Namma Metro: ಜೆಪಿ ನಗರ 4ನೇ ಹಂತ-ಮೈಸೂರು ರಸ್ತೆ ಯೋಜನೆ ಭೂ ಸ್ವಾಧೀನ ವಿವರ
ಬೆಂಗಳೂರು, ಡಿಸೆಂಬರ್ 26: ಕರ್ನಾಟಕ ಸರ್ಕಾರ ಬೆಂಗಳೂರು ನಗರದ ಮತ್ತೊಂದು ನಮ್ಮ ಮೆಟ್ರೋ ಯೋಜನೆಯ ಭೂ ಸ್ವಾಧೀನದ ಕುರಿತು ಮಾಹಿತಿ ನೀಡಿದೆ. ಮೆಟ್ರೋ ಹಂತ-3 ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನಪಡಿಸಿಕೊಳ್ಳಲಿದೆ. ಇದಕ್ಕಾಗಿ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಬೆಂಗಳೂರು ಮೆಟ್ರೋ ರೈಲು ಯೋಜನೆಯ ಜೆ. ಪಿ. ನಗರ 4ನೇ ಹಂತ-ಮೈಸೂರು ರಸ್ತೆ ಮಾರ್ಗದ ನಿರ್ಮಾಣಕ್ಕೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಬಿಎಂಆರ್‌ಸಿಎಲ್ ಈ ಯೋಜನೆಗಾಗಿ ಗುರುತಿಸಿರುವ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲಿದೆ.

ಅಧಿಸೂಚನೆಯಲ್ಲಿ 1966ರ ಕರ್ನಾಟಕ ಕೈಗಾರಿಕಾ ಪುದೇಶಾಭಿವೃದ್ಧಿ ಕಾಯ್ದೆಯ ವಿಧಿ 1(3) ರ ಅಧಿಸೂಚನೆ ಎಂದು ತಿಳಿಸಿದೆ. ನಮೂದಿಸಿರುವ ಸ್ವತ್ತುಗಳು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬೆಂಗಳೂರು ಮೆಟ್ರೋ ರೈಲು ಯೋಜನೆಯ 3ನೇ ಹಂತದ ಪ್ಯಾಕೇಜ್-1ರ ಜೆ. ಪಿ. ನಗರ 4ನೇ ಹಂತದಿಂದ ಮೈಸೂರು ರೋಡ್ ಮೆಟ್ರೋ ನಿಲ್ದಾಣದವರೆಗಿನ ಪ್ರದೇಶವನ್ನು ಭೂಸ್ವಾಧೀನಪಡಿಸಿಕೊಳ್ಳಲು ಎಂದು ಹೇಳಿದೆ.
ಸ್ವತ್ತುಗಳುಳ್ಳ ಪ್ರದೇಶಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ 7ನೇ ಅಧ್ಯಾಯವು ಈ ಅಧಿಸೂಚನೆಯ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರುತ್ತದೆಂದು ಘೋಷಿಸಿದೆ ಎಂದು ಅಧಿಸೂಚನೆ ತಿಳಿಸಿದೆ. ಯೋಜನೆಗೆ ಒಟ್ಟು 26811.43 ಚ. ಮೀ. ವಿಸ್ತೀರ್ಣದ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ.
ಇದರಲ್ಲಿ ನೈನಪ್ಪಶೆಟ್ಟಿಪಾಳ್ಯದಲ್ಲಿ 1830.87, ಬಿಳೇಕಹಳ್ಳಿ 1499.32, ಸಾರಕ್ಕಿ 5187.31, ಜರಗನಹಳ್ಳಿ 4556.46 ಮತ್ತು ಕದಿರೇನಹಳ್ಳಿ 82.38 ಚ. ಮೀ. ವಿಸ್ತೀರ್ಣದ ಭೂಮಿಯು ಸೇರಿದೆ ಎಂದು ಅಧಿಸೂಚನೆ ಹೇಳಿದೆ. 2024ರ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರ ನಮ್ಮ ಮೆಟ್ರೋ 3ನೇ ಹಂತದ ಡಿಪಿಆರ್‌ಗೆ ಒಪ್ಪಿಗೆಯನ್ನು ನೀಡಿದೆ.
ಅಲ್ಲದೇ ಕರೀಸಂದ್ರ 1007.92, ಕತ್ರಿಗುಪ್ಪೆ 1815.74, ಹೊಸಕೆರೆಹಳ್ಳಿ 3670.09, ಪಂತರಪಾಳ್ಯ 1872.31 ಮತ್ತು ನಾಯಂಡಹಳ್ಳಿಯಲ್ಲಿ 5289.03 ಚ. ಮೀ. ವಿಸ್ತೀರ್ಣದ ಭೂಮಿಯು ಸೇರಿದೆ ಎಂದು ತಿಳಿಸಿದೆ. ಈ ಯೋಜನೆಯಲ್ಲಿ ಎರಡು ಮಾರ್ಗ ಎತ್ತರಿಸಿದ ಮಾರ್ಗಗಳು ಬರುತ್ತದೆ. ಜೆ. ಪಿ. ನಗರ 4ನೇ ಹಂತ-ಕೆಂಪಾಪುರ (32.2 ಕಿ. ಮೀ.) ಮತ್ತು ಕಡಬಗೆರೆ-ಹೊಸಹಳ್ಳಿ (12.5 ಕಿ. ಮೀ.) ಮಾರ್ಗ ನಿರ್ಮಾಣವಾಗಲಿದೆ.
ಒಟ್ಟು 197 ಖಾಸಗಿ ಆಸ್ತಿಗಳನ್ನು ಮೆಟ್ರೋ ಯೋಜನೆಗಾಗಿ ಸ್ವಾಧೀನ ಮಾಡಿಕೊಳ್ಳಲಾಗುತ್ತದೆ. ಇವುಗಳಲ್ಲಿ ಖಾಲಿ ಜಾಗ, ಕಟ್ಟಡಗಳು ಸೇರಿವೆ. ಈಗ ಗುರುತಿಸಿರುವ ಭೂಮಿಯಲ್ಲದೇ ಇನ್ನೂ 10,892 ಚ. ಮೀ. ಭೂಮಿ ಯೋಜನೆಗೆ ಬೇಕಾಗಿದೆ. ಈ ಜಾಗ ಸರ್ಕಾರಿ ಒಡೆತನದ ಬಿಬಿಎಂಪಿ, ಬಿಡಿಎ, ಬಿಎಂಟಿಸಿ ಮತ್ತು ಇತರ ಸಂಸ್ಥೆಗಳಿಗೆ ಸೇರಿದೆ.
ಈ ಮಾರ್ಗಕ್ಕೆ ಬಿಎಂಆರ್‌ಸಿಎಲ್ 'ಕಿತ್ತಲೆ ಮಾರ್ಗ' ಎಂದು ನಾಮಕರಣ ಮಾಡಿದೆ. ಜೆ. ಪಿ. ನಗರ 4ನೇ ಹಂತ-ಕೆಂಪಾಪುರ ನಡುವೆ 22 ನಿಲ್ದಾಣಗಳು ಬರುತ್ತವೆ. ಹೊಸಹಳ್ಳಿ-ಕಡಬಗೆರೆ ನಡುವೆ 9 ನಿಲ್ದಾಣ ಬರಲಿದ್ದು, ಸುಂಕದಕಟ್ಟೆಯಲ್ಲಿ ಮೆಟ್ರೋ ಡಿಪೋವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ವಿಸ್ತೃತ ಯೋಜನಾ ವರದಿ ಹೇಳಿದೆ.
ನಮ್ಮ ಮೆಟ್ರೋ ಕಿತ್ತಲೆ ಮಾರ್ಗ ಹೊರವರ್ತುಲ ರಸ್ತೆಯ ಮೂಲಕವೂ ಸಾಗಲಿದೆ. ಹೆಬ್ಬಾಳದಲ್ಲಿ ನೀಲಿ ಮಾರ್ಗ, ಕೆಂಪು ಮಾರ್ಗಕ್ಕೆ ಸಹ ಸಂಪರ್ಕವನ್ನು ಕಲ್ಪಿಸುತ್ತದೆ. ತುಮಕೂರು ರಸ್ತೆಯಲ್ಲಿ ಹಸಿರು ಮಾರ್ಗ, ಮೈಸೂರು ರಸ್ತೆಯಲ್ಲಿ ನೇರಳೆ ಮಾರ್ಗಕ್ಕೆ ಸಹ ಈ ಮೆಟ್ರೋ ಮಾರ್ಗ ಸಂಪರ್ಕವನ್ನು ಕಲ್ಪಿಸಲಿದೆ. ಅಲ್ಲದೇ ಈಗ ನಿರ್ಮಾಣ ಹಂತದಲ್ಲಿರುವ ಬೆಂಗಳೂರು ಉಪ ನಗರ ರೈಲು ಯೋಜನೆಗೆ ಸಹ ಈ ಮಾರ್ಗ ಸಹಾಯಕವಾಗಲಿದೆ.












Click it and Unblock the Notifications