Namma Metro: ನೀಲಿ ಮಾರ್ಗ ವಿದ್ಯುದೀಕರಣ ಹಂತಕ್ಕೆ, ₹766 ಕೋಟಿ ಗುತ್ತಿಗೆಗೆ ಅಸ್ತು, ಅಪ್ಡೇಟ್ ಇಲ್ಲಿದೆ
ಬೆಂಗಳೂರು, ಜುಲೈ 12: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವತಿಯಿಂದ ನಗರದಲ್ಲಿ ನಡೆಯುತ್ತಿರುವ ಹೊಸ ಮೆಟ್ರೋ ಮಾರ್ಗಗಳ ಪೈಕಿ 'ನೀಲಿ ಮಾರ್ಗ'ವು (Namma Metro Blue Line)ಅತೀ ವೇಗವಾಗಿ ನಡೆಯುತ್ತಿರುವ ಕಾಮಗಾರಿಗಳ ಪೈಕಿ ಪ್ರಮುಖವಾಗಿದೆ. ನೋಡ ನೋಡುತ್ತಲೇ ಈ ಮಾರ್ಗ ಕೆಲಸ ಮುಗಿಯಿತೇ ವಿದ್ಯುದೀಕರಣ ಹಂತಕ್ಕೆ ತಲುಪಿತೆ ಎಂಬ ಪ್ರಶ್ನೆ ಮೂಡಿದೆ.
ಹೌದು, ನಮ್ಮ ಮೆಟ್ರೋ ನೀಲಿ ಮಾರ್ಗದ ನಿರ್ಮಾಣ ಕೆಲಸ ಭರದಿಂದ ಸಾಗಿದೆ. ಇದೀಗ BMRCL ಈ ಮಾರ್ಗದ ವಿದ್ಯುದೀಕರಣಕ್ಕೆ ಆಹ್ವಾನಿಸಿದ್ದ ಗುತ್ತಿಗೆಯು ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (ಆರ್‌ವಿಎನ್‌ಎಲ್) ಸಹಭಾಗಿತ್ವದ ಜರ್ಮನಿಯ ಬಹುರಾಷ್ಟ್ರೀಯ ಸೀಮೆನ್ಸ್ ಲಿಮಿಟೆಡ್ ಕಂಪನಿಗೆ ಪಾಲಾಗಿದೆ.

ಸಿಲ್ಕ ಬೋರ್ಡ್‌ನಿಂದ ಕೆ.ಆರ್ ಪುರಂ ಮಾರ್ಗವಾಗಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ವರೆಗಿನ ನೀಲಿ ಮಾರ್ಗದಲ್ಲಿ ವಿದ್ಯುದೀಕರಣ ಮಾಡಲು ರೂ.766 ಕೋಟಿ ಗೆ ಗುತ್ತಿಗೆ ಅಂತಿಮಗೊಂಡಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಮಾಹಿತಿ ನೀಡಿವೆ.
2026ರ ಜೂನ್‌ನಲ್ಲಿ ನೀಲಿ ಮಾರ್ಗ ಓಪನ್
ನಮ್ಮ ಮೆಟ್ರೋ ಹಂತ 2ಎ, 2ಬಿ ಅಡಿಯಲ್ಲಿ ನೀಲಿ ಮಾರ್ಗದ ವಿದ್ಯುದ್ದೀಕರಣಕ್ಕೆ ಮಾಡಿಕೊಂಡ ಒಪ್ಪಂದ ಇದಾಗಿದೆ. ನೀಲಿ ಮಾರ್ಗವು 58.19 ಕಿಮೀ ಬೃಹತ್ ಉದ್ದದ ಮಾರ್ಗವಾಗಿದೆ. ಕೆಆರ್ ಪುರದ ಮೂಲಕ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಒಟ್ಟು 30 ಎತ್ತರದ ನಿಲ್ದಾಣ ಸ್ಥಾಪನೆ ಆಗುತ್ತಿವೆ. ಸಿವಿಲ್ ಕೆಲಸ ನಡೆದಿದೆ. ಇದೆಲ್ಲ ಕಾಮಗಾರಿ ಪೂರ್ಣಗೊಂಡು ಈ ಮಾರ್ಗದಲ್ಲಿ 2026ರ ಜೂನ್ ತಿಂಗಳಲ್ಲಿ ಮೆಟ್ರೋ ವಾಣಿಜ್ಯ ಕಾರ್ಯಚರಣೆ ನಿರೀಕ್ಷೆ ಇದೆ.
ಈ ಯೋಜನೆಯು ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್‌ವರೆಗೆ ಸಂಪರ್ಕಿಸಲಿದೆ. ಈ ಏರ್‌ಪೋರ್ಟ್‌ನಲ್ಲಿ ನೀಲಿ ಮಾರ್ಗದ ಕೊನೆಯ ಮೆಟ್ರೋ ನಿಲ್ದಾಣ ನಿರ್ಮಾಣವಾಗಲಿದೆ. ಇಲ್ಲಿ ವಿಶೇಷ ಹಾಗೂ ಬೃಹತ್ ಮೆಟ್ರೋ ನಿಲ್ದಾಣ ಇದಾಗಿರಲಿದೆ.

ದೇಶದ 11 ನಗರಗಳಲ್ಲಿ ಸೀಮೆನ್ಸ್ ಕಂಪನಿ ಕಾರ್ಯ
ಬಹುಕೋಟಿ ವೆಚ್ಚದಲ್ಲಿ ಈ ನೀಲಿ ಮಾರ್ಗದಲ್ಲಿ 'ಸೀಮೆನ್ಸ್ ಲಿಮಿಟೆಡ್' ರೈಲು ವಿದ್ಯುದೀಕರಣ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸಲಿದೆ. ಈ ಕಂಪನಿಯೇ ವಿದ್ಯುತ್ ಪೂರೈಕೆ ವ್ಯವಸ್ಥೆ, ಇಂಜಿನಿಯರಿಂಗ್, ಮೇಲ್ವಿಚಾರಣಾ ನಿಯಂತ್ರಣ ಮತ್ತು ಡೇಟಾ ಸ್ವಾಧೀನ (SCADA) ವ್ಯವಸ್ಥೆಗಳನ್ನು ಒಳಗೊಂಡಿರುವ ಡಿಜಿಟಲ್ ಪರಿಹಾರ ಒದಗಿಸಲಿದೆ.
ಸದ್ಯ ಈ ಸೀಮೆನ್ಸ್ ಕಂಪನಿಯು ದೇಶದ ಮೆಟ್ರೋ ಹೊಂದಿರುವ 20 ನಗರಗಳಲ್ಲಿ 11 ನಗರಗಳಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಬೆಂಗಳೂರಿನ ಸುಸ್ಥಿರ ನಗರಾಭಿವೃದ್ಧಿಗೆ ಗಣನೀಯವಾಗಿ ಕೊಡುಗೆ ನೀಡಲಿದೆ. ಪ್ರಯಾಣಿಕರು ಮತ್ತು ಮೆಟ್ರೋ ರೈಲು ಅಧಿಕಾರಿಗಳ ಅಗತ್ಯತೆಗಳನ್ನು ಪೂರೈಸಲಿದ್ದೇವೆ ಎಂದು ಈ ಕಂಪನಿ ವ್ಯವಹಾರಿಕ ಮುಖ್ಯಸ್ಥ ಗುಂಜನ್ ವಖಾರಿಯಾ ಅವರು ತಿಳಿಸಿದ್ದಾರೆ.












Click it and Unblock the Notifications