Get Updates
Get notified of breaking news, exclusive insights, and must-see stories!

ನಮ್ಮ ಮೆಟ್ರೋ ಹಸಿರು ವಿಸ್ತರಿತ ಮಾರ್ಗ: ರೈಲು ಸಂಚಾರದ ಗಡುವು ಮತ್ತೆ ಬದಲು

ಬೆಂಗಳೂರು, ಜೂನ್ 18: ಉದ್ಯಾನ ನಗರಿ ಬೆಂಗಳೂರು ನಗರದ ನಮ್ಮ ಮೆಟ್ರೋ ಯೋಜನೆಯ ವಿಸ್ತರಿತ ಮಾರ್ಗವೊಂದರ ಗಡುವು ಮತ್ತೆ ವಿಸ್ತರಣೆಯಾಗಲಿದೆ. ಜುಲೈಗೆ ಆರಂಭವಾಗಬೇಕಿದ್ದ ಮೆಟ್ರೋ ರೈಲುಗಳ ಸಂಚಾರ ಸೆಪ್ಟೆಂಬರ್ ಅಂತ್ಯಕ್ಕೆ ಆರಂಭವಾಗುವ ನಿರೀಕ್ಷೆ ಇದೆ.

ನಾಗಸಂದ್ರ-ಮಾದಾವರ ನಡುವಿನ ನಮ್ಮ ಮೆಟ್ರೋ ಹಸಿರು ವಿಸ್ತರಿತ ಮಾರ್ಗದ 3.7 ಕಿಲೋಮೀಟರ್‌ನಲ್ಲಿ ವಾಣಿಜ್ಯ ಸಂಚಾರ ತಡವಾಗಲಿದೆ. ಮಾದವರ ನಿಲ್ದಾಣದ ಕಾಮಗಾರಿ ಸೇರಿ ವಿವಿಧ ಕಾರಣಗಳಿಗೆ ರೈಲು ಸಂಚಾರದ ನಿರೀಕ್ಷಿತ ದಿನಾಂಕ ಮುಂದಕ್ಕೆ ಹೋಗಿದೆ.

Namma Metro Green Line Nagasandra Madavara May Open In September End

ಹಸಿರು ಮಾರ್ಗದಲ್ಲಿ ರೇಷ್ಮೆ ಸಂಸ್ಥೆ ಮತ್ತು ನಾಗಸಂದ್ರ ತನಕ ಈಗಾಗಲೇ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಈ ವಿಸ್ತರಿತ ಮಾರ್ಗದಿಂದಾಗಿ ತುಮಕೂರು ರಸ್ತೆಯ ಪ್ರಯಾಣಿಕರಿಗೆ ಮತ್ತು ವಿವಿಧ ಜಿಲ್ಲೆಗಳಿಂದ ಬೆಂಗಳೂರು ನಗರಕ್ಕೆ ಬರುವ ಜನರಿಗೆ ಅನುಕೂಲವಾಗಲಿದೆ.

ಮೂರು ನಿಲ್ದಾಣಗಳು: ನಾಗಸಂದ್ರ-ಮಾದಾವರ ನಡುವಿನ ಹಸಿರು ಮಾರ್ಗ ವಿಸ್ತರಣೆಯಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ), ಮಾದವರ (ಬಿಐಇಸಿ) ಮೂರು ನಿಲ್ದಾಣಗಳಿವೆ. ಇವುಗಳಲ್ಲಿ ಎರಡು ನಿಲ್ದಾಣಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಮಾದವರ ನಿಲ್ದಾಣದ ಕೆಲವು ಕಾಮಗಾರಿ ಬಾಕಿ ಇದ್ದು, ಜೂನ್ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ರೈಲು ಸಂಚಾರಕ್ಕೆ ಆರಂಭಕ್ಕೆ ಪ್ರಮುಖವಾಗಿ ಅಗತ್ಯವಿರುವ ಸಿಗ್ನಲಿಂಗ್ ಕಾರ್ಯ, ತಾಂತ್ರಿಕ ಕಾಮಗಾರಿಗಳನ್ನು ಇನ್ನೂ ಆರಂಭಿಸಬೇಕಿದೆ. ಅಲ್ಲದೇ ಸುಮಾರು 1 ತಿಂಗಳ ಕಾಲ ಪ್ರಾಯೋಗಿಕ ಸಂಚಾರವನ್ನು ನಡೆಸಬೇಕಿದೆ. ಇವುಗಳೆಲ್ಲ ಪೂರ್ಣಗೊಂಡ ಮೇಲೆ ರೈಲ್ವೆ ಸುರಕ್ಷತಾ ಆಯುಕ್ತರನ್ನು ಪರಿಶೀಲನೆಗೆ ಆಹ್ವಾನಿಸಬೇಕಾಗಿದೆ.

ಪ್ರಾಯೋಗಿಕ ಸಂಚಾರವನ್ನು ಸುಮಾರು 45 ದಿನಗಳ ಕಾಲ ಕೈಗೊಳ್ಳಬೇಕಿದೆ. ಬಳಿಕ ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿವೆ ಎಂದು ಖಾತರಿಪಡಿಸಿಕೊಂಡು, ರೈಲ್ವೆ ಸುರಕ್ಷತಾ ಆಯುಕ್ತರನ್ನು ಪರಿಶೀಲನೆಗೆ ಕರೆಸಬೇಕು. ಅವರ ಅನುಮತಿ ಸಿಗುವಾಗ ಸೆಪ್ಟೆಂಬರ್ ಅಂತ್ಯವಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿಎಂಆರ್‌ಸಿಎಲ್ ಕೈಗೊಂಡಿರುವ ಕೇವಲ 3.7 ಕಿಲೋಮೀಟರ್ ವಿಸ್ತರಿತ ಮಾರ್ಗದ ಕಾಮಗಾರಿ ಹಲವು ಸಮಸ್ಯೆಗಳ ಕಾರಣಕ್ಕೆ ತಡವಾಗಿದೆ. ಕೆಲವು ದಿನಗಳ ಹಿಂದೆ ಜುಲೈ ಅಂತ್ಯದಲ್ಲಿ ರೈಲು ಸಂಚಾರ ಆರಂಭವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಲೋಕಸಭೆ ಚುನಾವಣೆ ಕಾರಣ ಕಾರ್ಮಿಕರು ತವರು ರಾಜ್ಯಕ್ಕೆ ಮರಳಿದ ಕಾರಣ ಕಾಮಗಾರಿ ನಿಗದಿತ ವೇಗದಲ್ಲಿ ಸಾಗಲಿಲ್ಲ.

2019ರಲ್ಲಿ ಈ ವಿಸ್ತರಿತ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರವನ್ನು ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿತ್ತು. ಆದರೆ ಅಂಚೆಪಾಳ್ಯದ ನಿವಾಸಿಗಳು ಗ್ರಾಮದ ಸಮೀಪವೇ ನಿಲ್ದಾಣ ಬರಬೇಕು ಎಂದು ಪಟ್ಟು ಹಿಡಿದರು. ನೈಟ್ ರಸ್ತೆ ಮೇಲೆ ಮೆಟ್ರೋ ಮಾರ್ಗ ಹಾದು ಹೋಗಲು ನೈಸ್ ಸಂಸ್ಥೆ ಅನುಮತಿ ನೀಡುವುದು ತಡವಾಯಿತು.

2017ರಲ್ಲಿ ಬಿಎಂಆರ್‌ಸಿಎಲ್ ಈ ವಿಸ್ತರಿತ ಮಾರ್ಗದ ಕಾಮಗಾರಿ ಆರಂಭಿಸಿತು. ಆದರೆ ಸಂಸ್ಥೆಯ ಗಡುವಿನಂತೆ ಯಾವುದೇ ಕಾಮಗಾರಿ ನಡೆಯಲಿಲ್ಲ. 2024ರ ಜೂನ್ ಅಂತ್ಯದಲ್ಲಿ ನಿಲ್ದಾಣದ ಕಾಮಗಾರಿ ಪೂರ್ಣಗೊಂಡು, ಜುಲೈನಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗುವ ತಯಾರಿ ನಡೆಸಲಾಗುತ್ತಿದೆ.

ವಿಸ್ತರಿತ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ನಮ್ಮ ಮೆಟ್ರೋ ಹಸಿರು ಮಾರ್ಗದ ರೈಲು ಸಂಚಾರದ ಉದ್ದ 33 ಕಿ. ಮೀ.ಗೆ ವಿಸ್ತರಣೆಯಾಗಲಿದೆ. ತುಮಕೂರು ರಸ್ತೆಯ ಮಾದವರದಿಂದ ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆ ತನಕ ಜನರು ನಮ್ಮ ಮೆಟ್ರೋದಲ್ಲಿ ಸುಲಭವಾಗಿ ಸಂಚಾರ ನಡೆಸಬಹುದಾಗಿದೆ.

ತುಮಕೂರು ರಸ್ತೆಯ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡುವುದು, ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ಗೆ ನಗರದಿಂದ ಮೆಟ್ರೋ ಸಂಪರ್ಕ ಕಲ್ಪಿಸುವ ಪ್ರಮುಖ ಉದ್ದೇಶದಿಂದ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಹಸಿರು ಮಾರ್ಗದ ವಿಸ್ತರಣೆ ಕೈಗೊಂಡಿತ್ತು. ಆದರೆ ಭೂ ಸ್ವಾಧೀನ, ಕೋವಿಡ್ ಪರಿಣಾಮದ ಕಾರಣ ಮೂರು ಕಿ. ಮೀ. ಮಾರ್ಗದ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+