ದುಬಾರಿಯಾಗಲಿದೆ ನಮ್ಮ ಮೆಟ್ರೋ ಪ್ರಯಾಣದರ
ಬೆಂಗಳೂರು, ಅ.18 : ನವೆಂಬರ್ ಅಂತ್ಯದ ವೇಳೆಗೆ ಪೀಣ್ಯ-ಯಶವಂತಪುರ ನಮ್ಮ ಮೆಟ್ರೋ ರೈಲು ಪ್ರಯಾಣಆರಂಭಿಸುವುದಾಗಿ ಹೇಳಿದ್ದ ಬಿಎಂಆರ್ ಸಿಎಲ್, ಸದ್ಯ ದರ ಏರಿಕೆ ಮಾಡುವುದಾಗಿ ಹೇಳಿದೆ. ನಮ್ಮ ಮೆಟ್ರೋ ರೀಚ್ 3 ಮತ್ತು 3ಎನಲ್ಲಿ ಮೆಟ್ರೋ ದರ ಏರಿಕೆ ಮಾಡಲು ಸಿದ್ಧತೆ ನಡೆಸಿದೆ.
ಬಿಎಂಆರ್ ಸಿಎಲ್ ಸಿದ್ಧಪಡಿಸಿರುವ ಪ್ರಸ್ತಾವನೆ ಜಾರಿಗೆ ಬಂದರೆ, ಪೀಣ್ಯ ಮತ್ತು ಸಂಪಿಗೆ ರಸ್ತೆಯ ನಡುವೆ ಪ್ರಯಾಣಿಸುವ ಜನರು ನಮ್ಮ ಮೆಟ್ರೋದಲ್ಲಿ ಹೆಚ್ಚಿನ ಪ್ರಯಾಣದರ ಪಾವತಿ ಮಾಡಬೇಕಾಗುತ್ತದೆ. ನವೆಂಬರ್ ಅಂತ್ಯದ ವೇಳೆಗೆ ಮಾರ್ಗ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಮೊದಲು ಮೆಟ್ರೋ ಸೇವೆ ಆರಂಭವಾಗಿದ್ದು ಎಂ.ಜಿ.ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ. 2011ರಲ್ಲಿ ಈ ಸೇವೆ ಪ್ರಾರಂಭವಾಗಿದೆ. ಆದರೂ, ಇದುವರೆಗೂ ಈ ಮಾರ್ಗದಲ್ಲಿ ಪ್ರಯಾಣ ದರ ಹೆಚ್ಚಳ ಮಾಡಿಲ್ಲ. ಈ ಮಾರ್ಗದಲ್ಲಿ ಸದ್ಯ 15ರೂ. ಪ್ರಯಾಣದರವಿದೆ.
ಆದರೆ, ಪೀಣ್ಯ-ಸಂಪಿಗೆ ರಸ್ತೆ ಮಾರ್ಗದಲ್ಲಿ ಪ್ರತಿ ಕಿ.ಮೀಗೆ 2.14ರೂ.ನಂತೆ ಪ್ರಯಾಣ ದರ ನಿಗದಿಪಡಿಸಲು ಬಿಎಂಆರ್ ಸಿಎಲ್ ಸಿದ್ಧತೆ ನಡೆಸಿದೆ. ಈ ಪ್ರಸ್ತಾವನೆ ಜಾರಿಗೆ ಬಂದರೆ. ಕನಿಷ್ಠ ಪ್ರಯಾಣದರ 10 ರೂ.ಗಳಾಗಲಿದ್ದು, 22 ರೂ.ವರೆಗೆ ಪ್ರಯಾಣ ದರ ಹೆಚ್ಚಳವಾಗಬಹುದು.
ರೀಚ್ 3 ಮತ್ತು 3ಎ ಮಾರ್ಗದಲ್ಲಿ ನವೆಂಬರ್ ಅಂತ್ಯಕ್ಕೆ ಸಾರ್ವಜನಿಕ ಪ್ರಯಾಣ ಆರಂಭಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದೆ. ಅದಕ್ಕೆ ಮೊದಲು ಮಾರ್ಗದ ದರಗಳ ಕುರಿತು ವರದಿ ತಯಾರಿಸಲಿ ತಂಡವೊಂದನ್ನು ನೇಮಿಸಿದ್ದು, ಅದು ಅಧ್ಯಯನ ನಡೆಸುತ್ತಿದೆ. (ನವೆಂಬರ್ ನಲ್ಲಿ ಯಶವಂತಪುರ-ಪೀಣ್ಯ ಮೆಟ್ರೋ ರೈಲು)
ರೀಚ್ 3 ಮಾರ್ಗದ ಎಲ್ಲಾ ಕಾಮಗಾರಿ ಮುಗಿಸಿಲು ನ.15ರ ಅಂತಿಮ ಗಡುವನ್ನು ಬಿಎಂಆರ್ ಸಿಎಲ್ ನೀಡಿದೆ. ನಂತರ ಪ್ರಾಯೋಗಿಕ ಪರೀಕ್ಷೆ ನಡೆಸಿ, ಸಾರ್ವಜನಿಕ ಸಂಚಾರಕ್ಕೆ ಮಾರ್ಗ ಮುಕ್ತಗೊಳಿಸಲು ಚಿಂತನೆ ನಡೆದಿದೆ.
ಸದ್ಯ ವಿದ್ಯುತ್ ವೆಚ್ಚ ಸೇರಿದಂತೆ ಅನೇಕ ದರಗಳು ಹೆಚ್ಚಾಗಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ ಎಂದು ಬಿಎಂಆರ್ ಸಿಎಲ್ ಅಭಿಪ್ರಾಯಪಟ್ಟಿದೆ. ಆದರೆ, ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ನಡುವಿನ ಪ್ರಯಾಣದರ ಹೆಚ್ಚಳದ ಕುರಿತು ಸಂಸ್ಥೆ ಯಾವುದೇ ಸುಳಿವು ನೀಡಿಲ್ಲ.












Click it and Unblock the Notifications