Namma Metro: ಬಿಡದಿಗೆ ಮೆಟ್ರೋ ರೈಲು, ಮೊದಲ ಹೆಜ್ಜೆ ಇಟ್ಟ ಬಿಎಂಆರ್‌ಸಿಎಲ್
ಬೆಂಗಳೂರು, ಜುಲೈ 21: ರಾಮನಗರಕ್ಕೆ ನಮ್ಮ ಮೆಟ್ರೋ ರೈಲು ಸಂಚಾರ ನಡೆಸಲಿದೆ ಎಂಬ ಮಾತು ಹಲವು ದಿನಗಳಿಂದ ಕೇಳಿ ಬರುತ್ತಿದೆ. ಬಿಡದಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ಕುರಿತು ಬಿಎಂಆರ್‌ಸಿಎಲ್ ಮೊದಲ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ವರದಿ ತಯಾರು ಮಾಡಲು ಟೆಂಡರ್ ಸಹ ಕರೆದಿದೆ.
ಬಿಎಂಆರ್‌ಸಿಎಲ್ ಜುಲೈ 9ರಂದು 1.59 ಕೋಟಿ ರೂ.ಗಳ ಟೆಂಡರ್ ಕರೆದಿದೆ. ಒಟ್ಟು ಮೂರು ಮಾರ್ಗದಲ್ಲಿ ನಮ್ಮ ಮೆಟ್ರೋ ಯೋಜನೆಯನ್ನು ವಿಸ್ತರಣೆ ಮಾಡಲು ಕಾರ್ಯಸಾಧ್ಯತೆಯ ಅಧ್ಯಯನ ವರದಿಯನ್ನು ತಯಾರು ಮಾಡಲು ಹೈದರಾಬಾದ್ ಮೂಲದ ಕಂಪನಿಗೆ ಟೆಂಡರ್ ನೀಡಿದೆ.

ಈ ವರ್ಷದ ಫೆಬ್ರವರಿಯಲ್ಲಿ ಬಿಎಂಆರ್‌ಸಿಎಲ್ 50 ಕಿ. ಮೀ. ಮಾರ್ಗದಲ್ಲಿ ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಮತ್ತು 68 ಕಿ. ಮೀ. ನೂತನ ಮಾರ್ಗ ನಿರ್ಮಾಣದ ಕುರಿತು ಕಾರ್ಯಸಾಧ್ಯತೆಯ ಅಧ್ಯಯನ ವರದಿಯನ್ನು ತಯಾರು ಮಾಡಲು ಟೆಂಡರ್ ಆಹ್ವಾನಿಸಿತ್ತು. ಈಗ ಟೆಂಡರ್ ಅಂತಿಮಗೊಳಿಸಲಾಗಿದೆ.
ಬಿಡದಿಗೆ ನಮ್ಮ ಮೆಟ್ರೋ ರೈಲು?; ಬಿಎಂಆರ್‌ಸಿಎಲ್ ವರದಿ ಪ್ರಕಾರ ವಿಸ್ತರಿತ ಮಾರ್ಗದಲ್ಲಿ ಚಲ್ಲಘಟ್ಟ-ಬಿಡದಿ (15 ಕಿ. ಮೀ.), ಸಿಲ್ಕ್ ಇನ್ಸಿಟಿಟ್ಯೂಟ್-ಹಾರೋಹಳ್ಳಿ (24 ಕಿ. ಮೀ.), ಬೊಮ್ಮಸಂದ್ರ-ಅತ್ತಿಬೆಲೆ (11 ಕಿ. ಮೀ) ಮಾರ್ಗವಿದೆ. ಕಾಳೇನ ಅಗ್ರಹಾರ-ಕಾಡುಗೋಡಿ ಟ್ರೀ ಪಾರ್ಕ್ ವಯಾ ಜಿಗಣಿ, ಅನೇಕಲ್, ಅತ್ತಿಬೆಲೆ, ಸರ್ಜಾಪುರ ಮತ್ತು ವರ್ತೂರು (52.41 ಕಿ. ಮೀ.) ಹೊಸ ಮಾರ್ಗ ಸೇರಿದೆ.
ಜೂನ್ 29ರಂದು ಹೈದರಾಬಾದ್ ಮೂಲದ ಕಂಪನಿ ತುಮಕೂರಿಗೆ ನಮ್ಮ ಮೆಟ್ರೋ ರೈಲು ಯೋಜನೆ ವಿಸ್ತರಣೆ ಮಾಡುವ ಕುರಿತು 52.41 ಕಿ. ಮೀ. ಕಾರ್ಯಸಾಧ್ಯತೆಯ ಅಧ್ಯಯನ ವರದಿಯನ್ನು ತಯಾರು ಮಾಡಲು ಪ್ರತ್ಯೇಕ ಟೆಂಡರ್ ಪಡೆದಿತ್ತು.
ಯಾವುದೇ ಯೋಜನೆಯ ಮೇಲೆ ಹೂಡಿಕೆ ಮಾಡುವ ಮೊದಲು ಕಾರ್ಯಸಾಧ್ಯತೆಯ ಅಧ್ಯಯನ ವರದಿಯನ್ನು ತಯಾರು ಮಾಡಲಾಗುತ್ತದೆ. ಯೋಜನೆಯ ಪ್ರಾಥಮಿಕ ಅಧ್ಯಯನ, ತಾಂತ್ರಿಕ, ಸಾಮಾಜಿಕ, ಆರ್ಥಿಕ ಮುಂತಾದ ಅಂಶಗಳು ಈ ವರದಿಯಲ್ಲಿ ಸೇರಿರುತ್ತವೆ. ಈ ವರದಿ ಅಂತಿಮಗೊಂಡರೆ ಯೋಜನೆಯ ಡಿಪಿಆರ್ ತಯಾರು ಮಾಡಲಾಗುತ್ತದೆ.
ಕರ್ನಾಟಕ ಸರ್ಕಾರ ಕಾರ್ಯಸಾಧ್ಯತೆಯ ಅಧ್ಯಯನ ವರದಿಯ ಅನ್ವಯ ಬಿಡದಿಗೆ ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಮಾಡಲು ಒಪ್ಪಿಗೆ ನೀಡಲಿದೆ. ಈ ವರದಿಗೆ ಒಪ್ಪಿಗೆ ಸಿಕ್ಕಿದರೆ ಬಿಎಂಆರ್‌ಸಿಎಲ್ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರು ಮಾಡಲು ಪ್ರತ್ಯೇಕ ಟೆಂಡರ್ ಕರೆಯಲಿದೆ.
2023ರ ನವೆಂಬರ್‌ನಲ್ಲಿ ಬಿಡದಿ ಟೊಯೋಟಾ ಘಟಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಪಾಲ್ಗೊಂಡಿದ್ದರು. ಆಗ ಅವರು ಬಿಡದಿ ತನಕ ನಮ್ಮ ಮೆಟ್ರೋ ರೈಲು ಯೋಜನೆ ವಿಸ್ತರಣೆ ಮಾಡುವ ಕುರಿತು ಮಾತನಾಡಿದ್ದರು.
ಬೆಂಗಳೂರು ನಗರದ ಹೊರವಲಯಕ್ಕೂ ಕೈಗಾರಿಕೆ, ಹೂಡಿಕೆಗಳನ್ನು ಆಕರ್ಷಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಬಿಡದಿಯನ್ನು ಕೈಗಾರಿಕಾ ಹಬ್ ಆಗಿ ಪರಿವರ್ತನೆ ಮಾಡಿ ಬೆಂಗಳೂರು ನಗರದ ಮೇಲಿರುವ ಒತ್ತಡ ಕಡಿಮೆ ಮಾಡಲು ಮುಂದಾಗಿದೆ. ಇದೇ ಮಾದರಿಯಲ್ಲಿ ಬಿಎಂಆರ್‌ಸಿಎಲ್ ಸಹ ಹೊರ ವಲಯಕ್ಕೆ ಮೆಟ್ರೋ ಸಂಪರ್ಕ ವಿಸ್ತರಣೆ ಮಾಡುವ ಚಿಂತನೆ ನಡೆಸುತ್ತಿದೆ.
ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಮಾಡಲು ಬಿಎಂಆರ್‌ಸಿಎಲ್ ಈಗಾಗಲೇ ಎರಡು ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ. ಮೊದಲ ಹಂತದಲ್ಲಿ 50 ಕಿ. ಮೀ. ಉದ್ದದ ಮೂರು ಕಾರಿಡಾರ್, 2ನೇ ಹಂತದಲ್ಲಿ ಒಟ್ಟು 60 ಕಿ. ಮೀ. ಪ್ಯಾಕೇಜ್ ನಿರ್ಮಾಣ ಸೇರಿದೆ.
ಬೆಂಗಳೂರು ನಗರದಿಂದ ಪ್ರತಿನಿತ್ಯ ಸಾವಿರಾರು ಜನರು ಬಿಡದಿಗೆ ಪ್ರಯಾಣಿಸುತ್ತಾರೆ. ಈಗಾಗಲೇ ಸರ್ಕಾರ ಬಿಡದಿ ಯೋಜನಾ ಪ್ರಾಧಿಕಾರವನ್ನು ಬದಲಾವಣೆ ಮಾಡಿ, ಬೃಹತ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಂದು ಮರುನಾಮಕರಣ ಮಾಡಿದೆ. ಇದರ ಜೊತೆಗೆ ಬಿಡದಿಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸುತ್ತಿದೆ.
ಬಿಡದಿಯಲ್ಲಿ ಬೃಹತ್ ಕೈಗಾರಿಕಾ ಪ್ರದೇಶವಿದೆ. ಸುಮಾರು 1 ಲಕ್ಷಕ್ಕೂ ಅಧಿಕ ಜನರು ಇಲ್ಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನಿಂದ ಪ್ರತಿದಿನ ಸಂಚಾರ ನಡೆಸುವ ಜನರ ಅನುಕೂಲಕ್ಕಾಗಿ ಮೆಟ್ರೋ ಮಾರ್ಗವನ್ನು ವಿಸ್ತರಿಸುವಂತೆ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರವನ್ನು ಒತ್ತಾಯಿಸಿದ್ದರು.
ನಮ್ಮ ಮೆಟ್ರೋ ಸಂಪರ್ಕ ಬಿಡದಿಗೆ ಅಗತ್ಯವಿದೆಯೇ? ಅಥವಾ ಇಲ್ಲವೇ? ಎಂಬುದರ ಕುರಿತು ಸಮೀಕ್ಷೆಯನ್ನು ನಡೆಸಲಾಗುತ್ತದೆ. ನಂತರ ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್ ಪ್ರಸ್ತಾವನೆ ಕಳುಹಿಸಲಿದೆ. ಸರ್ಕಾರ ಬಳಿಕ ತನ್ನ ತೀರ್ಮಾನವನ್ನು ಕೈಗೊಳ್ಳಲಿದೆ.












Click it and Unblock the Notifications