BREAKING: ಸೆಪ್ಟಂಬರ್ 11ರವರೆಗೆ 'ನಮ್ಮ ಮೆಟ್ರೋ' ಹಸಿರು ಮಾರ್ಗದಲ್ಲಿ ಸೇವೆ ವ್ಯತ್ಯಯ, ದಿನಾಂಕಗಳು
ಬೆಂಗಳೂರು, ಆಗಸ್ಟ್ 19: ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಹಸಿರು ಮಾರ್ಗದಲ್ಲಿ ಕೆಲವು ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಈ ಕಾರಣದಿಂದ ಮಾರ್ಗದ ವಿವಿಧ ನಿಲ್ದಾಣಗಳವರೆಗೆ ಸೆಪ್ಟಂಬರ್ 11ರವರೆಗೆ ವಿವಿಧ ದಿನಾಂಕಗಳಂದು ಮೆಟ್ರೋ ರೈಲು ಸೇವೆಯನ್ನು ಸ್ಥಗಿತಗೊಳಿಸಲಿದೆ. ಈ ಕುರಿತು ನಮ್ಮ ಮೆಟ್ರೋ ಅಧಿಕಾರಿಗಳು ಖುದ್ದು ಮಾಹಿತಿ ನೀಡಿದ್ದಾರೆ. ಪ್ರಯಾಣಿಕರು ಇಲ್ಲಿ ನೀಡಲಾಗಿರುವ ದಿನಾಂಕ ನೋಡಿಕೊಂಡು ಪ್ರಯಾಣ ಮಾಡಬೇಕು ಎಂದು ಕೋರಲಾಗಿದೆ.
ಹಾಲಿ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವಿನ ಮೆಟ್ರೋ ರೈಲು ಹಸಿರು ಮಾರ್ಗದ ಸೇವೆಯಲ್ಲಿ ವ್ಯತ್ಯಯವಾಗಲಿದೆ. ನಾಗಸಂದ್ರದಿಂದ ಮಾದಾವರವರೆಗೆ ಮೆಟ್ರೋ ಮಾರ್ಗ ವಿಸ್ತರಣೆ ಆಗಿದೆ. ಈ ಸಂಬಂಧ 3.7ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸಿಗ್ನಲಿಂಗ್ ಸಂಬಂಧಿತ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ಕೆಲವು ದಿನಗಳಂದು ರೈಲು ಸೇವೆಯ ಸಮಯ ಮತ್ತು ಕಾರ್ಯಾಚರಣೆಗಳಲ್ಲಿ ಬದಲಾವಣೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಸ್ತರಿತ ಹಸಿರು ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಪರೀಕ್ಷೆಗೆ ಬಹುತೇಕ ಯಶಸ್ವಿಯಾಗಿದೆ. ಇನ್ನು ಸಿಗ್ನಲಿಂಗ್ ಟೆಸ್ಟ್ ನಡೆಯಬೇಕಿದ್ದು, ಅದಕ್ಕಾಗಿ ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ.
* ದಿನಾಂಕ ಆಗಸ್ಟ್ 20, ಆಗಸ್ಟ್ 23, ಆಗಸ್ಟ್ 30ರಂದು ಹಾಗೂ ಸೆಪ್ಟಂಬರ್ 6 ಮತ್ತು ಸೆಪ್ಟಂಬರ್ 11 ರಂದು ಇಡೀ ದಿನ ರೈಲು ಸೇವೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಾಗಸಂದ್ರದಿಂದ ಪೀಣ್ಯ ಇಂಡಸ್ಟ್ರಿ ಮಾರ್ಗದಲ್ಲಿ ಬದಲಾವಣೆ
* 2024 ಆಗಸ್ಟ್ 24ರಂದು ಕೊನೆಯ ರೈಲು ಸೇವೆಯು ರಾತ್ರಿ 11.05 ಕ್ಕೆ ಬದಲಾಗಿ 10.00 ಗಂಟೆಗೆ ಆರಂಭಗೊಳ್ಳಲಿದೆ.
* ದಿನಾಂಕ 25ನೇ ಆಗಸ್ಟ್ 2024 ರಂದು ಮೊದಲ ರೈಲು ಸೇವೆಯು ಬೆಳಗ್ಗೆ 5.00 ಕ್ಕೆ ಬದಲಾಗಿ 06.00 ಕ್ಕೆ ಪ್ರಾರಂಭವಾಗಲಿದೆ.

ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮಾರ್ಗದಲ್ಲಿನ ಬದಲಾವಣೆ
* 2024 ಆಗಸ್ಟ್ 24ರಂದು ಕೊನೆಯ ರೈಲು ಸೇವೆಯು ರಾತ್ರಿ 11.12ಕ್ಕೆ ಆರಂಭವಾಗಲಿದೆ.
* ಆಗಸ್ಟ್ 25ರಂದು ಬೆಳಗ್ಗೆ ಮೊದಲ ರೈಲು ಸೇವೆಯು 05.00ಕ್ಕೆ ಆರಂಭಗೊಳ್ಳಲಿದೆ.
ಇದು ಹಸಿರು ಮಾರ್ಗಕ್ಕೆ ಸಂಬಂಧಿಸಿದ ಬದಲಾವಣೆಗಳು ಮಾತ್ರವೇ ಆಗಿವೆ. ಇನ್ನು ಚಲಘಟ್ಟದಿಂದ ವೈಟ್‌ಫಿಲ್ಡ್‌ವರೆಗೆ ಇರುವ ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ತಿಳಿಸಿದ್ದಾರೆ. ಅಡಚರಣೆಗೆ ಸಹಕರಿಸುವಂತೆ ಕೋರಿದ್ದಾರೆ.












Click it and Unblock the Notifications