Namma Metro; ಚಾಲಕ ರಹಿತ ಮೆಟ್ರೋ ಬೋಗಿ ಪರೀಕ್ಷೆ ವಿವರ ತಿಳಿಯಿರಿ
ಬೆಂಗಳೂರು, ಫೆಬ್ರವರಿ 19: ನಮ್ಮ ಮೆಟ್ರೋ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ಮೊದಲ ಬಾರಿಗೆ ಚಾಲಕ ರಹಿತ ಮೆಟ್ರೋ ರೈಲ ಅನ್ನು ಬೆಂಗಳೂರಿನಲ್ಲಿ ಪರಿಚಯಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಚಾಲಕ ರಹಿತ ಮೆಟ್ರೋ ರೈಲು ಸಂಚಾರಕ್ಕೆ ಭರದಿಂದ ಸಿದ್ಧತೆ ಸಾಗುತ್ತಿದ್ದು ಈಗಾಗಲೇ ಚಾಲಕ ರಹಿತ ರೈಲಿನ ಬೋಗಿಗಳು ಹೆಬ್ಬಗೋಡಿಗೆ ಬಂದು ತಲುಪಿವೆ.
ಮೊದಲ ಚಾಲಕ ರಹಿತ ರೈಲು ಚೀನಾದಿಂದ ಸಮುದ್ರ ಮಾರ್ಗವಾಗಿ ಚೆನ್ನೈ ಬಂದು ಬಳಿಕ ರಸ್ತೆ ಮಾರ್ಗವಾಗಿ ಹೆಬ್ಬಗೋಡಿಗೆ ಬಂದು ತಲುಪಿವೆ. ಹೊಸದಾಗಿ ಬಂದ ನಮ್ಮ ಮೆಟ್ರೋದ ಚಾಲಕ ರಹಿತ ರೈಲಿನ ಬೋಗಿಗಳನ್ನು ಅನ್‌ಲೋಡ್ ಮಾಡಿ ಹಳಿಗಳ ಮೇಲೆ ಜೋಡಿಸುವ ಪ್ರಕ್ರಿಯೆ ಮುಗಿದಿದೆ.

ಕಳೆದ ವಾರ ದಿನದ ಹಿಂದೆ ನಮ್ಮ ಮೆಟ್ರೋದ ಕೋಚ್‌ಗಳು ಚೆನ್ನೈನಿಂದ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಆಗಮಿಸಿದ್ದು, ಲಾರಿಗಳಿಂದ ಅನ್‌ಲೋಡ್ ಮಾಡಿ ಹಳಿಗಳ ಮೇಲೆ ಜೋಡಿಸಲಾಗಿದೆ. ಸುಮಾರು ಮೂರ್ನಾಲ್ಕು ತಿಂಗಳು ಈ ಚಾಲಕ ರಹಿತ ರೈಲು ಸಂಚಾರದ ಪ್ರಯೋಗ ನಡೆಯಲಿದ್ದು, ಬಳಿಕ ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.
ಸದ್ಯ ಎಲೆಕ್ಟ್ರಾನಿಕ್ ಸಿಟಿಯ ಮೆಟ್ರೋ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋದ ಪ್ರಯೋಗಾರ್ಥ ಪರೀಕ್ಷೆ ಮಾರ್ಚ್1 ರಂದು ನಡೆಸಲು ಬಿಎಂಆರ್‌ಸಿಎಲ್ ಮುಂದಾಗಿದೆ ಎನ್ನಲಾಗಿದೆ. ನಾಲ್ಕು ತಿಂಗಳ ಕಾಲ 37 ಪರೀಕ್ಷೆಗಳು ನಡೆಯಲಿದ್ದು, ಒಟ್ಟು 45 ದಿನಗಳವರೆಗೆ ಸಿಗ್ನಲಿಂಗ್ ಪರೀಕ್ಷೆಗಳು ನಡೆಯಲಿವೆ. ಈ ಮೆಟ್ರೋ ಕೋಚ್‌ಗಳು ಚಾಲಕ ರಹಿತ ಆಗಿರುವುದರಿಂದ ಇವುಗಳ ಪ್ರಾಯೋಗಿಕ ಸಂಚಾರಕ್ಕೆ ಸಹಕಾರಿಯಾಗುವಂತೆ ಮಾಹಿತಿ ನೀಡಲು ಬೋಗಿ ನಿರ್ಮಿಸಿದ ಚೀನಾ ಕಂಪನಿಯ ಅಧಿಕಾರಿಗಳು ಬೆಂಗಳೂರಿಗೆ ಆಗಮಿಸಲಿದ್ದಾರೆ.
ಚೀನಾ ಕಂಪನಿಯ ಅಧಿಕಾರಿಗಳಿಂದ ನಮ್ಮ ಮೆಟ್ರೋ ಅಧಿಕಾರಿಗಳಿಗೆ ಚಾಲಕ ರಹಿತ ಕೋಚ್‌ಗಳ ಬಗ್ಗೆ ತರಬೇತಿ ನೀಡಲಿದ್ದು, ಆ ಬಳಿಕ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ. ಬಳಿಕ ಟ್ರ್ಯಾಕ್ನಲ್ಲಿ 15 ಪರೀಕ್ಷೆಗಳು ನಡೆಯಬೇಕಿದೆ. ಹೀಗಾಗಿ ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟದ ಬಗ್ಗೆ ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರು, ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸುರಕ್ಷತೆ ಮತ್ತು ರೈಲ್ವೆ ಮಂಡಳಿಯಿಂದ ಅನುಮೋದನೆಯ ಅಗತ್ಯವಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಹಳದಿ ಮಾರ್ಗದಲ್ಲಿ ಈ ಚಾಲಕ ರಹಿತ ನಮ್ಮ ಮೆಟ್ರೋ ರೈಲು ಸಂಚಾರ ನಡೆಸಲಿದೆ ಎನ್ನಲಾಗಿದೆ. ರಾಷ್ಟ್ರೀಯ ವಿದ್ಯಾಲಯ ರೋಡ್ (ಆರ್.ವಿ ರಸ್ತೆ) - ಬೊಮ್ಮಸಂದ್ರ ನಮ್ಮ ಮೆಟ್ರೋ ಹಳದಿ ಮಾರ್ಗ ಸದ್ಯವೇ ಕಾರ್ಯಾರಂಭ ಮಾಡಲಿದ್ದು ಅದರಲ್ಲಿ ಈ ಚಾಲಕ ರಹಿತ ರೈಲು ಓಡಾಡಲಿದೆ ಎನ್ನಲಾಗಿದೆ.












Click it and Unblock the Notifications