Bengaluru Metro: ಆದಾಯ ಹೆಚ್ಚಾದರೂ ತಪ್ಪದ ಆರ್ಥಿಕ ಸಂಕಷ್ಟ, ಅಂಕಿ ಸಂಖ್ಯೆ
ಬೆಂಗಳೂರು: ಬೆಂಗಳೂರಿನಲ್ಲಿ ಅಷ್ಟ ದಿಕ್ಕುಗಳಿಗೂ ತನ್ನ ಜಾಲ ವಿಸ್ತರಿಸುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮದ ಆದಾಯವು (BMRCL) ಕೆಲವು ಸವಾಲುಗಳ ಹೊರತಾಗಿ ಏರಿಕೆ ಆಗಿದೆ. ಆದರೊಂದಿಗೆ ಆರ್ಥಿಕ ನಷ್ಟಗಳು ಮುಂದುವರಿವೆ. ನಮ್ಮ ಮೆಟ್ರೋಗೆ (Bengaluru Metro) ದಾಖಲೆಯ ಆದಾಯ ಸಂಗ್ರಹವಾಗಿದೆ. ಹೀಗಿದ್ದರೂ ಆರ್ಥಿಕ ಕಷ್ಟವಾಗುತ್ತಿರುವುದು ಏಕೆ? ಹಿಂದಿನ ಆದಾಯ, ಈಗ ಎಷ್ಟಿದೆ, ನಿರ್ವಹಣಾ ವೆಚ್ಚದ ವಿವರ ಇಲ್ಲಿದೆ.
ಬೆಂಗಳೂರು ಮೆಟ್ರೋ ಆದಾಯ ಗಗನಕ್ಕೇರಿದೆ. 2024-25ರಲ್ಲಿ ನಮ್ಮ ಮೆಟ್ರೋದ ತನ್ನ ಸೇವೆಯಿಂದ ಬರೊಬ್ಬರಿ 814.29 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ದರ ಏರಿಕೆ ನಡುವೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಆದಾಯವು ಹರಿದು ಬಂದಿದೆ. ಆದರೆ ಹೆಚ್ಚಿನ ಸಾಲ, ನಿರ್ವಹಣಾ ವೆಚ್ಚಗಳು ನಿಗಮವನ್ನು ಆರ್ಥಿಕ ಒತ್ತಡಕ್ಕೆ ತಳ್ಳಿವೆ ಎಂದು ನ್ಯೂಸ್ ಫಸ್ಟ್ ಪ್ರೈಮ್ ವರದಿ ಮಾಡಿದೆ.

2024-25ರಲ್ಲಿ ನಮ್ಮ ಮೆಟ್ರೋ ಆರ್ಥಿಕವಾಗಿ ಚೇತರಿಕೆ ಕಂಡಿದೆ. ವ್ಯವಸ್ಥೆ ಮೇಲೆ ಆರ್ಥಿಕ ಒತ್ತಡ ಎದುರಾದರೂ ಸಹಿತ ಕಾರ್ಯಾಚರಣೆಯಿಂದ ದಾಖಲೆಯ ಆದಾಯ ಗಳಿಸಿದೆ. ಹಾಲಿ ₹814.29 ರೂ. ಅದಾಯವನ್ನು 2023-24ರ ಸಾಲಿನ ಆದಾಯ (644.32 ಕೋಟಿ ರೂ.) ಹೋಲಿಕೆ ಮಾಡಿದರೆ ಶೇ.26 ರಷ್ಟು ಆದಾಯ ಹೆಚ್ಚಾಗಿದೆ. ಅದಕ್ಕೂ ಹಿಂದಿನ ವರ್ಷ 2022-23ರಲ್ಲಿ ಕೇವಲ 475.2 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಅದಕ್ಕಿಂತಲೂ ಶೇ. 71 ರಷ್ಟು ಹೆಚ್ಚಿನ ಆದಾಯ 2024-25ರಲ್ಲಿ ಸಂಗ್ರಹವಾಗಿದೆ.
ಸವಾಲುಗಳ ಮಧ್ಯ ಆದಾಯ ಏರಿಕೆ: ಅಧಿಕ ನಿರ್ವಹಣಾ ವೆಚ್ಚ
ದರ ಏರಿಕೆ ವಿರುದ್ಧ ವ್ಯಾಪಕ ಆಕ್ರೋಶಗಳು ವ್ಯಕ್ತವಾದವು. ಅದರ ಬೆನ್ನಲ್ಲೆ ಹಳದಿ ಮಾರ್ಗ ತೆರೆದ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ನಿರಂತರ ಏರಿಕೆ ಆಯಿತು. ಕೋವಿಡ್ ಸವಾಲು, ದರ ಏರಿಕೆ ಬೆಳವಣಿಗೆ ಮಧ್ಯೆ ನಿಲ್ದಾಣಗಳಲ್ಲಿ ವಾಣಿಜ್ಯ ಚಟುವಟಿಕೆಯಲ್ಲಿನ ಆದಾಯ ಹೆಚ್ಚಾಯಿತು. ಸಾರಿಗೇತರ ಆದಾಯ ಹೆಚ್ಚಳಕ್ಕೂ ಮೆಟ್ರೋ ಕ್ರಮ ಕೈಗೊಂಡಿತು. ಹೀಗೆ ವಿವಿಧ ಕಾರಣಗಳಿಂದ ಮೆಟ್ರೋಗೆ ಆದಾಯ ಹರಿದು ಬಂತು. ಮತ್ತೊಂದೆಡೆ ನಿರ್ವಹಣೆ ವೆಚ್ಚದಿಂದ ಆರ್ಥಿಕ ಸವಕಳಿ ಸಹ ಉಂಟಾಯಿತು.
ನಮ್ಮ ಮೆಟ್ರೋ ನಿರ್ವಹಣೆ ವೆಚ್ಚ 706.3 ಕೋಟಿ ರೂ.ಗೆ ಏರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣ ಶೇ. 15 ರಷ್ಟು ಹೆಚ್ಚಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ನಿರ್ವಹಣೆಗೆ 107.99 ಕೋಟಿ ರೂ. ವ್ಯಯಿಸಲಾಗಿದೆ. ಆದಾಯ ಮತ್ತು ಲಾಭವು ನಿರ್ವಹಣೆಗೂ ಬಳಸಲಾಗುತ್ತಿದೆ. ಇದರಿಂದ ಬಿಎಂಆರ್‌ಸಿಎಲ್‌ಗೆ ಆರ್ಥಿಕ ಒತ್ತಡ ಹೆಚ್ಚಾಗುತ್ತಿದೆ.
ಸಾಲದ ಬಡ್ಡಿ ಪಾವತಿಯೂ ಹೆಚ್ಚಳ
ಸಾಲದ ಮೇಲಿನ ಬಡ್ಡಿ ಪಾವತಿಯು 2024-25 ರಲ್ಲಿ 140.61 ರೂ.ಗೆ ಹೆಚ್ಚಾಗಿದೆ. ಇದು ಕಳೆದ ವರ್ಷ 128.48 ಕೋಟಿ ರೂ.ನಷ್ಟಿತ್ತು. ನಮ್ಮ ಮೆಟ್ರೋ 576.79 ಕೋಟಿ ರೂ. ವೆಚ್ಚವನ್ನು ಭರಿಸುತ್ತಿದೆ. ಇದೆಲ್ಲ ನೋಡಿದರೆ ಆದಾಯ ಹೆಚ್ಚಾದರೂ 609.41 ಕೋಟಿ ರೂಪಾಯಿ ನಿವ್ವಳ ನಷ್ಟ ಎದುರಿಸುವಂತಾಗಿದೆ.
ನಮ್ಮ ಮೆಟ್ರೋ ಕಳೆದೊಂದು ದಶಕದಿಂದ ಸ್ಥಿರವಾಗಿ ಆದಾಯ ಹೆಚ್ಚಿಸಿಕೊಳ್ಳುತ್ತಲೇ ಬಂದಿದೆ. ಶುಲ್ಕ ಪರಿಷ್ಕರಣೆ, ಜನರ ಸಾಮೂಹಿಕ ಸಾರಿಗೆ ಅವಲಂಬನೆ ಹೆಚ್ಚಿದ್ದರಿಂದ 2017-18 ಹಾಗೂ 2024-25ರಲ್ಲಿ ನಿರಂತರವಾಗಿ ಆದಾಯ ಏರಿಕೆಯಾಗಿದೆ. ನಿವ್ವಳ ನಷ್ಟವು ವರ್ಷದಿಂದ ವರ್ಷಕ್ಕೆ ಹೆಚ್ಚತೊಡಗಿದೆ. ಹಿಂದಿನ ಏಳು ವರ್ಷಗಳಲ್ಲಿ ಶೇ.168 ರಷ್ಟು ಹೆಚ್ಚಾಗಿದೆ. 2017-18ರಲ್ಲಿ ಸುಮಾರು 263.29 ಕೋಟಿ ನಿರ್ವಹಣೆಗೆ ವ್ಯಯಿಸಲಾಗುತ್ತಿತ್ತು. ಅದು 2024-25ರಲ್ಲಿ 706.3 ಕೋಟಿ ರೂಪಾಯಿಗೆ ಹೆಚ್ಚಾಗಿದೆ. ಇದು ಪ್ರಮುಖ ಆರ್ಥಿಕ ಒತ್ತಡಗಳಲ್ಲಿ ಒಂದಾಗಿದೆ. ಇದರಲ್ಲಿ ಜಾಲ ವಿಸ್ತರಣೆಗೆ ಪಡೆದು ಹಣಕಾಸು ಸಹಾಯ, ಸಾಲದ ಬಡ್ಡಿಗಳು ಸೇರಿದೆ.
ಇದೆಲ್ಲವನ್ನು ಸಮತೋಲನಗೊಳಿಸಲು ಸಾರಿಗೇತರ ಆದಾಯದತ್ತ ಮೆಟ್ರೋ ಗಮನ ಹರಿಸಿದೆ. ಅಲ್ಲದೇ ಜಾಲ ವಿಸ್ತರಣೆ, ಹೊಸ ಮಾರ್ಗಗಳ ಲೊಕಾರ್ಪಣೆ ನಂತರ ಜನ ಸಂಚಾರ ಹೆಚ್ಚಾಗುತ್ತದೆ. ಆಗ ಮತ್ತಷ್ಟು ಆದಾಯ ಹರಿದು ಬಂದು, ಆರ್ಥಿಕ ಒತ್ತಡ ಕಡಿಮೆ ಆಗುವ ನಿರೀಕ್ಷೆ ಇದೆ.












Click it and Unblock the Notifications