Aparna: ನಮ್ಮ ಮೆಟ್ರೋ ರೈಲಿನಲ್ಲಿ ಅವರ ಧ್ವನಿ ಜೀವಂತ: ಬಿಎಂಆರ್‌ಸಿಎಲ್ ಶ್ರದ್ಧಾಂಜಲಿ
ಬೆಂಗಳೂರು, ಜುಲೈ 12: ಕನ್ನಡದ ಹೆಸರಾಂತ ನಿರೂಪಕಿ, ಸ್ವಚ್ಛ ಕನ್ನಡದ ಧ್ವನಿ, ಮಜಾ ಟಾಕೀಸ್‌ನಲ್ಲಿ ಒನ್ ಆಂಡ್ ಒನ್ಲಿ ವರಲಕ್ಷ್ಮೀ ಎಂದೆ ಖ್ಯಾತವಾಗಿದ್ದ ಅಪರ್ಣಾ ವಸ್ತಾರೆ ಅವರು ಕ್ಯಾನ್ಸರ್‌ನಿಂದ ಗುರುವಾರ ನಿಧನರಾದರು. ಅವರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ನಮ್ಮ ಮೆಟ್ರೋ) ವಿಶೇಷವಾಗಿ ಶ್ರದ್ಧಾಂಜಲಿ ಸಮರ್ಪಿಸಿದೆ.
ಬೆಂಗಳೂರಿನ 73 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸೇವೆ ನೀಡುತ್ತಿರುವ 'ನಮ್ಮ ಮೆಟ್ರೋ' ರೈಲಿನಲ್ಲಿ ಕೇಳಿ ಬರುವ ''ಮಹಿಳಾ ಧ್ವನಿ'' ಇದೇ ಅಪರ್ಣಾ ಅವರದ್ದು. ಸ್ವಚ್ಛ ಸುಲಲಿತವಾಗಿ ಕನ್ನಡ ಮಾತನಾಡುವ ಅಪರ್ಣಾ ಅವರ ಧ್ವನಿಯ ಆಡಿಯೋ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರಿಗೆ ಮುಂದಿನ ನಿಲ್ದಾಣ, ಮಾರ್ಗ, ಇಂಟರ್‌ಚೇಂಜ್ ಕುರಿತು ಮಾಹಿತಿ ನೀಡುತ್ತಿದೆ.

ಇಂದು ಅಗಲಿರುವ ಅಪರ್ಣಾ ಅವರನ್ನು ನೆನೆದಿರುವ ಬಿಎಂಆರ್‌ಸಿಎಲ್, ''ಎಷ್ಟೋ ನಮ್ಮ ಮೆಟ್ರೋ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಹೆಗ್ಗಳಿಕೆ ನಿರೂಪಕಿ ಅಪರ್ಣಾ ಅವರದ್ದು. ಕನ್ನಡ ಭಾಷೆ ಮತ್ತು ಉಚ್ಚಾರಣೆಯ ಮೇಲಿನ ಆಕೆಯ ಹಿಡಿತ ಎರಡೂ ಸಮ್ಮೋಹನಗೊಳಿಸುವಂತಿತ್ತು. ನಮ್ಮ ಮೆಟ್ರೋ ರೈಲಿನಲ್ಲಿ ಆಕೆಯ ಧ್ವನಿ ಎಂದೆಂದಿಗೂ ಜೀವಂತವಾಗಿದೆ. ನಮ್ಮ ಮುಂದಿನ ಎಲ್ಲಾ ಪ್ರಯತ್ನಗಳಲ್ಲಿ ನಮ್ಮ ಮೆಟ್ರೋ ಅವಳನ್ನು ಕಳೆದುಕೊಂಡಿದೆ. ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಣ್ಣು ಮುಚ್ಚಿ ಅವರ ಸ್ಪಷ್ಟ ಕನ್ನಡದ ಸವಿ ಸವಿಯಿರಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಶ್ರದ್ಧಾಂಜಲಿ ಸಲ್ಲಿಸಿದೆ.
ನಮ್ಮ ಮೆಟ್ರೋ ಅಪರ್ಣಾ ಅವರ ಧ್ವನಿ ಆಯ್ಕೆ ಆಗಿದ್ದೇಗೆ?
ಸ್ವಚ್ಛ ಕಂಠದಲ್ಲಿ ಕನ್ನಡ ಮಾತನಾಡುವವರು, ನಿರೂಪಣೆ ಮಾಡುವವರು ಯಾರೆಂದರೆ ನೆನಪಾಗುವುದೇ ನಟಿ, ನಿರೂಪಕಿ ಅಪರ್ಣಾ ಅವರು. ಸರ್ಕಾರಿ, ಖಾಸಗಿ ಅನೇಕ ಕಾರ್ಯಕ್ರಮಗಳನ್ನು ಕನ್ನಡದಲ್ಲೇ ನಿರೂಪಣೆ ಮಾಡಿಕೊಟ್ಟ ಹೆಗ್ಗಳಿಕೆ ಅವರದ್ದು.
ಅವರ ಕನ್ನಡ ಉಚ್ಛಾರಣೆ, ಮಾತನಾಡುವ ಶೈಲಿ ಕಂಡು ನಮ್ಮ ಮೆಟ್ರೋ ಅಧಿಕಾರಿಗಳು ಸುಮಾರು ಒಂದು ದಶಕದ ಹಿಂದೆಯೇ ಅವರ ಧ್ವನಿ ಆಡಿಯೋವನ್ನು ಕೇಳಿದ್ದರು. ಆದರೆ ಇವರಿಗೆ ಆಗ ಯಾಕೆ ಎಂಬುದು ಗೊತ್ತಾಗಿರಲಿಲ್ಲ. ಆಗ ಇನ್ನೂ ಬೆಂಗಳೂರಿನಲ್ಲಿ ಮೆಟ್ರೋ ಕಾರ್ಯಾಚರಣೆ ಆರಂಭವಾಗಿಲಿಲ್ಲ. ಈ ಬಗ್ಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಸ್ವತಃ ಅಪರ್ಣಾ ಅವರೇ ಹಿಂದೊಮ್ಮೆ ಹೇಳಿಕೊಂಡಿದ್ದಾರೆ.
ಬಿಎಂಆರ್‌ಸಿಎಲ್ ಅಧಿಕಾರಿಗಳು ನನ್ನ ಧ್ವನಿ ಆಡಿಯೋ ಕೇಳಿದ್ದರು. ನಾನು ಪೇಪರ್ ಅನ್ನು ಸ್ಯಾಂಪಲ್ ಆಗಿಟ್ಟುಕೊಂಡು ಧ್ವನಿ ಕಳುಹಿಸಿದ್ದೆ. ಆಗ ಮೆಟ್ರೋ ಕಚೇರಿ ಚೆನ್ನೈನಲ್ಲಿತ್ತು. ಅಧಿಕಾರಿಗಳೆಲ್ಲರೂ ನನ್ನ ಧ್ವನಿಯನ್ನು ರೈಲಿನಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡಲು ಅಂತಿಮ ಮಾಡಿಕೊಂಡಿದ್ದರು ಎಂಬುದು ಗೊತ್ತಾಗಲೇ ಇಲ್ಲ.
ನಂತರ ಎಲ್ಲವು ಅಂತಿಮವಾಗಿ ನಮ್ಮ ಮೆಟ್ರೋ ಚೆನ್ನೈ ಕಚೇರಿಗೆ ಸಹಿ ಹಾಕಲು ಹೋದಾಗ ಬೆಂಗಳೂರಿನ ''ಬಡಾವಣೆಗಳ ಹೆಸರು, ಮುಂದಿನ ನಿಲ್ದಾಣ, ಬಾಗಿಲು ತೆರೆಯುತ್ತವೆ'' ಎಂದೆಲ್ಲ ಸ್ಕ್ರಿಪ್ಟ್ ರೆಡಿ ಇತ್ತು. ಅದೆಲ್ಲವನ್ನು ಅವರ ಸೂಚನೆಯಂತೆ ಓದಿ ಮಾಡಿಕೊಟ್ಟು ಬಂದೆ.
ನಂತರ ಬೈಯಪ್ಪನಹಳ್ಳಿ- ಎಂಜಿ ರಸ್ತೆಗೆ ಮೆಟ್ರೋ ಆರಂಭವಾಯಿತು. ಅದಾಗಿ ಎಷ್ಟೋ ದಿವಸಗಳ ನಂತರ ನಾನೇ ನನ್ನ ಧ್ವನಿ ಕೇಳಲು ಮೆಟ್ರೋದಲ್ಲಿ ಸಂಚರಿಸಿದ್ದೆ ಎಂದು ತಮ್ಮ ಧ್ವನಿ ಆಯ್ಕೆ ಕುರಿತು ಅಪರ್ಣಾ ಅವರು ಮಾತನಾಡಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.
ನಟಿ ಅಪರ್ಣಾ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರು ಗುರುವಾರ ಬೆಂಗಳೂರಿನಲ್ಲಿ ನಿಧನರಾದರು. ರಾಜ್ಯ ಸರ್ಕಾರ ಪೊಲೀಸ್ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿಸಲು ಸೂಚನೆ ನೀಡಿದೆ.












Click it and Unblock the Notifications