Bengaluru Metro's Purple Line: ಬೆಂಗಳೂರು ಮೆಟ್ರೋ ನೇರಳೆ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ- ವರದಿ, ವಿವರ
ಬೆಂಗಳೂರು, ಅಕ್ಟೋಬರ್ 20: ಬಹುನಿರೀಕ್ಷಿತ ಬೆಂಗಳೂರು ಮೆಟ್ರೋ ನೇರಳೆ ಮಾರ್ಗಕ್ಕೆ ಪ್ರಧಾನಿ ಮೋದಿ ಔಪಚಾರಿಕವಾಗಿ ಚಾಲನೆ ನೀಡಿದರು. ವರ್ಚುವಲ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಮೋದಿ ಬೈಯಪ್ಪನಹಳ್ಳಿ- ಕೆಆರ್ ಪುರಂ ಮತ್ತು ಕೆಂಗೇರಿ- ಚಲ್ಲಘಟ್ಟ ವಿಸ್ತರಣೆಗೆ ಹಸಿರು ನಿಶಾನೆ ತೋರಿಸಿದರು.
ಬೈಯಪ್ಪನಹಳ್ಳಿ- ಕೆಆರ್ ಪುರಂ ಮತ್ತು ಕೆಂಗೇರಿ- ಚಲ್ಲಘಟ್ಟ ವಿಸ್ತರಣೆಗಳು ಬಾಕಿ ಉಳಿದಿದ್ದವು. ಇವುಗಳನ್ನು ಉದ್ಘಾಟಿಸುವ ಮೂಲಕ ಬೆಂಗಳೂರು ಮೆಟ್ರೋದ ನೇರಳೆ ಮಾರ್ಗದ ಸಂಪೂರ್ಣ ಕಾರ್ಯಾಚರಣೆಯನ್ನು ರಾಜಧಾನಿ ಬೆಂಗಳೂರು ಜನರಿಗೆ ಅರ್ಪಿಸಿದರು.

ಪರ್ಪಲ್ ಲೈನ್ ಕಾರ್ಯಾಚರಣೆಗಳು ಅಕ್ಟೋಬರ್ 9 ರಂದು ಪ್ರಾರಂಭವಾಗಿವೆ. ಇಂದು ಸಂಭ್ರಮ ಅಥವಾ ಉದ್ಘಾಟನಾ ಕಾರ್ಯಕ್ರಮವಿಲ್ಲದೆ ವರ್ಚುವಲ್ ಆಗಿ ಚಾಲನೆ ನೀಡಲಾಯಿತು.
ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, 'ಪರ್ಪಲ್ ಲೈನ್ ಕಾರ್ಯಾಚರಣೆಗಳೊಂದಿಗೆ ಬೆಂಗಳೂರಿನ ಐಟಿ ಹಬ್‌ಗೆ ಸಂಪರ್ಕವನ್ನು ಹೆಚ್ಚಿಸಲಾಗಿದೆ' ಎಂದು ಹೇಳಿದರು.

ಎರಡು ಮೆಟ್ರೋ ಸ್ಟ್ರೆಚ್‌ಗಳು ಬೆಂಗಳೂರಿನ ಜನರಿಗೆ ತ್ವರಿತ ಪ್ರಯಾಣದ ಅನುಭವವನ್ನು ನೀಡುತ್ತದೆ ಎಂದು ಅವರು ಪ್ರತಿಪಾದಿಸಿದರು.
ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ವರ್ಚುವಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಈ ನೇರಳೆ ಮಾರ್ಗದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ವಿಶೇಷ ಕಾಳಜಿ ತೋರಿಸಿದ್ದಾರೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಅಧಿಕಾರಿಗಳಿಗೆ ತಕ್ಷಣ ಚಾಲನೆ ನೀಡುವಂತೆ ಸೂಚಿಸಿದ್ದಾರೆ ಎಂದು ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಈ ಹಿಂದೆ ಹೇಳಿದ್ದರು.

ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, 'ಔಪಚಾರಿಕ ಉದ್ಘಾಟನಾ ಸಮಾರಂಭದ ಕಾರ್ಯಾಚರಣೆಯನ್ನು ಮುಂದೂಡಬೇಡಿ. ಪರ್ಪಲ್‌ಲೈನ್‌ನ (ಚಲ್ಲಘಟ್ಟದಿಂದ ಕೆಂಗೇರಿ ಮತ್ತು ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್) ಹೊಸ ಸ್ಟ್ರೆಚ್‌ಗಳಲ್ಲಿ ಸೇವೆಗಳನ್ನು ಆದಷ್ಟು ಬೇಗನೇ ಪ್ರಾರಂಭಿಸಿ ಎಂದು ಬಿಎಂಆರ್‌ಸಿಎಲ್‌ಗೆ ಪ್ರಧಾನಿ ನರೇಂದ್ರ ಮೋದಿ ನಿರ್ದೇಶನ ನೀಡಿದ್ದಾರೆ' ಎಂದು ತಿಳಿಸಿದ್ದಾರೆ.
ನೇರಳೆ ಮಾರ್ಗದ ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ ನಮ್ಮ ಮೆಟ್ರೋದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ವೇಗ ಕಂಡುಬಂದಿದೆ. ವಾರದ ದಿನಗಳಲ್ಲಿ ಸರಾಸರಿ ಪ್ರತಿದಿನ ಏಳು ಲಕ್ಷಕ್ಕೂ ಹೆಚ್ಚು ಜನರು ಬೆಂಗಳೂರಿನ ಮೆಟ್ರೋ ಸಾರಿಗೆಯನ್ನು ಬಳಸುತ್ತಿದ್ದಾರೆ. ವಾರಾಂತ್ಯದಲ್ಲಿ ಐದರಿಂದ ಆರು ಲಕ್ಷದ ವರೆಗೆ ಪ್ರಯಾಣಿಕರು ಸಂಚರಿಸುತ್ತಿದ್ದಾರೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ಕರ್ನಾಟಕ ಸಾರಿಗೆ ಇಲಾಖೆಯು ಕೆಆರ್ ಪುರಂ ಮೆಟ್ರೋ ನಿಲ್ದಾಣದಿಂದ 37 ಫೀಡರ್ ಬಸ್ ಸೇವೆಗಳನ್ನು ಪ್ರಾರಂಭಿಸಿದೆ. ಈ ಫೀಡರ್ ಬಸ್‌ಗಳು ಕೆಆರ್ ಪುರಂ ಮೆಟ್ರೊ ನಿಲ್ದಾಣದಿಂದ ಹೊರ ವರ್ತುಲ ರಸ್ತೆಯ ಕಡೆಗೆ ಚಲಿಸುತ್ತವೆ. ಇವುಗಳು ಐಟಿ ಪಾರ್ಕ್‌ಗಳನ್ನು ಹೊಂದಿರುವ ಸಿಲ್ಕ್ ಬೋರ್ಡ್ ವರೆಗೆ ಕಾರ್ಯನಿರ್ವಹಿಸುತ್ತವೆ.
ಈ ಫೀಡರ್ ಬಸ್‌ಗಳ ಆವರ್ತನವನ್ನು ಬೆಳಿಗ್ಗೆ ಮತ್ತು ಸಂಜೆಯ ಪೀಕ್ ಅವರ್‌ಗೆ ಅನುಗುಣವಾಗಿ ಹೊಂದಿಸಲಾಗಿದೆ. ಪೀಕ್ ಅವರ್‌ಗಳಲ್ಲಿ, ಫೀಡರ್ ಬಸ್‌ಗಳು ಪ್ರತಿ ಐದು ನಿಮಿಷಕ್ಕೊಮ್ಮೆ ಈ ಮಾರ್ಗದಲ್ಲಿ ಲಭ್ಯವಿರುತ್ತವೆ. ಜನದಟ್ಟಣೆ ಇಲ್ಲದ ಸಮಯದಲ್ಲಿ, ಪ್ರತಿ ಎಂಟು ನಿಮಿಷಗಳಿಗೆ ಬಸ್‌ಗಳು ಲಭ್ಯವಿರುತ್ತವೆ.












Click it and Unblock the Notifications