Namma Metro Orange Line: ಹೊಸ ಮಾರ್ಗದ ನಿರ್ಮಾಣಕ್ಕಾಗಿ 700ಕ್ಕೂ ಹೆಚ್ಚು ಆಸ್ತಿ ಭೂಸ್ವಾಧೀನ ಪ್ರಕ್ರಿಯೆ,ವೆಚ್ಚ
ಬೆಂಗಳೂರು, ಮೇ 06: ಬೆಂಗಳೂರು ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ಆರಂಭಕ್ಕೆ ಸಕಲ ಸಿದ್ಧತೆ ನಡೆದಿದೆ. ಇದರಲ್ಲಿ ಎರಡು ಎಲಿವೇಟೆಡ್ ಲೈನ್‌ಗಳು ಬರುತ್ತವೆ. ಈ ಪೈಕಿ ಒಂದಾದ ಆರೆಂಜ್ ಮಾರ್ಗದ (Namma Metro Orange Line) ನಿರ್ಮಾಣಕ್ಕಾಗಿ 700 ಕ್ಕೂ ಹೆಚ್ಚು ಆಸ್ತಿಗಳನ್ನು ಗುರುತಿಸಲಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) 3ನೇ ಹಂತದ ಯೋಜನೆಯಲ್ಲಿ ಬರುವ ಜೆಪಿ ನಗರದ-ಕೆಂಪಾಪುರವರೆಗಿನ 32 ಕಿಲೋ ಮೀಟರ್ ವ್ಯಾಪ್ತಿಯ ಮಾರ್ಗಕ್ಕೆ ಆರೆಂಜ್ ಲೈನ್ ಎಂದು ಹೆಸರಿಡಲಾಗಿದೆ. ಈ ಮಾರ್ಗದ ಡಿಪಿಆರ್ ಗೆ ಅನುಮೋದನೆ ಈಗಾಗಲೇ ಸಿಕ್ಕಿದೆ. ಇದರ ನಿರ್ಮಾಣದ ಸಲುವಾಗಿ ಮೆಟ್ರೋ ಅಧಿಕಾರಿಗಳು ಬರೋಬ್ಬರಿ 700 ಕ್ಕೂ ಹೆಚ್ಚು ಆಸ್ತಿಗಳನ್ನು ಭೂಸ್ವಾಧೀನಕ್ಕಾಗಿ ಗುರುತಿಸಿದ್ದಾರೆ.

ಈ ಮೆಟ್ರೋ ಆರೆಂಜ್ ಮಾರ್ಗವು ಸಿಲ್ಕ ಬೋರ್ಡ್-ಬೆಂಗಳೂರು ವಿಮಾ ನಿಲ್ದಾಣ (ಕೆಐಎ)ವರೆಗಿನ ನೀಲಿ ಮಾರ್ಗ (Namma Metro Blue Line), ಕಾಳೇನ ಅಗ್ರಹಾರ-ನಾಗವಾರ ವರೆಗಿನ ಪಿಂಕ್ ಲೈನ್ (Namma metro pink line) ಸಂಪರ್ಕಿಸುವ ಮಾರ್ಗದ ಉದ್ದಕ್ಕೆ ಈ ಆಸ್ತಿಗಳು ಬರುತ್ತವೆ.
ಭೂಸ್ವಾಧೀನಕ್ಕೆ 1,900 ಕೋಟಿ ರೂ. ಖರ್ಚು
ಆರೆಂಜ್ ಮಾರ್ಗ ನಿರ್ಮಾಣ ಆರಂಭಕ್ಕೂ ಮೊದಲು ನಮ್ಮ ಮೆಟ್ರೋ ಅಧಿಕಾರಿಗಳು ಗುರುತಿಸಿರುವ ಈ ಎಲ್ಲ ಆಸ್ತಿಗಳ ಸ್ವಾಧೀನಕ್ಕಾಗಿ ಬರೋಬ್ಬರಿ 1,900 ಕೋಟಿ ರೂಪಾಯಿ ಖರ್ಚಾಗಲಿದೆ ಎಂದು ಅಂದಾಜು ಮಾಡಲಾಗಿದೆ.
ಇನ್ನೂ ಮೆಟ್ರೋ ಮೂರನೇ ಹಂತದ ಯೋಜನೆಯಲ್ಲಿ ಬರುವ ಎರಡು ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿದ ಜಿಯೋಟೆಕ್ನಿಲ್ ಜಂಟಿ ಸರ್ವೇ ಮುಂದಿನ ವಾರ ಆರಂಭವಾಗುವ ಸಾಧ್ಯತೆ ಇದೆ. BMRCL ಮೂರು ವಿಭಾಗಗಳಲ್ಲಿ ಈ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ತೀರ್ಮಾನಿಸಿದೆ. ಮುಂದಿನ ಕೆಲವೇ ವಾರಗಳಲ್ಲಿ ಈ ಕುರಿತು ಅಧಿಸೂಚನೆ ಹೊರ ಬೀಳಲಿದೆ ಎಂದು ವರದಿ ಆಗಿದೆ.

ಹೊರ ವರ್ತುಲ ರಸ್ತೆ (ORR) ನ ಮಧ್ಯದಲ್ಲಿ ಆರೆಂಜ್ ಲೈನ್ ಎತ್ತರಿಸಿದ ಕಾರಿಡಾರ್‌ಗಳು ನಿರ್ಮಾಣಗೊಳ್ಳಿವೆ. ಇಲ್ಲಿ ಬೃಹತ್ ಮೆಟ್ರೋ ಪಿಲ್ಲರ್, ಮೆಟ್ರೋ ನಿಲ್ದಾಣ, ಪ್ರವೇಶ ಮತ್ತು ನಿರ್ಗಮನ ಸ್ಥಳಗಳಿಗೆ ಮತ್ತು ಕೆಲವು ಸ್ಥಳಗಳಲ್ಲಿ ವಯಡಕ್ಟ್ ನಿರ್ಮಾಣದ ಅಗತ್ಯವಿದೆ.
1.3 ಲಕ್ಷ ಚ.ಮೀಟರ್ ಜಾಗದ ಅಗತ್ಯತೆ
ಆರೆಂಜ್ ಮೆಟ್ರೋ ಲೈನ್ ಉದ್ದಕ್ಕೂ ಒಟ್ಟು 1.3 ಲಕ್ಷ ಚ.ಮೀಟರ್ ಸ್ಥಳಗಳ ಅಗತ್ಯ ಇದೆ. ಸದ್ಯ ಗುರುತಿಸಲಾದ ಆಸ್ತಿಗಳಲ್ಲಿ ಕೆಲವು ಖಾಲಿ ಇದ್ದರೆ, ಇನ್ನೂ ಕೆಲವು ಕಟ್ಟಡ ನಿರ್ಮಿತ ಆಸ್ತಿಗಳಾಗಿವೆ. ಅದೃಷ್ಟವಶಾತ್ ಉದ್ದೇಶಿತ ಮಾರ್ಗದಲ್ಲಿ ಯಾವುದೇ ಎತ್ತರದ ಕಟ್ಟಡಗಳು ಇಲ್ಲ. ಕೇವಲ ಎರಡರಿಂದ ಮೂರು ಅಂತಸ್ತಿನ ಕಟ್ಟಡಗಳು ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
BMRCL ಸ್ವಾಧೀನಕ್ಕೆಂದು ಗುರುತಿಸಿರುವ ಆಸ್ತಿಗಳು ಸದ್ಯ ಬಿಬಿಎಂಪಿ, ಬಿಎಂಟಿಸಿ ಹಾಗೂ ಬಿಡಿಎ ಹಾಗೂ ಖಾಸಗಿ ವ್ಯಾಪ್ತಿಯ ಮಾಲೀಕತ್ವದಲ್ಲಿವೆ. ಭೂಸ್ವಾಧಿನಕ್ಕೂ ಮೊದಲು ಸಂಬಂಧಿಸಿದ ಮಾಲೀಕರ ಜೊತೆಗೆ ಚರ್ಚೆ ನಡೆಯಲಿದೆ.
ಇಂಟರ್‌ಚೇಂಜ್ ಸೌಲಭ್ಯ
ಭವಿಷ್ಯದಲ್ಲಿ ಈ ಮೆಟ್ರೋ ಆರೆಂಜ್ ಲೈನ್ ವಿವಿಧ ಮಾರ್ಗಗಳನ್ನು ಸಂಪರ್ಕಿಸುವ ಕಾರಣ ಆಯಾ ಭಾಗದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಇಂಟರ್‌ಚೇಂಜ್ ಸೌಲಭ್ಯ, ಬೃಹತ್ ನಿಲ್ದಾಣ ನಿರ್ಮಿಸುವ ಗುರಿ ಹೊಂದಿದೆ.
ಆರೆಂಜ್ ಲೈನ್ ಕೆಂಪಾಪುರ ಮತ್ತು ಹೆಬ್ಬಾಳದಲ್ಲಿ ನೀಲಿ ಮಾರ್ಗ ಸಂಧಿಸಲಿದೆ. ಹೀಗಾಗಿ ಹೆಬ್ಬಾಳ ಜಂಕ್ಷನ್‌ನಲ್ಲಿ ಇಂಟರ್ ಚೇಂಜ್ ಸೌಲಭ್ಯ, ಉಪನಗರ ರೈಲು ಮತ್ತು ಹಂತ III A ಲೈನ್ ನಮ್ಮ ಮೆಟ್ರೋ (ಸರ್ಜಾಪುರದಿಂದ ಹೆಬ್ಬಾಳ) ಗೆ ಸಂಪರ್ಕ ಕಲ್ಪಿಸಲಾಗುವುದು.
ಬೃಹತ್ ಡಿಪೋ ನಿರ್ಮಾಣ
ತುಮಕೂರು ರಸ್ತೆಯಲ್ಲಿ ಮೆಟ್ರೋ ಹಸಿರು ಮಾರ್ಗದಲ್ಲಿ ಸಂಪರ್ಕಿಸಲಿದ್ದು, ಪೀಣ್ಯ ನಿಲ್ದಾಣದಲ್ಲಿ ಇಂಟರ್‌ಚೇಂಜ್ ಸೌಲಭ್ಯ ಸಿಗಲಿದೆ. ಸುಮನಹಳ್ಳಿ ಜಂಕ್ಷನ್‌ನಲ್ಲಿ, ಹೊಸಹಳ್ಳಿ ನಿಲ್ದಾಣದಿಂದ ಕಡಬಗೆರೆವರೆಗೆ ಮಾಗಡಿ ರಸ್ತೆಯಲ್ಲಿ ಈ ಮಾರ್ಗ ಸಂಪರ್ಕ ಹೊಂದರಲಿದೆ.
ಭವಿಷ್ಯ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ 75 ಎಕರೆ ಭೂ ವ್ಯಾಪ್ತಿಯಲ್ಲಿ ಬೃಹತ್ ಡಿಪೋ ನಿರ್ಮಾಣ ಮಾಡಲಿದೆ. ಮೈಸೂರು ರಸ್ತೆಯ ನಾಯಂಡಹಳ್ಳಿಯ ನೇರಳೆ ಮಾರ್ಗದ ಮೇಲ್ಸೇತುವೆ ಮೇಲೆ ಆರಂಜ್ ಮಾರ್ಗ ರೈಲು ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಮಾಹಿತಿ ನೀಡಿವೆ.
ಸದ್ಯ ನಗರದಲ್ಲಿ ಮೆಟ್ರೋ ಹಳದಿ ಮಾರ್ಗವು ವಾಣಿಜ್ಯ ಕಾರ್ಯಾಚರಣೆ ಆರಂಭಿಸಲು ಸಿದ್ಧವಾಗಿದೆ. ನಂತರ ನೀಲಿ ಮಾರ್ಗದಲ್ಲಿ ಮೆಟ್ರೋ ಸಂಚಾರ ನಿರೀಕ್ಷಿಸಬಹುದಾಗಿದೆ. ಇದರೊಂದಿಗೆ ಗುಲಾಬಿ ಮಾರ್ಗ ತೆರೆಯಲಿದೆ. ಈ ಸಮಯದಲ್ಲಿ ಮೆಟ್ರೋ ಆರೆಂಜ್ ಮಾರ್ಗದ ಕಾಮಗಾರಿ ಆರಂಭವಾಗಿರಲಿದೆ.












Click it and Unblock the Notifications