Metro Pillar Collapse : ಪೊಲೀಸ್ ವಿಚಾರಣೆ ಎದುರಿಸಿದ ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್
ಬೆಂಗಳೂರು, ಜನವರಿ 22: ನಗರದ ಹೆಣ್ಣೂರು ಕ್ರಾಸ್ ಬಳಿ ತಾಯಿ ಮತ್ತು ಮಗುವಿನ ಸಾವಿಗೆ ಕಾರಣವಾಗಿದ್ದ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣಕ್ಕೆ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಶನಿವಾರ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ (BMRCL) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರನ್ನು ವಿಚಾರಣೆಗೆ ಒಳಪಡಿಸಿದೆ.
ಇದೇ ತಿಂಗಳ ಜನವರಿ 10 ರಂದು ನಮ್ಮ ಮೆಟ್ರೋ ಕಾಮಗಾರಿಯ ನಿರ್ಮಾಣ ಹಂತದಲ್ಲಿ ಕಾಂಕ್ರೀಟ್ ಸುರಿಯಲು ನಿಲ್ಲಿಸಿದ್ದ ಕಬ್ಬಿಣದ ರಾಡುಗಳ ಪಿಲ್ಲರ್ ರಸ್ತೆಯಲ್ಲಿ ಸಾಗುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದಿತ್ತು. ಘಟನೆಯಲ್ಲಿ ಸುಮಾರು 28 ವರ್ಷದ ತಾಯಿ (ತೇಜಸ್ವಿನಿ) ಮತ್ತವರ ಎರಡೂವರೆ ವರ್ಷದ ಮಗು (ವಿಹಾನ್) ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಗೋವಿಂದಪುರ ಠಾಣೆಯ ಪೊಲೀಸರು ಇತ್ತೀಚೆಗೆ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ನೀಡಿದ್ದರು.
ಪೊಲೀಸರು ನೀಡಿದ್ದ ಮೊದಲ ನೋಟಿಸ್‌ಗೆ ಹಾಜರಾಗದ ಅಂಜುಮ್ ಪರ್ವೇಜ್ ಅನಾರೋಗ್ಯದ ಕಾರಣ ಹೇಳಿದ್ದರು. ನಂತರ ಎರಡನೇ ಬಾರಿ ನೋಟಿಸ್ ನೀಡಿದ್ದ ಪೊಲೀಸರು ವಿಚಾರಣೆಗೆ ಹಾಜರಾಗದಿದ್ದರೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಹೀಗಾಗಿ ಎರಡನೇ ನೋಟಿಸ್ ಕೈ ಸೇರುತ್ತಿದ್ದಂತೆ ಪರ್ವೇಜ್ ಶನಿವಾರ ಬೆಂಗಳೂರಿನ ಪೂರ್ವ ವಿಭಾಗದ ಡಿಸಿಪಿ ಕಚೇರಿಗೆ ವಿಚಾರಣೆಗೆ ಹಾಜರಾದರು..

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಜಿನಿಯರ್‌ಗಳ ನಿರ್ಲಕ್ಷ್ಯ ಎಂಬ ಆರೋಪ ಇದೆ. ಮೊನ್ನೆಯಷ್ಟೇ ಭಾರತೀಯ ವಿಜ್ಞಾನ ಸಂಸ್ಥೆ (IISc) ವಿಜ್ಞಾನಿಗಳ ತಂಡ ಅವಘಡದ ಶೇ. 80ರಷ್ಟು ತಾಂತ್ರಿಕ ತನಿಖೆ ಪೂರ್ಣಗೊಳಿಸಿದೆ. ಗುತ್ತಿಗೆದಾರರು ಹಾಗೂ ಎಂಜಿನಿಯರ್‌ಗಳ ನಿರ್ಲಕ್ಷ್ಯೆಯಿಂದಾಗಿ ಈ ಅವಘಡ ಸಂಭವಿಸಿದೆ ಎಂದು ತಿಳಿಸಿದ್ದರು. ಇದಕ್ಕೂ ಮೊದಲೇ ಮೂರು ಜನ ಅಧಿಕಾರಿಗಳನ್ನು ಬಿಎಂಆರ್‌ಸಿಎಲ್ ಅಮಾನತು ಮಾಡಿ ಆದೇಶಿಸಿತ್ತು.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಎರಡು ಬಾರಿ ಪೊಲೀಸರು ನೋಟಿಸ್ ನೀಡಲಾಗಿತ್ತು. ಎರಡನೆ ಸಲ ವಿಚಾರಣೆ ಎದುರಿಸಿದ ಪರ್ವೇಜ್ ಅವರು, ತಮ್ಮ ಹೇಳಿಕೆಗಳನ್ನು ತನಿಖಾಧಿಕಾರಿಗಳ ಮುಂದೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಪುನಃ ಅಗತ್ಯ ಬಿದ್ದಲ್ಲಿ ಮತ್ತೆ ವಿಚಾರಣೆಗೆ ಕರೆಸುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದೇನು?
ಪೊಲೀಸರು ನೀಡಿದ ನೋಟಿಸ್ ಸ್ವೀಕರಿಸಿದ್ದು, ಎರಡು ಗಂಟೆಗಳ ವಿಚಾರಣೆ ಎದುರಿಸಿದ್ದೇನೆ. ಅವರು ಕೇಳಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಕಾಮಗಾರಿ ಮುಂದುವರಿಯುತ್ತಿರುವ ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು. ಈ ಸಂಬಂಧ ನಿರ್ಮಾಣದ ಕಾರ್ಯ ವಿಧಾನಗಳನ್ನು ಬದಲಾವಣೆ ಮಾಡಲಿದ್ದೇವೆ. ಅಲ್ಲದೇ ನಮ್ಮ ಮೆಟ್ರೋದ ಸಿವಿಲ್ ಎಂಜಿನಿಯರ್‌ಗಳಿಗೆ ನೂತನ ತರಬೇತಿ ನೀಡಲಾಗುವುದು ಎಂದು ಅಂಜುಮ್ ಪರ್ವೇಜ್ ಅವರು ವಿಚಾರಣೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.












Click it and Unblock the Notifications