Namma metro: 'ಪಿಂಕ್ ಲೈನ್' ಸುರಂಗ ಕಾಮಗಾರಿ ಅಪ್ಡೇಟ್ ಕೊಟ್ಟ BMRCL
ಬೆಂಗಳೂರು, ಆಗಸ್ಟ್ 30: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ನೂತನ ಮಾರ್ಗ ನಿರ್ಮಾಣ, ವಿಸ್ತರಣೆ ಕಾರ್ಯ ಭರದಿಂದ ಸಾಗಿದೆ. ಇದೀಗ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸುರಂಗ ಕೊರೆಯುವ ಕಾಮಗಾರಿಯಲ್ಲಿ ಮತ್ತೊಂದು ಹಂತ ತಲುಪಿದೆ. ಬುಧವಾರ ನಗರದ ಲ್ಯಾಂಗ್‌ಫೋರ್ಡ್ ಟೌನ್ ನಿಲ್ದಾಣದಲ್ಲಿ ಭೂಮಿ ಒಳಗೆ ಯಶಸ್ವಿಯಾಗಿ ಸುರಂಗ ಕೊರೆದ 'ವಮಿಕ' ಟಿಬಿಎಂ ಹೊರ ಬಂದಿದೆ.
ನಮ್ಮ ಮೆಟ್ರೋ 'ಪಿಂಕ್ ಮಾರ್ಗ'ದ (Pink line) ಸುರಂಗ ಕೊರೆಯುವ ಕಾಮಗಾರಿ ಭರದಿಂದ ಸಾಗಿದೆ. ಲಕ್ಕಸಂದ್ರದಿಂದ ಲ್ಯಾಂಗ್‌ಫೋರ್ಡ್‌ವರೆಗಿನ 721 ಮೀಟರ್ ಸುರಂಗ ಕೊರೆದು 'ವಮಿಕ' ಟಿಬಿಎಂ (ಟನಲ್ ಬೋರಿಂಗ್ ಮಷಿನ್) ಇಂದು ಬುಧವಾರ ಹೊರ ಬಂದಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದೆ ವಮಿಕ ಟಿಬಿಎಂ ಸೌತ್ ರಾಂಪ್ ಮತ್ತು ಡೈರಿ ವೃತ್ತದಿಂದ ಸುರಂಗ ನಿಲ್ದಾಣಗಳ ನಡುವೆ 613.2 ಮೀಟರ್ ಹಾಗೂ ಡೈರಿ ವೃತ್ತ ನಿಲ್ದಾಣದಿಂದ ಲಕ್ಕಸಂದ್ರ ನಿಲ್ದಾಣ ನಡುವಿನ 743.5 ಮೀಟರ್ ಸುರಂಗ ಕಾಮಗಾರಿ ಪೂರ್ಣಗೊಂಡಿದೆ.
ಇದರೊಂದಿಗೆ ಹಂತ 2 ರೀಚ್ 6ರ 20.991 ಕಿಲೋ ಮೀಟರ್ ಸುರಂಗ ಮಾರ್ಗದಲ್ಲಿ ಒಟ್ಟು 17.62 ಕಿಲೋ ಮೀಟರ್ ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ.
ಇನ್ನೂ ರೀಚ್ 6ರ ಸುರಂಗ ಮಾರ್ಗದಲ್ಲಿ ನಿಯೋಜಿಸಿರುವ ಒಟ್ಟು 09 ಟನಲ್ ಬೋರಿಂಗ್ ಮಷಿನ್ (ಟಿಬಿಎಂ) ಗಳಲ್ಲಿ ಆರು ಟಿಬಿಎಂಗಳು ಸುರಂಗ ಕೊರೆಯುವ ಕಾಮಗಾರಿಯನ್ನು ಪೂರ್ಣಗೊಳಿಸಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಾಹಿತಿ ನೀಡಿದೆ.

ನಮ್ಮ ಮೆಟ್ರೋ ಕಾಮಗಾರಿಗಳ ಮಾಹಿತಿ
ಪ್ರಸಕ್ತದಲ್ಲಿ ನಮ್ಮ ಮೆಟ್ರೋ 'ನೇರಳೆ ಮಾರ್ಗ'ವು ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತಗೊಳ್ಳುವ ಕಾಲ ಹತ್ತಿರವಾಗಿದೆ. ಇದು ಐಟಿ ಕಾರಿಡಾರ್ ಗೆ ಸಂಪರ್ಕ ಕಲ್ಪಿಸಿದ ಮೊದಲ ಮಾರ್ಗವಾಗಿದೆ. ಅದೇ ರೀತಿ ಬೊಮ್ಮಾಸಂದ್ರದಿಂದ ಆರ್‌ವಿ ರಸ್ತೆ 'ಹಳದಿ ಮಾರ್ಗ'ದ ಕೆಲಸವು ಭರದಿಂದ ಸಾಗಿದೆ.
ಸೆಂಟ್ರಲ್ ಸಿಲ್ಕ ಬೋರ್ಡ್‌ನಿಂದ ಕೆ.ಆರ್.ಪುರಂ ಮಾರ್ಗವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 'ನೀಲಿ ಲೈನ್' ಪಿಲ್ಲರ್ ನಿರ್ಮಾಣ, ನಿಲ್ದಾಣ ಕಾರ್ಯ ನಡೆಯುತ್ತಿದೆ. ಕಾಳೇನ ಅಗ್ರಹಾರದಿಂದ ನಾಗವಾರವರೆಗೆ 'ಪಿಂಕ್ ಲೈನ್' ನಲ್ಲಿ ಅಲ್ಲಲ್ಲಿ ಸುರಂಗ ಕೊರೆಯುವ ಕೆಲಸ ನಡೆಯುತ್ತಿದೆ. ಇದರಲ್ಲಿ ವಮಿಕ ಟಿಬಿಎಂ ಲ್ಯಾಂಗ್‌ಫೋಡ್‌ಟೌನ್‌ವರೆಗೆ ಸುರಂಗ ಕೊರೆದು ಹೊರ ಬಂದಿದೆ.












Click it and Unblock the Notifications