಗೊಳ್ಳಲಿದೆ. ಇದು ಆಗಿ ಒಂದು ದಿನದ ಬಳಿಕ ಅಂದರೆ ಅಕ್ಟೋಬರ್ 7ರಂದು ಸುಮಾರು 40 ಕಿಲೋ ಮೀಟರ್ ಉದ್ದದ್ದ ನೇರಳೆ ಮಾರ್ಗ ಸಂಪೂರ್ಣವಾಗಿ ವಾಣಿಜ್ಯ ಬಳಕೆಗೆ ಮುಕ್ತಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಹುದಿನಗಳ ಪ್ರಯಾಣಿಕರ ಕನಸು ನನಸು
ಇದೇ ವರ್ಷ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವೈಟ್‌ಫಿಲ್ಡ್ ನಿಂದ ಕೆಆರ್ ಪುರವರೆಗಿನ ಮಾರ್ಗವನ್ನು ಉದ್ಘಾಟಿಸಿದ್ದರು. ಲಕ್ಷಾಂತರ ಮಂದಿಗೆ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಅತ್ಯವಶಕ್ಯವಾಗಿತ್ತು. ಆದರೆ ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರಂ ವರೆಗಿನ 2.2 ಕಿಲೋ ಮಿಟರ್ ಉದ್ದದ ಮಾರ್ಗ ನಿರ್ಮಾಣ ರೈಲ್ವೆ ಗ್ರಿಡರ್ ಹಾಗೂ ಇನ್ನಿತರ ಕಾರಣಗಳಿಂದ ವಿಳಂಬ ವಾಗಿತ್ತು.

ಇದರಿಂದಾಗಿ ಐಟಿ ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರು ವೈಟ್‌ಫಿಲ್ಡ್‌ಗೆ ತೆರಳಲು ಬಿಎಂಟಿಸಿಯ ಮೆಟ್ರೋ ಫಿಡರ್ ಬಸ್ ಅನ್ನು ಅವಲಂಬಿಸಿದ್ದರು. ಎಂಜಿ ರಸ್ತೆ, ಕೆಂಗೇರಿ ಭಾಗದಿಂದ ಸಂಚರಿಸುವವರು ಬೈಯಪ್ಪನಹಳ್ಳಿಗೆ ಇಳಿದು ಅಲ್ಲಿಂದ ಬಸ್ ಮೂಲಕ ಕೆ.ಆರ್ ಪುರಂ ಗೆ ತೆರಳಿ ಮತ್ತೆ ಅಲ್ಲಿಂದ ಮೆಟ್ರೋ ಮೂಲಕ ಕಾಡುಗೋಡಿ ತಲುಪಬೇಕಿತ್ತು.
ಆದರೆ ಅಕ್ಟೋಬರ್ 7ರಿಂದ ಈ ಸಮಸ್ಯೆಗೆ ಶಾಶ್ವತ ಮುಕ್ತಿ ದೊರೆಯಲಿದ್ದು, ಪ್ರಯಾಣಿಕರ ಬಹುದಿನಗಳ ಕನಸು ನನಸಾಗಲಿದೆ. ಈಗಾಗಲೇ ಮೆಟ್ರೋ ರೈಲು ಬದಲಾವಣೆ ಸ್ಥಳ (ಜಂಕ್ಷನ್) ಆಗಿರುವ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚು ಪ್ರಯಾಣಿಕರ ಆಗಮನವಾಗುತ್ತಿದೆ. ನೇರಳೆ ಮಾರ್ಗದಲ್ಲಿ ಓಡಾಡುವವರ ಸಂಖ್ಯೆ ಮೊದಲಿಗಿಂತಲೂ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications