Namma Metro: ಹಳಿ ತಪ್ಪಿದ್ದ ರಸ್ತೆ-ರೈಲು ವಾಹನ ತೆರವು: ಮೆಟ್ರೋ ಸಂಚಾರ ಆರಂಭ
ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ರಾಜಾಜಿನಗರ ಮೆಟ್ರೋ ನಿಲ್ದಾಣದ ಬಳಿ ಹಳಿ ತಪ್ಪಿದ್ದ ರಸ್ತೆ ರೈಲು ವಾಹನವನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಮೆಟ್ರೋ ಸಂಚಾರ ಆರಂಭವಾಗಿದೆ. ಸತತ 12 ಗಂಟೆ ಕಾರ್ಯಾಚರಣೆ ಬಳಿಕ ಹೈಡ್ರಾಲಿಕ್ ಕ್ರೇನ್ ಬಳಸಿ, ರಸ್ತೆ ರೈಲು ವಾಹನವನ್ನು ಕೆಳಗೆ ಇಳಿಸಲಾಗಿದೆ.
ಮಧ್ಯಾಹ್ನ 3.40 ಗಂಟೆಗೆ ಈ ಮಾರ್ಗದಲ್ಲಿ ಸೇವೆಯನ್ನು ಮತ್ತೆ ಆರಂಭಿಸಲಾಗಿದ್ದು ಎಂದಿನಂತೆ ಮೆಟ್ರೋ ಸಂಚಾರ ಆರಂಭವಾಗಿದ್ದು, ಈ ಭಾಗದ ಪ್ರಯಾಣಿಕರು ನಿಟ್ಟುಸಿರು ಬಿಡುವಂತೆ ಮಾಡಿದೆ.

ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ರಾಜಾಜಿನಗರ ನಿಲ್ದಾಣದ ಬಳಿ ಇರುವ ತಿರುವಿನಲ್ಲಿ ರೈಲೊಂದರ ತಾಂತ್ರಿಕ ರಿಪೇರಿ ಮಾಡಲು ಮಂಗಳವಾರ ಬೆಳಗಿನ ಜಾವ ತೆರಳಿದ್ದ ರಸ್ತೆ ರೈಲು ವಾಹನ ಹಳಿ ತಪ್ಪಿತ್ತು. ಅಕ್ಟೋಬರ್ 3ರ ಬೆಳಗ್ಗೆಯಿಂದಲೇ ಈ ಮಾರ್ಗದಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾದ ಕಾರಣ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದರು.
Normalcy of Metro Services on Green line is restored from 15.40 Hrs. Metro Commuters may kindly note. pic.twitter.com/sUiTlNXuZf
— ನಮ್ಮ ಮೆಟ್ರೋ (@cpronammametro) October 3, 2023
ನಂತರ ಒಂದು ಮಾರ್ಗದಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಮೆಟ್ರೋ ನಿಲ್ದಾಣದಲ್ಲಿ ವ್ಯತ್ಯಯ ಉಂಟಾಗಿರುವ ಮಾಹಿತಿ ಇಲ್ಲದೆ, ಎಂದಿನಂತೆ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಭಾರಿ ತೊಂದರೆ ಅನುಭವಿಸಿದರು. ಯಶವಂತಪುರದಿಂದ - ಮಂತ್ರಿ ಸ್ಕೇರ್ ನಿಲ್ದಾಣದ ವರೆಗಿನ ಸಂಚಾರ ನಿರ್ಬಂಧಿಸಲಾಗಿತ್ತು.
12 ಗಂಟೆಗಳ ಕಾರ್ಯಾಚರಣೆ
ಹಳಿ ತಪ್ಪಿದ ರಸ್ತೆ-ರೈಲು ವಾಹನ 17 ಟನ್ ತೂಕವಿದ್ದು ಇದನ್ನು ಕೆಳಗಿಳಿಸುವುದು ದೊಡ್ಡ ಸವಾಲಾಗಿತ್ತು, ನಮ್ಮ ಮೆಟ್ರೋ ಇಂಜಿನಿಯರ್ ಗಳು, ಸಿಬ್ಬಂದಿ ಈ ಬಗ್ಗೆ ದೆಹಲಿ ಮೆಟ್ರೋ ಸಿಬ್ಬಂದಿ ಜೊತೆ ವರ್ಚುಯಲ್ ಸಭೆ ನಡೆಸುವ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಪಟ್ಟರು.
ನಂತರ ಭಾರಿ ಗಾತ್ರದ ಹೈಡ್ರಾಲಿಕ್ ಕ್ರೇನ್ ತರಿಸಿ ರಸ್ತೆ ರೈಲು ವಾಹನವನ್ನು ಕೆಳಗಿಳಿಸಲು ನಿರ್ಧಾರ ಮಾಡಲಾಯಿತು. ಸುಮಾರು 200 ಟನ್ ತೂಕವನ್ನು ಎತ್ತುವ ಸಾಮರ್ಥ್ಯ ಹೊಂದಿದ್ದ ಕ್ರೇನ್ ಬಳಸಿ ಯಶಸ್ವಿಯಾಗಿ ವಾಹವನವನ್ನು ಮೆಟ್ರೋ ಮಾರ್ಗದಿಂದ ಕೆಳಗಡೆ ಇಳಿಸಲಾಗಿದೆ.
ಪ್ರಯಾಣಿಕರ ಪರದಾಟ
ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಮೆಟ್ರೋ ಪ್ರಯಾಣಿಕರು ಭಾರಿ ಸಮಸ್ಯೆ ಅನುಭವಿಸಿದರು. ಉದ್ಯೋಗಿಗಳು ಸರಿಯಾದ ಸಮಯಕ್ಕೆ ಕಚೇರಿ, ಕೆಲಸಕ್ಕೆ ತೆರಳಲು ಹರ ಸಾಹಸ ಪಟ್ಟರು. ವಿದ್ಯಾರ್ಥಿಗಳು ಕೂಡ ಭಾರಿ ಸಮಸ್ಯೆ ಅನುಭವಿಸಿದರು.
ಯಶವಂತಪುರ ನಿಲ್ದಾಣ ಸಮೀಪದಿಂದ ಬಿಎಂಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡುವ ಮೂಲಕ ಪ್ರಯಾಣಿಕರಿಗೆ ನೆರವಾಯಿತು.












Click it and Unblock the Notifications