Namma Metro: 13ನೇ ವರ್ಷಕ್ಕೆ ಕಾಲಿಟ್ಟ ನಮ್ಮ ಮೆಟ್ರೋ: ಸಾಧನೆಗಳು, ಮುಂದಿನ ಸವಾಲುಗಳು
ಬೆಂಗಳೂರು: ನಮ್ಮ ಮೆಟ್ರೋ ಆರಂಭವಾಗಿ ಇಂದಿಗೆ (ಅಕ್ಟೋಬರ್ 20) 12 ವರ್ಷಗಳು ಪೂರೈಸಿದ್ದು, 13ನೇ ವರ್ಷಕ್ಕೆ ಕಾಲಿಡುತ್ತಿದೆ. ಆರಂಭದಲ್ಲಿ ನಮ್ಮ ಮೆಟ್ರೋ ಬಗ್ಗೆ ಹಲವರು ಹಾಸ್ಯ ಮಾಡಿದ್ದುಂಟು, ಆಟಿಕೆ ರೈಲುಗಳಿಂತಿವೆ ಎಂದು ಕಾಲೆಳಿದಿದ್ದು ಉಂಟು ಆದರೆ ಈಗ ನಮ್ಮ ಮೆಟ್ರೋ ಬೆಂಗಳೂರು ಟ್ರಾಫಿಕ್‌ಗೆ ಪರಿಹಾರ ಎನ್ನುವಂತೆ ಕೆಲಸ ಮಾಡುತ್ತಿದೆ.
ಅಕ್ಟೊಬರ್ 20, 2011ರಲ್ಲಿ ನಮ್ಮ ಮೆಟ್ರೋ ಆರಂಭವಾಯಿತು. ಆರಂಭದಲ್ಲಿ 6.7 ಕಿಮೀ ವ್ಯಾಪ್ತಿಯಲ್ಲಿ ಮೆಟ್ರೋ ಮಾರ್ಗ ಇದ್ದಾಗ, 20 ಸಾವಿರ ಇದ್ದ ದೈನಂದಿನ ಪ್ರಯಾಣಿಕರ ಸಂಖ್ಯೆ ಈಗ 7 ಲಕ್ಷ ದಾಟಿದೆ. ನಮ್ಮ ಮೆಟ್ರೋ ಒಟ್ಟು ಮಾರ್ಗ ಈಗ 73.81 ಕಿಮೀ ಆಗಿದೆ.

ಆದರೂ ನಮ್ಮ ಮೆಟ್ರೋ ನಿರೀಕ್ಷಿತ ವೇಗದಲ್ಲಿ ಜಾಲವನ್ನು ವಿಸ್ತರಣೆ ಮಾಡುತ್ತಿಲ್ಲ, 13 ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಲೆಕ್ಕ ಹಾಕುವುದಾದರೆ, ಪ್ರತಿ ವರ್ಷ 5.5 ಕಿಮೀ ಮಾತ್ರ ನಮ್ಮ ಮೆಟ್ರೋ ಮಾರ್ಗ ಸೇರ್ಪಡೆಯಾಗಿದೆ. ಅಕ್ಟೋಬರ್ 9ರಂದು ಬಿಎಂಆರ್ ಸಿಎಲ್ ಸಂಪೂರ್ಣ ನೇರಳೆ ಮಾರ್ಗದಲ್ಲಿ ಕಾರ್ಯಾಚರಣೆ ಆರಂಭಿಸಿದೆ.
ದೇಶದ ಎರಡನೇ ಅತಿ ದೊಡ್ಡ ಮೆಟ್ರೋ
ನಮ್ಮ ಮೆಟ್ರೋ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದರೂ, ಬಿಎಂಆರ್ ಸಿಎಲ್ ಈಗ ದೇಶದ ಎರಡನೇ ಅತಿದೊಡ್ಡ ಕಾರ್ಯಾಚರಣೆಯ ಮೆಟ್ರೋ ಜಾಲವನ್ನು ಹೊಂದಿದೆ. 73.81 ಕಿಮೀ ಮಾರ್ಗದಲ್ಲಿ 66 ನಿಲ್ದಾಣಗಳಿದ್ದು, ಪ್ರತಿ ದಿನ 1.8 ಕೋಟಿ ರೂಪಾಯಿ ಸಂಗ್ರಹಿಸುತ್ತಿದೆ.
2ನೇ ಹಂತ, 2ಎ ಹಂತ ಮತ್ತು 2ಬಿ ಹಂತದಲ್ಲಿ ಇನ್ನೂ ಹಲವು ಮಾರ್ಗಗಳ ಕಾಮಗಾರಿ ನಡೆಯುತ್ತಿದ್ದು, ಇವು ಸಂಪೂರ್ಣವಾಗಲು ಇನ್ನೂ ಹೆಚ್ಚಿನ ಸಮಯವಾಗಲಿದೆ. 2011ರಲ್ಲಿ ಬೆಂಗಳೂರು ನಗರದಲ್ಲಿ ನೋಂದಾಯಿತ ವಾಹನಗಳ ಸಂಖ್ಯೆ 45.5 ಲಕ್ಷ ಇದ್ದರೆ, ಈಗ ಅದು 1.1 ಕೋಟಿ ಮೀರಿದ್ದು, ನಗರದಲ್ಲಿ ಟ್ರಾಫಿಕ್ ಹೆಚ್ಚಳಕ್ಕೆ ಕಾರಣವಾಗಿದೆ. 2ನೇ ಹಂತದ ಮೆಟ್ರೋ ಕಾರಿಡಾರ್ ಯೋಜನೆ ಸಂಪೂರ್ಣವಾದರೆ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಇನ್ನೂ ಕಡಿಮೆಯಾಗುವ ಸಾಧ್ಯತೆ ಇದೆ.
3 ವರ್ಷದಲ್ಲಿ ಪ್ರತಿ ದಿನ 20 ಲಕ್ಷ ಮಂದಿ ಪ್ರಯಾಣ
ದಿನದಿಂದ ದಿನಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ. ಸಂಪೂರ್ಣ ನೇರಳೆ ಮಾರ್ಗ ಆರಂಭವಾದ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ ಎಂದು ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್ ಹೇಳಿದ್ದಾರೆ.
ಮುಂದಿನ ಮೂರು - ನಾಲ್ಕು ವರ್ಷಗಳು ನಮ್ಮ ಮೆಟ್ರೋಗೆ ಅತ್ಯಂತ ನಿರ್ಣಾಯಕ ಎಂದು ಅವರು ಹೇಳಿದ್ದಾರೆ. "ಹಳದಿ, ಗುಲಾಬಿ ಮತ್ತು ನೀಲಿ ಮಾರ್ಗಗಳಲ್ಲಿ ಮೆಟ್ರೋ ಸಂಚಾರ ಆರಂಭವಾದ ನಂತರ, ಮೆಟ್ರೋದಲ್ಲಿ ಜನರು ಪ್ರಯಾಣಿಸುವ ವಿಧಾನವನ್ನು ತೀವ್ರವಾಗಿ ಬದಲಾಯಿಸುತ್ತದೆ. ಈ ಎಲ್ಲಾ ಹೊಸ ಮಾರ್ಗಗಳು ತೆರೆದ ನಂತರ ದೈನಂದಿನ ಪ್ರಯಾಣಿಕರ ಸಂಖ್ಯೆ 20 ಲಕ್ಷಕ್ಕೆ ಹೆಚ್ಚಾಗುತ್ತದೆ" ಎಂದು ಹೇಳಿದರು. 2024ರಲ್ಲಿ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.












Click it and Unblock the Notifications