Namma Metro: ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಮತ್ತೆ ವಿಳಂಬ, 2025ಕ್ಕೆ ಮುಂದೂಡಿಕೆ? ಅಪ್ಡೇಟ್ ಮಾಹಿತಿ
ಬೆಂಗಳೂರು, ಸೆಪ್ಟಂಬರ್ 03: ಬೆಂಗಳೂರು ನಮ್ಮ ಮೆಟ್ರೋ (Namma Metro) ರೈಲು ಯೋಜನೆಗಳ ಪೈಕಿ ಕಾಮಗಾರಿ ಪೂರ್ಣಗೊಂಡು, ಪ್ರಾಯೋಗಿಕ ಸಂಚಾರ, ಅಂತಿಮ ಪರಿಶೀಲನೆಯಲ್ಲಿರುವ 'ಹಳದಿ ಮಾರ್ಗ'ದಲ್ಲಿನ (Metro yellow line) ಕಾರ್ಯಾಚರಣೆಗೆ ಪ್ರಯಾಣಿಕರು ಕಾತರರದಿಂದ ಕಾಯ್ದಿದ್ದಾರೆ. ಆದರೆ ಮೂಲಗಳ ಪ್ರಕಾರ ಈ ಮಾರ್ಗದಲ್ಲಿನ ಸಂಚಾರ ಇನ್ನಷ್ಟು ವಿಳಂಬವಾಗಲಿದೆ. ಇದರಿಂದ ಪ್ರಯಾಣಿಕರಿಗೆ ನಿರಾಸೆ ಉಂಟಾಗಲಿದೆ.
ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗೆ ಹಳದಿ ಮಾರ್ಗದ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿವೆ. ಇನ್ನೇನು ಇದೇ ಡಿಸೆಂಬರ್ ಒಳಗೆ ಸಾರ್ವಜನಿಕ ಕಾರ್ಯಾಚರಣೆಗೆ ಮಾರ್ಗ ಮುಕ್ತವಾಗಲಿದೆ ಎಂದು ಹೇಳಲಾಗಿತ್ತು.

ಸೆಂಟ್ರಲ್ ಸಿಲ್ಕ್ ಬೋರ್ಡ್ ಹಾಗೂ ಇನ್ನಿತರ ಕಡೆಗಳಿಂದ ನಿತ್ಯ ಸಂಚಾರ ದಟ್ಟಣೆಯಲ್ಲಿ ಒದ್ದಾಡಿಕೊಂಡು ಐಟಿ ಕಾರಿಡಾರ್ ಆಗಿರುವ ಎಲೆಕ್ಟ್ರಾನಿಕ್ ಸಿಟಿ ಓಡಾಡುವ ಪ್ರಯಾಣಿಕರಿಗೆ ಈ ಹಳದಿ ಮಾರ್ಗ ಆಶಾಯದಾಯಕವಾಗಿದೆ. ಈ ಮಾರ್ಗದ ಮೆಟ್ರೋ ಹತ್ತಲು ಅವರು ಕಾತರರಾಗಿದ್ದಾರೆ. ಆದರೆ ಮೂಲಗಳ ಪ್ರಕಾರ, ಇದೇ ವರ್ಷ ಡಿಸೆಂಬರ್‌ಗೆ ಮೆಟ್ರೋ ಮಾರ್ಗ ತೆರಯದೇ ಮುಂದಿನ ವರ್ಷ ಅಂದರೆ 2025ಕ್ಕೆ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
18.82 ಕಿಮೀ ಮಾರ್ಗದಲ್ಲಿ ಸಂಚಾರ ಯಾವಾಗ
ಚೀನಾದಿಂದ ಬೆಂಗಳೂರಿಗೆ ಬಂದ ಚಾಲಕ ರಹಿತ ಮೆಟ್ರೋ ರೈಲುಗಳಿಂದ ಅಧಿಕಾರಿಗಳು ಪ್ರಾಯೋಗಿಕ ಸಂಚಾರ ಆರಂಭಿಸಿದ್ದಾರೆ. ಇದೆಲ್ಲ ಮುಗಿಯಲು ಮೂರು ತಿಂಗಳು ಬೇಕಾಗಬಹುದು. ಅದಾಗುವ ಹೊತ್ತಿಗೆ ವರ್ಷ ಪೂರ್ಣಗೊಳ್ಳಲಿದೆ. ಹೀಗಾಗಿ ಡಿಸೆಂಬರ್ ಗೆ ಈ 18.82 ಕಿಲೋ ಮೀಟರ್ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಬಿಎಂಆರ್‌ಸಿಎಲ್ ಪ್ಲಾನ್ ಮಾಡಿಕೊಂಡಿತ್ತು.

ಸದ್ಯದ ಅಪ್ಡೇಟ್ ಮಾಹಿತಿ ಪ್ರಕಾರ, ಈ ಗಡುವು ಮತ್ತೆ 2025ಕ್ಕೆ ಮುಂದೂಡಲಾಗಿದೆ. ಕೋಲ್ಕತ್ತಾ ಮೂಲದ ಟಿಟಾಘರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಕಂಪನಿಯು ರೈಲು ಪೂರೈಕೆಯಲ್ಲಿ ಮಾಡುತ್ತಿರುವ ವಿಳಂಬವೇ ಗಡುವು ಮುಂದೂಡಿಕೆಗೆ ಕಾರಣ ಎನ್ನಲಾಗಿದೆ.
ಹಳದಿ ಮಾರ್ಗ ಸಂಚಾರ ಮತ್ತೆ ವಿಳಂಬ ಏಕೆ?
ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ಸದ್ಯ ಎರಡು ಸೆಟ್ ರೈಲು ಬಂದಿತ್ತು. 2024 ರ ಏಪ್ರಿಲ್ ಹಾಗೂ ಡಿಸೆಂಬರ್ ಹೊತ್ತಿಗೆ ಮತ್ತಷ್ಟು ರೈಲುಗಳು ಬೆಂಗಳೂರಿಗೆ ಬರಲಿವೆ ಎಂದು ತಿಳಿಸಿದ್ದಾರೆ ಆದರೆ ಒಪ್ಪಂದದಂತೆ ಆಗಸ್ಟ್‌ನಲ್ಲಿ ಟಿಟಾಘರ್‌ನಿಂದ ವಿತರಣೆಯ ನಿರೀಕ್ಷೆ ಹುಸಿಯಾಗಿದೆ. ಪೂರೈಕೆಯ ವಿಳಂಬಕ್ಕೆ ಕಂಪನಿಯು ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದ ಸಮಸ್ಯೆಗಳ ಕಾರಣ ತಿಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೀಗಿದ್ದರೂ ಸಹ ಆಗಸ್ಟ್‌ಗೆ ಬದಲಾಗಿ ಟಿಟಾಘರ್‌ನಿಂದ ರೈಲು ಸೆಟ್ ಅಕ್ಟೋಬರ್ ಇಲ್ಲವೇ ನವೆಂಬರ್ ಬರಬಹುದು ಎಂದು ಅಧಿಕಾರಿಗಳು ಭರವಸೆ ಇಟ್ಟುಕೊಂಡಿದ್ದಾರೆ. ಪ್ರಾಯೋಗಿಕ ಪರೀಕ್ಷೆ ಮುಗಿದು ವಾಣಿಜ್ಯ ಕಾರ್ಯಾಚರಣೆಗೆ ಅನುಮೋದನೆ ದೊರೆಯುತ್ತಿದ್ದಂತೆ ಸುಮಾರು 7ರಿಂದ 8 ರೈಲುಗಳು ಬೇಕಾಗುತ್ತದೆ. ಅಷ್ಟು ರೈಲು ಈ ಹಳದಿ ಮಾರ್ಗದಲ್ಲಿ ಓಡಿಸಲು ಇಲ್ಲದ ಕಾರಣ, ಸಾರ್ವಜನಿಕರಿಗೆ ಮುಕ್ತಗೊಳ್ಳುವುದು 2025ಕ್ಕೆ ಮುಂದೂಡಲಾಗಿದೆ..
ಇನ್ನೂ ಸೋಮವಾರ ಬೆಂಗಳೂರು ಕೇಂದ್ರದ ಸಂಸದ ಪಿಸಿ ಮೋಹನ್ ಮತ್ತು ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಕೆ.ಆರ್ ಪುರದಿಂದ ಮೆಜೆಸ್ಟಿಕ್ ನಿಲ್ದಾಣವರೆಗೆ ನೇರಳೆ ಮಾರ್ಗದಲ್ಲಿ ಸಂಚರಿಸಿ ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿದರು. ಸಂಚಾರದಲ್ಲಿ ತೊಂದರೆ, ಸಮಸ್ಯೆ, ಇನ್ನಿತರ ಕುಂದು ಕೊರತೆ ಆಲಿಸಿದರು..












Click it and Unblock the Notifications